ಟಿಬಿ ಡ್ಯಾಂ ಕ್ರಸ್ಟ್ ಗೇಟ್ ಪ್ರಕರಣ ನ್ಯಾಯಾಂಗ ತನಿಖೆಗೆ ಆಗ್ರಹ; ಸಚಿವ ಡಿ.ಕೆ ಶಿವಕುಮಾರ್ ರಾಜೀನಾಮೆಗೆ ಒತ್ತಾಯ
ರಾಯಚೂರು, ಆ.೧೩- ತುಂಗಭದ್ರಾ ಜಲಾಶಯದ ೧೯ನೇ ಕ್ರಸ್ಟ್ ಗೇಟ್ ತುಂಡಾದ ಘಟನೆಯನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಕಳೆದ ಹತ್ತು ವರ್ಷಗಳಿಂದ ಗೇಟ್ ನಿರ್ವಹಣೆಗೆ ಸರ್ಕಾರ ಬಿಡುಗಡೆ ಮಾಡಿದ ಹಣದ ಪ್ರಮಾಣ ಬಹಿರಂಗ ಪಡಿಸಬೇಕು ಈ ಘಟನೆಯ ನೇರ ಹೊಣೆಒತ್ತು ಉಪಮುಖ್ಯಮಂತ್ರಿ ಹಾಗೂ ಬೃಹತ್ ನೀರವರಿ ಸಚಿವ ಡಿ.ಕೆ ಶಿವಕುಮಾರ್ ರಾಜೀನಾಮೆ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಧ್ಯಕ್ಷ ಚಾಮರಾಜ ಮಾಲಿಪಾಟೀಲ್ ಆಗ್ರಹಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ತುಂಗಭದ್ರಾ ಎಡದಂಡೆ ನಾಲೆ ಮತ್ತು ನಾರಾಯಣಪೂರ ಬಲದಂಡೆ ನಾಲೆ ವ್ಯಾಪ್ತಿಯಲ್ಲಿ ಅನೇಕ ಸಮಸ್ಯೆಗಳು ಇರುತ್ತವೆ. ನೀರಿನ ನಿರ್ವಹಣೆ, ಇಂಜಿನಿಯರ್‌ಗಳ ಕೊರತೆ, ಹೂಳಿನ ಸಮಸ್ಯೆ, ಅನಧೀಕೃತ ನೀರಾವರಿಯಿಂದ ಮಾನವಿ, ಶಿರವಾರ, ರಾಯಚೂರು ತಾಲೂಕಗಳಿಗೆ ನೀರು ತಲುಪದೇ ಇರುವುದು, ಸಮಾನಾಂತರ ಜಲಾಶಯ ನಿರ್ವಹಣೆ ಬಗ್ಗೆ ಈ ಎಲ್ಲಾ ಸಮಸ್ಯೆಗಳನ್ನು ಚರ್ಚಿಸಲು ಈ ಭಾಗದ ಸಂಸದರು, ಶಾಸಕರು, ಜಲಸಂಪನ್ಮೂಲ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ರಾಜ್ಯ ರೈತ ಸಂಘದ ಪ್ರತಿನಿಧಿಗಳ ಸಭೆ ಕರೆಯಬೇಕು ಎಂದು ಜುಲೈ ೧೭ ೨೦೨೩ ರಂದು ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿತ್ತು.ಆದರೆ ನಮ್ಮ ಮನವಿಗೆ ಸ್ಪಂದಿಸಲೇ ಇಲ್ಲ. ತುಂಗಭದ್ರಾ ಜಲಾಶಯ ನಿರ್ವಹಣೆ ಮಾಡುವಲ್ಲಿ ಬೇಜವಾಬ್ದಾರಿ ವಹಿಸಿದ್ದರಿಂದಲೇ ಈ ಘಟನೆ ಜರುಗಿದೆ ಎಂದು ಆರೋಪಿಸಿದರು.
ಸರಕಾರ ಕೇವಲ ಗ್ಯಾರಂಟಿಗಳಿಗೆ ಅನುದಾನ ಮೀಸಲಿಟ್ಟಿದೆ ಹೊರತು ನೀರಾವರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು ಭರ್ತಿ ಮಾಡಲು ಆಗುತ್ತಿಲ್ಲ.
ಈ ಘಟನೆಯಿಂದ ೧೦ ಲಕ್ಷ ಎಕರೆಗೆ ನಷ್ಟವಾದರೆ ೧೦ ಸಾವಿರ ಕೋಟಿ ನಷ್ಟವಾಗುತ್ತೆ ಎಂದರು.
ಈ ಘಟನೆ ನಡೆದಾಗ ಸಚಿವ ಡಿಕೆ ಶಿವಕುಮಾರ್ ಅವರು ಮುನಿರಾಬಾದ್ ನಲ್ಲಿ ವಾಸ್ತವ್ಯ ಹೂಡಬೇಕಾಗಿತ್ತು.ಆದರೆ ಸಚಿವರು ಅ ಕೆಲಸ ಕೆಲಸ ಮಾಡದೇ ಕೇವಲ ಕಾಟಾಚಾರಕ್ಕೆ ಬಂದು ವೀಕ್ಷಣೆ ಮಾಡಿ ಹೋಗಿದ್ದಾರೆ ಎಂದ ಆಕ್ರೋಶ ವ್ಯಕ್ತಪಡಿಸಿದ ಅವರು, ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ ಜಿಲ್ಲೆಗಳ ರೈತರೊಂದಿಗೆ ಮುಖ್ಯ ಇಂಜಿನಿಯರ್ ಕಚೇರಿ ಮುಂದೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳುತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದೇವರಾಜ ನಾಯಕ, ಪ್ರಭಾಕರ್ ಪಾಟೀಲ್, ಜಾನ್ ವೆಸ್ಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.