ಟಿಬಿ ಡ್ಯಾಂ ಗೇಟ್ ಕಟ್ ರೈತರಲ್ಲಿ ನಿರಾಸೆ
ರಾಯಚೂರು.ಆ೧೩:ತುಂಗಭದ್ರಾ ಜಲಾಶಯ ಭರ್ತಿಯಾಗಿರುವ ಸಮಯದಲ್ಲಿ ಕ್ರಸ್ಟ್ ಗೇಟ್ ನದಿಪಾಲಾಗಿ ನದಿಪಾತ್ರದಲ್ಲಿ ಆತಂಕವನ್ನು ಅಚ್ಚುಕಟ್ಟು ಪ್ರದೇಶದಲ್ಲಿ ಒಂದು ನಿರಾಸೆ ಮೂಡಿಸಿದೆ ಎಂದು ಎಪಿಎಂಸಿ ಮಾಜಿ ಉಪಾಧ್ಯಕ್ಷ ಡಾ. ಬಾಬುರಾವ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಈ ಅವಘಡ ಸಂಭವಿಸಲು ಕಲ್ಯಾಣ ಕರ್ನಾಟಕದ ೨೨ ಜನಪ್ರತಿನಿಧಿಗಳ ಬೇಜವಾಬ್ದಾರಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
೭೦ ವರ್ಷದಷ್ಟು ಹಳೆಯದಾದ ಜಲಾಶಯದ ನಿರ್ವಹಣೆಯಲ್ಲಿ ಆಂಧ್ರ ಪ್ರದೇಶದ ಮೇಲ್ವಿಚಾರಣೆಯಲ್ಲಿ ಇರುವ ೦_೧೬ ಗೇಟ್ ಗಳಂತೆ ರಾಜ್ಯ ಸರ್ಕಾರದ ಮೇಲ್ವಿಚಾರಣೆಯಲ್ಲಿ ಉಳಿದ ಗೇಟ್ ಗಳ ಸುರಕ್ಷತೆ ಬಗ್ಗೆ ನಿಗಾವಹಿಸಬೇಕಿತ್ತು. ಆಗ ರೈತರಿಗೆ ಈಗ ಬಂದಿರುವ ಕುತ್ತು ದೂರ ಮಾಡಬಹುದಾಗಿತ್ತು ಎಂದು ಹೇಳಿದ್ದಾರೆ.
ಈ ವಿಚಾರದಲ್ಲಿ ಬೃಹತ್ ನೀರಾವರಿ ಸಚಿವ ಡಿ.ಕೆ.ಶಿವಕುಮಾರ ಸ್ಪಷ್ಟನೆ ಜವಾಬ್ದಾರಿಯಿಂದ ನುಣುಚಿಕೊಳ್ಳುವ ತರಹ ಇದೆ. ಇದನ್ನು ಒಪ್ಪಲು ಸಾಧ್ಯವಿಲ್ಲ . ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಕರ್ನಾಟಕ, ಆಂಧ್ರ, ತೆಲಂಗಾಣದ ೩೦ ಲಕ್ಷ ಹೆಕ್ಟೇರ್ ಪ್ರದೇಶದ ರೈತರ ಹಿತ ಕಾಪಾಡಲು ಮುಂದಾಗಬೇಕು. ರಾಜ್ಯದ ರೈತರ ಬೆಳೆಗಳಿಗೆ ನೀರು ಕೊಡಲು ವಿಫಲವಾದಲ್ಲಿ ಹೆಕ್ಟೇರ್ ಗೆ ೫೦ ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ
ಆದಷ್ಟು ಜಲಾಶಯದ ಹಿನ್ನೀರು ಉಳಿಸಿಕೊಂಡು ಶೀಘ್ರದಲ್ಲೇ ಗೇಟ್ ದುರಸ್ತಿ ಮಾಡಿ ರೈತ ವಲಯದಲ್ಲಿ ಕವಿದಿರುವ ಕಾರ್ಮೇಡ ದೂರ ಮಾಡಬೇಕೆಂದು ಆಗ್ರಹಿಸಿದ್ದಾರೆ.