ಗ್ರಾಹಕರ ಹಿತ ಕಾಯುವುದೇ ಸಹಕಾರಿಯ ಆದ್ಯ ಕರ್ತವ್ಯವಾಗಬೇಕು: ರಾಘವ ಅಣ್ಣಿಗೇರಿ
ಸಂಜೆವಾಣಿ ವಾರ್ತೆ,
ವಿಜಯಪುರ,ಅ.೧:ಅನೇಕ ರಾಷ್ಟ್ರೀಕೃತ, ಖಾಸಗಿ ಬ್ಯಾಂಕುಗಳ ಮಧ್ಯದಲ್ಲಿಯೂ ಕೂಡ ಜನತೆ ಸೌಹಾರ್ದ ಸಹಕಾರಿಗಳಲ್ಲಿ ಹೆಚ್ಚಿನ ವ್ಯವಹಾರಗಳನ್ನು ಮಾಡುತ್ತಿದ್ದು ಸಹಕಾರಿಗಳ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಸಿದ್ದಸಿರಿ ಸೌಹಾರ್ದ ಸಹಕಾರಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣಿಗೇರಿ ಹೇಳಿದರು.
ನಗರದ ಸಜ್ಜನ ಸಿರಿ ಸೌಹಾರ್ದ ಸಹಕಾರಿ ಅಧ್ಯಕ್ಷ ವಿವೇಕ ಸಜ್ಜನ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ೬೫೦೦ ವಿವಿಧ ಸೌಹಾರ್ದ ಸಹಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಜನತೆಯ ವಿಶ್ವಾಸ ಗಳಿಸುವುದರೊಂದಿಗೆ ಗ್ರಾಹಕ ಸ್ನೇಹಿಯಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಜನತೆಯ ವಿಶ್ವಾಸಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುವ ಜವಾಬ್ದಾರಿ ಎಲ್ಲ ಸಹಕಾರಿಗಳ ಮೇಲಿದೆ, ಸಜ್ಜನಸಿರಿ ಸೌಹಾರ್ದ ಸಹಕಾರಿಯ ಆಡಳಿತ ಮಂಡಳಿಯವರು ಒಟ್ಟಾಗಿ ಸೇರಿಕೊಂಡು ವಿವೇಕ ಸಜ್ಜನ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸಜ್ಜನಸಿರಿ ಸೌಹಾರ್ದ ಸಹಕಾರಿಯ ನೂತನ ಅಧ್ಯಕ್ಷ ವಿವೇಕ ಸಜ್ಜನ ಹಾಗೂ ಅವರ ಪತ್ನಿ ನಾಗವೇಣಿ ಸಜ್ಜನ ಅವರನ್ನು ಸ್ವಾಮಿ ವಿವೇಕಾನಂದ ಸೇನೆಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿವೇಕ ಸಜ್ಜನ ಅವರು, ಒಂದು ಸೌಹಾರ್ದವು ಪ್ರಗತಿ ಹೊಂದಬೇಕಾದರೆ ಪಾರದರ್ಶಕತೆ, ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಕಾರ್ಯ ಮಾಡುವುದರ ಜೊತೆಗೆ ಆಡಳಿತ ಮಂಡಳಿಯ ಸದಸ್ಯರು ಹಾಗೂ ಷೇರುದಾರರ ಅಭಿಪ್ರಾಯವನ್ನು ಆಲಿಸಿ ಒಟ್ಟಾಗಿ ಮುನ್ನಡೆದಾಗ ಮಾತ್ರ ಪ್ರಗತಿ ಹೊಂದಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿದ್ದಸಿರಿ ಸೌಹಾರ್ದ ಸಹಕಾರಿಯ ಜನರಲ್ ಮ್ಯಾನೇಜರ ದೇವಿ ಹಿರೇಮಠ, ವಲಯ ಅಧಿಕಾರಿ ಈಶ್ವರ ಮುಂಜಣ್ಣಿ, ವ್ಯಾಪಾರಸ್ಥರಾದ ಮಂಜುನಾಥ ಹಿರೇಮಠ, ರಚನಾ ಅಣ್ಣಿಗೇರಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.