ಎಸ್‌ಎನ್‌ಆರ್ ಆಸ್ಪತ್ರೆಗೆ ಉಪಲೋಕಾಯುಕ್ತರ ಭೇಟಿ, ಸಿಬ್ಬಂದಿಗೆ ತರಾಟೆ
ಕೋಲಾರ, ಅ.೧- ನಗರದ ನಚಿಕೇತನ ನಿಲಯ ಹಾಗೂ ಎಸ್‌ಎನ್‌ಆರ್ ಆಸ್ಪತ್ರೆಗೆ ಭಾನುವಾರ ದಿಢೀರ್ ಭೇಟಿ ನೀಡಿ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಅವ್ಯವಸ್ಥೆಗಳನ್ನು ಕಂಡು ಕೆಂಡಾಮಂಡಲಾದರು.
ನಚಿಗೇತನ ನಿಲಯದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ, ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಸ್ವಚ್ಚತೆ, ವೈದ್ಯರ ಗೈರು, ಸಿಬ್ಬಂದಿ ಗೈರು, ಔಷದಿ ಕೊರತೆ, ಹೊರಗಡೆಗೆ ಚೀಟಿ ಬರೆದು ಕೊಡುವುದು ಹೀಗೆ ಹಲವು ಸಮಸ್ಯೆಗಳು ಬೆಳಕಿಗೆ ಬಂದಿತು.
ನಚಿಕೇತನ ನಿಲಯಕ್ಕೆ ಭೇಟಿ ನೀಡುತ್ತಿದ್ದಂತೆ ವಿದ್ಯಾರ್ಥಿಗಳ ವಸತಿ ಕೊಠಡಿಗಳನ್ನು ವೀಸಿದರು, ಅಲ್ಲಿ ಸೊಳ್ಳೆ ಪರದೆ ನೀಡದೆ ಇರುವುದು, ಬೆಳಕಿನ ವ್ಯವಸ್ಥೆ, ಕಾಟ್ ವ್ಯವಸ್ಥೆ ಇರಲಿಲ್ಲ. ಜತೆಗೆ ಮಕ್ಕಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು. ಮಕ್ಕಳು ಜನರೇಟರ್ ಕೆಟ್ಟು ಹೋಗಿದೆ, ವಿದ್ಯುತ್ ಕಡಿತವಾದರೆ ಕತ್ತಲಲ್ಲಿ ಇರಬೇಕು, ಭಯವಾಗುತ್ತದೆ ಎಂದು ಅಳಲು ತೋಡಿಕೊಂಡರು. ಇದಕ್ಕೆ ಗರಂ ಆದ ಉಪ ಲೋಕಾಯುಕ್ತ ವೀರಪ್ಪ ಅವರು ವಾರ್ಡನ್ ವೆಂಕಟಗಿರಿಯನನ್ನು ಏನಿದು ವ್ಯವಸ್ಥೆ ಎಂದು ಪ್ರಶ್ನಿಸಿದರು. ಮೆಕಾನಿಕ್‌ಗೆ ಹೇಳಲಾಗಿದ್ದು ನಾಳೆ ಸಂಜೆ ಬಂದು ಸರಿಪಡಿಸುವುದಾಗಿ ಹೇಳಿದ್ದಾನೆ ಎಂದು ಸಮಜಾಯಿಷಿ ನೀಡಿದರು.
ನಂತರ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಚನ್ನಬಸಪ್ಪಗೆ ದೂರವಾಣಿ ಕರೆ ಮಾಡಿ ಜನರೇಟರ್ ಕೆಟ್ಟು ಹೋಗಿದೆ, ಏನು ಮಾಡುತ್ತಿದ್ದೀರ. ನಿಮ್ಮ ಮನೆ ಮಕ್ಕಳಾದರೆ ಹೀಗೆ ಮಾಡುತ್ತೀರ ಎಂದು ತರಾಟೆಗೆ ತೆಗೆದುಕೊಂಡು ಒಂದು ದಿನದಲ್ಲಿ ಅದು ಸರಿ ಹೋಗಬೇಕು ಎಂದು ತಾಕೀತು ಮಾಡಿದರು.
