ಪರಿಸರ ಸಂರಕ್ಷಣಾ ಕಾಳಜಿ ವಿದ್ಯಾರ್ಥಿಗಳ ಬದುಕಿಗೆ ಅಗತ್ಯ
ಗೌರಿಬಿದನೂರು,ಅ.೧-ಸಮುದಾಯದಲ್ಲಿ ಗಿಡ ನೆಟ್ಟು ನೀರುಣಿಸಿ ಪರಿಸರ ಸಂರಕ್ಷಣೆ ಮಾಡುವ ಮೂಲಕ ಶ್ರಮದಾನ ಮಾಡಿ ಸ್ವಚ್ಛ ಮತ್ತು ಹಚ್ಛ ಹಸಿರಿನ ಪರಿಸರ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಸಹಕಾರಿಯಾಗುವುದು ನಿಜಕ್ಕೂ ಸಾರ್ಥಕ ಕಾರ್ಯವಾಗಿದೆ ಎಂದು ಡಿ.ಪಾಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ.ಸತ್ಯೇಂದ್ರ ತಿಳಿಸಿದರು.
ತಾಲ್ಲೂಕಿನ ಆರ್ಕುಂದ ಗ್ರಾಮದ ಹೊರವಲಯದಲ್ಲಿನ ಸಸ್ಯಕ್ಷೇತ್ರಕ್ಕೆ ಗುರುವಾರ ಡಿ.ಪಾಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭೇಟಿ ನೀಡಿ ಗಿಡಗಳನ್ನು ನೆಟ್ಟು ನೀರುಣಿಸಿ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನೆರೆಯ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯದ ಜತೆಗೆ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಬೇಕು. ಮಣ್ಣಿನ ಸವಕಳಿಯನ್ನು ತಪ್ಪಿಸಿ ನೀರಿನ ಅಪವ್ಯಯವನ್ನು ನಿಯಂತ್ರಿಸುವ ಕಾರ್ಯಕ್ಕೆ ಮುಂದಾಗಬೇಕು. ಹೆಚ್ಚಿನ ಗಿಡಗಳನ್ನು ನೆಟ್ಟು ಪೋಷಣೆ ಮಾಡಿದಲ್ಲಿ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ನಾವೆಲ್ಲರೂ ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರಧಾರಿಗಳಾಗಬೇಕು. ವಿದ್ಯಾರ್ಥಿಗಳು ಶಾಲಾ ಕಾಲೇಜು ಹಂತದಿಂದಲೇ ಪರಿಸರ ಸಂರಕ್ಷಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಮುಂದಾದಲ್ಲಿ ಭವಿಷ್ಯದಲ್ಲಿ ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸ್ಥಳೀಯ ಮುಖಂಡರು ಮತ್ತು ಪರಿಸರಪ್ರೇಮಿ ಎ.ಎಸ್.ಜಗನ್ನಾಥ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕಲಿಕಾ ಹಂತದಲ್ಲಿ ನಿತ್ಯ ತರಗತಿಯ ಪಠ್ಯ ವಿಷಯಗಳ ಜತೆಗೆ ಸಮುದಾಯದಲ್ಲಿನ ಪಠ್ಯೇತರ ಚಟುವಟಿಕೆಗಳ ಬಗ್ಗೆ ಅರಿಯುವುದು ಅಗತ್ಯವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳ ಬದುಕಿನಲ್ಲಿ ಸರ್ವಾಂಗೀಣ ಕಲಿಕೆಗೆ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಸಮುದಾಯದಲ್ಲಿನ ಕಾರ್ಯಗಳಲ್ಲಿ ಭಾಗವಹಿಸಿ ಶ್ರಮದಾನ ಮಾಡುವುದರಿಂದ ನಾಯಕತ್ವ ಗುಣಗಳು ಬೆಳೆಯುವ ಜತೆಗೆ ಮಾನಸಿಕ ಮತ್ತು ಭೌದ್ಧಿಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಇಕೋ ಕ್ಲಬ್ ಅಡಿಯಲ್ಲಿ ವಿದ್ಯಾರ್ಥಿಗಳು ಇಲ್ಲಿನ ಸರ್ಕಾರಿ ಭೂಮಿಯಲ್ಲಿ ಗಿಡಗಳನ್ನು ನೆಟ್ಟು ನೀರುಣಿಸಿ, ಅವುಗಳ ರಕ್ಷಣೆಗೆ ಅಗತ್ಯ ಸೇವಾ ಕಾರ್ಯವನ್ನು ಮಾಡುವ ಮೂಲಕ ಪರಿಸರ ಸಂರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಇಂತಹ ಅವಕಾಶಗಳು ದೊರೆತಾಗ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಈ ವೇಳೆ ಕಾಲೇಜಿನ ಉಪನ್ಯಾಸಕರಾದ ಎಸ್.ಇಂದ್ರಾಣಿ, ಛಾಯಾಮಣಿ, ಡಿ.ಎನ್.ಪ್ರಕಾಶ್, ಎಸ್. ಆನಂದ್, ಅಶ್ವತ್ಥನಾರಾಯಣ, ವೆಂಕಟೇಶ್ ಮೂರ್ತಿ, ಶಕ್ಷಾಮೌಲಾ, ಪ್ರಶಾಂತ್ ಗೌಡ ಸೇರಿದಂತೆ ಇತರರು ಭಾಗವಹಿಸಿದ್ದರು.