ಅನುದಾನ ದುರ್ಬಳಕೆ,ತನಿಖೆಗೆ ಆಗ್ರಹ
ರಾಯಚೂರು,ಆ.೧೩- ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಅಮೃತ ಆರೋಗ್ಯ ಮೂಲ ಸೌಕರ್ಯಗಳ ಉನ್ನತೀಕರಣ ಯೋಜನೆ ಅಡಿಯಲ್ಲಿ ಬಿಡುಗಡೆಯಾದ ಅನುದಾನ ದುರ್ಬಳಕೆ ಆಗಿದ್ದು,ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಮೌನೇಶ ದಿದ್ದಿಗಿ ಆಗ್ರಹಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಿಂಧನೂರು ತಾಲೂಕಿನಲ್ಲಿ ರಾಗಲಪರ್ವಿ ಮತ್ತು ಗಾಂಧಿನಗರ ಮಸ್ಕಿ ತಾಲೂಕಿನ ಬಳಗಾನೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನವೀಕರಣ ಹಾಗೂ ಕಟ್ಟಡ ದುರಸ್ಥಿ ಮಾಡಲು ಒಂದು ಆರೋಗ್ಯ ಕೇಂದ್ರಕ್ಕೆ ಸುಮಾರು ರೂ. ೨೦ ಲಕ್ಷ ಹಣ ಬಿಡುಗಡೆಯಾದೆ. ಆದರೆ ಸಂಬಂಧಪಟ್ಟ ಗುತ್ತೇದಾರರು ಕಾಮಗಾರಿಗಳನ್ನು ಮಾಡದೆ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಈ ಕೇಂದ್ರಗಳಲ್ಲಿ ಯಾವುದೇ ರೀತಿಯ ಕಾಮಗಾರಿ ಮಾಡದೆ, ಸಂಬಂಧಪಟ್ಟ ವೈದ್ಯಾಧಿಕಾರಿಗಳು, ಗುತ್ತೇದಾರರು, ಜೂನಿಯರ್ ಇಂಜನೀರರು ಸೇರಿಕೊಂಡು ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಆದುದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಕೇಂದ್ರಗಳಿಗೆ ಭೇಟಿಕೊಟ್ಟು ಕಾಮಗಾರಿಗಳನ್ನು ವೀಕ್ಷಣೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಿ, ಸರ್ಕಾರ ಬಿಡುಗಡೆಗೊಳಿಸಿದ ಅನುದಾನವನ್ನು ದುರ್ಬಳಕೆ ಮಾಡಿಕೊಂಡ ಅಧಿಕಾರಿಗಳಿಂದ ಪುನಃ ವಾಪಸ್ ಭರಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಲಿಂಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.