ಎಸ್‌ಎನ್‌ಆರ್ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಂತೆ ಡಿಎಸ್ ಕಚೇರಿಗೆ ತೆರಳಿ ಹಾಜರಾತಿ ಪುಸ್ತಕ ಪರಿಶೀಲಿಸಿದರು, ಅದರಲ್ಲಿ ೪೦ ಮಂದಿ ವೈದ್ಯರ ಪೈಕಿ ಕೇವಲ ನಾಲ್ಕೈದು ಮಂದಿ ಮಾತ್ರ ಹಾಜರಾತಿ ಹಾಕಿದ್ದರು, ಉಳಿದವರು ಗೈರು ಆಗಿದ್ದು, ಮತ್ತೊಬ್ಬ ವೈದ್ಯ ಮುಂಗಡವಾಗಿ ಸಿಎಲ್ ಹಾಜರಾತಿ ಬರೆದಿದ್ದರು. ಇದರಿಂದ ಇಲ್ಲಿ ಡಿಎಸ್, ಡಿಎಸ್ ಎಲ್ಲಿ ಎಂದು ಪ್ರಶ್ನಿಸಿದಾಗ, ಮ್ಯಾಟ್ರಿನ್ ವಿಜಯಮ್ಮ ಎಲ್ಲರೂ ಬಂದಿದ್ದರು, ಎಲ್ಲಿಗೊ ಹೋಗಿದ್ದಾರೆ ಎಂದು ಸಮರ್ಥಿಸಿಕೊಳ್ಳಲು ಮುಂದಾದರು.ಇದಕ್ಕೆ ಗರಂ ಆದ ವೀರಪ್ಪ ಅವರು, ಇದು ಸರಕಾರಿ ಸಂಸ್ಥೆ ಕೇವಲ ಸಂಬಳಕ್ಕಾಗಿ ಬಂದು ಹೋದರೆ ಸಾಲದು, ಸೇವೆ ಮಾಡಬೇಕು. ಭಾನುವಾರ ಆದರೆ ರೋಗಿಗಳು ಬರುವುದಿಲ್ಲವೆ?, ಹೊರ ರೋಗಿಗಳು ಸಮಸ್ಯೆ ಆಗುವುದಿಲ್ಲ ಎಂದು ಇದರ ಪರಿಣಾಮ ಎದುರಿಸಲಿ ಎಂದು ಎಚ್ಚರಿಕೆ ನೀಡಿದರು.
ಆನಂತರ ಔಷದಿ ದಾಸ್ತಾನು ಕೊಠಡಿ, ಜನರಿಕ್, ಪುರಷ, ಮಹಿಳಾ ವಾರ್ಡ್, ಮಕ್ಕಳ ಮತ್ತು ಮಹಿಳಾ ಆಸ್ಪತ್ರೆಯ ಮಕ್ಕಳ ವಾರ್ಡ್, ತುರ್ತು ಚಿಕಿತ್ಸಾ ವಿಭಾಗಕ್ಕೆ ಭೇಟಿ ನೀಡಿದರು, ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳನ್ನು ಮಾತನಾಡಿಸಿದಾಗ, ಕೆಲ ವೈದ್ಯರು ಔಷದಿಯನ್ನು ಹೊರಗಿನಿಂದ ತರುವಂತೆ ಸೂಚಿಸುತ್ತಾರೆ ಎಂದು ಗಮನಕ್ಕೆ ತಂದರು.
ಬೇತಮಂಗಲ ಚಿನ್ನಪ್ಪ ಎಂಬುವರು ಗಾಯಗೊಂಡಿದ್ದು ಚಿಕಿತ್ಸೆಗಾಗಿ ದಾಖಲಾಗಿ ಐದು ದಿನಗಳಾಗಿವೆ. ಆದರೆ ಡಾ.ಮಂಜುನಾಥ್ ಎಂಬುವರು ಬಲವಂತವಾಗಿ ಹೊರ ಹೋಗಿ ಎಂದು ಒತ್ತಾಯ ಮಾಡುತ್ತಿದ್ದಾರೆ ಎಂದು ಗಮನಕ್ಕೆ ತಂದರು.ಈ ವೇಳೆ ವೈದ್ಯ ಡಾ.ಮಂಜುನಾಥ್ ಎಂಬುವರಿಗೆ ದೂರವಾಣಿ ಕರೆ ಮಾಡಿ ಆಸ್ಪತ್ರೆಗೆ ಬರುವಂತೆ ತಿಳಿಸಿದಾಗ ಬರುವುದಿಲ್ಲ ಎಂದು ಲೋಕಾಯುಕ್ತ ಪೊಲೀಸರಿಗೆ ತಿಳಿಸಿದರು.
