ಶ್ರೀ ಕ್ಷೇತ್ರ ಕೈವಾರಕ್ಕೆ ಪ್ರಥಮ ಬಾರಿ ಪಾದಯಾತ್ರೆ
ವಿಜಯಪುರ, ಅ.೧- ಪಟ್ಟಣದ ಶ್ರೀ ಆಂಜನೇಯ ಸ್ವಾಮಿ ಪಾದಯಾತ್ರ ಭಕ್ತಾದಿಗಳ ಬಳಗದ ವತಿಯಿಂದ ಶ್ರೀ ಕ್ಷೇತ್ರ ಕೈವಾರಕ್ಕೆ ಪ್ರಥಮ ಬಾರಿಗೆ ಪಾದಯಾತ್ರೆಯನ್ನು ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಿಂದ ಭಾದ್ರಪದ ಮಾಸದ ಕೊನೆಯ ಶನಿವಾರದ ಇಂದು ಪ್ರಾರಂಭಿಸಲಾಯಿತು.
ಪಟ್ಟಣದ ಎಲ್ಲಾ ದೇವಾಲಯಗಳ ಭಜನಾ ಮಂಡಳಿಗಳವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ಶ್ರೀ ಕೈವಾರ ತಾತಯ್ಯನವರ ಸಂಕೀರ್ತನೆಗಳನ್ನು ಹಾಡುತ್ತಾ ಬೆಳಗ್ಗೆ ೫:೦೦ ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ಪ್ರಯಾಣ ಪ್ರಾರಂಭಿಸಿದರು.
ಶ್ರೀಕ್ಷೇತ್ರ ಕೈವಾರಕ್ಕೆ ತೆರಳುವ ಮಾರ್ಗ ಮಧ್ಯೆ ಶೆಟ್ಟಳ್ಳಿ, ಭಕ್ತರಹಳ್ಳಿ, ಮಳಮಾಚನಹಳ್ಳಿ, ದೊಡ್ಡದಾಸರಹಳ್ಳಿ, ತುಮ್ಮನಹಳ್ಳಿ, ಮಸ್ತೇನಹಳ್ಳಿ ಭಾಗಗಳಲ್ಲಿ ಪಾದಯಾತ್ರೆಗಳಿಗೆ ತಂಪಾದ ಪಾನೀಯ, ಬಿಸ್ಕತ್, ಕುಡಿಯುವ ನೀರಿನ ವ್ಯವಸ್ಥೆಗಳನ್ನು ಕಲ್ಪಿಸಿದ್ದು ನಂತರ ಶ್ರೀ ಕ್ಷೇತ್ರ ಕೈವಾರದಿಂದ ಮರಳಿ ಬರಲು ವಾಹನ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.
ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ಭಕ್ತ ಮಂಡಳಿಯ ತಿಮ್ಮರಾಯಪ್ಪ ಸ್ವಾಮಿಗಳು, ಹನುಮಾನ್ ಜ್ಯೋತಿಷ್ಯ ಮಂದಿರದ ಲೋಕನಾಥಾಚಾರ್ಯ, ಬಲಿಜ ಸಂಘದ ಅಧ್ಯಕ್ಷ ಆರ್.ಮುನಿ ರಾಜು, ಶ್ರೀ ಕೃಷ್ಣ ಸತ್ಸಂಗ ಸೇವಾ ಟ್ರಸ್ಟ್ ಅಧ್ಯಕ್ಷ ಜೆಎಸ್ ರಾಮಚಂದ್ರಪ್ಪ, ಪುರಸಭಾ ಮಾಜಿ ಸದಸ್ಯ ಬಲಮುರಿ ಶ್ರೀನಿವಾಸ್, ಮಹಾತ್ಮಾಂಜನೇಯ, ನಾಗಪ್ಪ, ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.