ಇದರಿಂದ ಗರಂ ಆದ ವೀರಪ್ಪ ಅವರು ಇಲ್ಲಿ ಡಿಎಸ್, ಡಿಎಚ್‌ಒ ಸಹ ಬರುವುದಿಲ್ಲ. ಇರುವ ವೈದ್ಯರು ಸರಿಯಾಗಿ ಕೆಲಸ ಮಾಡಿಲ್ಲ. ಇದಕ್ಕೆಲ್ಲ ಹೊಣೆ ಯಾರು ಎಂದು ತರಾಟೆಗೆ ತೆಗೆದುಕೊಂಡರು.
ಮಕ್ಕಳ ತೀವ್ರ ನಿಗಾ ಘಟಕಕ್ಕೆ ಭೇಟಿ ನೀಡಿದಾಗ ವೈದ್ಯರು ಮೊಬೈಲ್ನಲ್ಲಿ ಕಾಲಹರಣ ಮಾಡುತ್ತಿದ್ದರು, ಇದನ್ನು ಗಮನಿಸಿದ ವೀರಪ್ಪ ಅವರು, ನೀವು ಇನ್ನು ಯುವ ವಯಸ್ಸು ಬಹಳಷ್ಟು ಸೇವೆ ಮಾಡಬೇಕಾಗಿದೆ, ಮೊಬೈಲ್ ನೋಡಿಕೊಂಡು ಕುಳಿತರೆ ಏನು ಪ್ರಯೋಜನ ಎಂದು ಕಿವಿಮಾತು ಹೇಳಿ, ಹಲವು ದಾಖಲೆಗಳನ್ನು ಪರಿಶೀಲಿಸಿ, ಗರ್ಭಪಾತ ಮಾಡದಂತೆ ಎಚ್ಚರಿಕೆ ನೀಡಿದರು.
ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಲೋಕಾಯುಕ್ತ ಬಿ.ವೀರಪ್ಪ, ಶ್ರೀನಿವಾಸಪುರ, ಎಸ್ಸೆನ್ನಾರ್ ಆಸ್ಪತ್ರೆಗೆ ಎಂದರೆ ಅದಕ್ಕೊಂದು ಇತಿಹಾಸ ಇತ್ತು, ಆದರೆ ಈಗ ಹದಗೆಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶ್ರೀನಿವಾಸಪುರ ಡಿಗ್ರಿ ಕಾಲೇಜು ಹಾಸ್ಟೆಲ್, ನಚಿಕೇತನ ವಿದ್ಯಾರ್ಥಿನಿಲಯಕ್ಕೂ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಲಾಗಿದ್ದು, ವಿದ್ಯಾರ್ಥಿಗಳು ಸಮಸ್ಯೆಗಳ ಬಗ್ಗೆ ದೂರು ನೀಡಿದ್ದಾರೆ. ಈ ಬಗ್ಗೆ ವರದಿ ತಯಾರಿಸಿ ವ್ಯವಸ್ಥೆಯನ್ನು ಸರಿಪಡಿಸಲು ಸರಕಾರಕ್ಕೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ನನ್ನ ತಮ್ಮನಿಗೆ ಆರೋಗ್ಯ ಸಮಸ್ಯೆಯಾಗಿದ್ದಾಗ ಇಟಿಸಿಎಂಗೆ ದಾಖಲಿಸಲಾಗಿತ್ತು, ಅಲ್ಲಿ ಆಗದ ಕಾರಣ ಎಸ್ಸೆನ್ನಾರ್‍ಗೆ ಕರೆದುಕೊಂಡು ಬಂದೆವು, ಇಲ್ಲಿ ವಾಸಿ ಆಯಿತು, ಇಂತಹ ಆಸ್ಪತ್ರೆಯ ಪರಿಸ್ಥಿತಿ ಇಂದು ನೋಡುತ್ತಿದ್ದರೆ ಬೇಸರವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.