೨ನೇ ಬಾರಿಗೆ ಚುನಾವಣೆಗೆ ಕಾಂಗ್ರೆಸ್ ನೇರ ಕಾರಣರು
ವಿಜಯಪುರ, ಅ.೧-ಪಟ್ಟಣದ ಡೇರಿಯ ಆಡಳಿತ ಮಂಡಳಿಗೆ ಒಂದೇ ಅದಿಯಲ್ಲಿ ಎರಡನೇ ಬಾರಿಗೆ ಚುನಾವಣೆ ನಡೆಯುವಂತಾಗಲು ಕಾಂಗ್ರೆಸ್ ನವರು ನೇರ ಕಾರಣರು ಎಂದು ಜೆಡಿಎಸ್ ಟೌನ್ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಆರೋಪಿಸಿದರು.
ಪಟ್ಟಣದ ಓಂಕಾರೇಶ್ವರಸ್ವಾಮಿ ದೇವಾಲಯದಲ್ಲಿ ಜೆಡಿಎಸ್-ಬಿಜೆಪಿ ಮುಖಂಡರು ಒಟ್ಟಿಗೆ ಪೂಜೆ ಸಲ್ಲಿಸಿದ ನಂತರ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಡೇರಿಯ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಇದೇ ವರ್ಷ ಫೆಬ್ರವರಿ ೨೨ ರಂದು ನಡೆದಿದ್ದ ಚುನಾವಣೆಯಲ್ಲಿ, ಎರಡು ಅವಧಿಗಳಲ್ಲಿ ಜೆಡಿಎಸ್ ಬೆಂಬಲಿತ ಆಡಳಿತ ಮಂಡಳಿಗಳು ಮಾಡಿಕೊಂಡು ಬಂದಿದ್ದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಗುರ್ತಿಸಿದ್ದ ಉತ್ಪಾದಕರು, ಜೆಡಿಎಸ್ ನಿಂದ ೭ ಮಂದಿ ಕಾಂಗ್ರೆಸ್ ನಿಂದ ೩ ಮಂದಿ ಪಕ್ಷೇತರ ಇಬ್ಬರು ನಿರ್ದೇಶಕರನ್ನು ಆಯ್ಕೆ ಮಾಡಿದ್ದರು.
ಆದರೆ, ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ನವರು ಅಧಿಕಾರದ ಆಸೆಯಿಂದ ಜೆಡಿಎಸ್ ನ ಕೆಲ ಸದಸ್ಯರಿಂದ ಅಡ್ಡಮತದಾನ ಮಾಡಿಸಿಕೊಂಡು ಅಧ್ಯಕ್ಷಗಾದಿ ಹಿಡಿದಿದ್ದರು. ಇದು ಮತದಾರರ ತೀರ್ಪಿಗೆ ವಿರುದ್ಧವಾಗಿದೆ ಎಂದು ಜೆಡಿಎಸ್ ನ ಎಲ್ಲಾ ನಿರ್ದೇಶಕರು ರಾಜೀನಾಮೆ ನೀಡಿದ್ದರು. ನಾವು ಪುನಃ ಉತ್ಪಾದಕರ ಮುಂದೆ ಹೋಗುತ್ತಿದ್ದೇವೆ. ಈ ಚುನಾವಣೆಯಲ್ಲಿ ಜೆಡಿಎಸ್‌ನಿಂದ೧೦ಸ್ಥಾನಗಳಿಗೆ,ಬಿಜೆಪಿಯಿಂದ೨ ಸ್ಥಾನಗಳಿಗೆ ಒಟ್ಟು ೧೨ ಸ್ಥಾನಗಳಲ್ಲಿ ನಮ್ಮನ್ನು ಗೆಲ್ಲಿಸುವ ವಿಶ್ವಾಸವಿದೆ ಎಂದರು.
ಮಾಜಿ ಪುರಸಭೆ ಸದಸ್ಯ ಎಸ್.ಭಾಸ್ಕರ್ ಮಾತನಾಡಿ, ಸಹಕಾರಿ ಸಂಘದ ಏಳಿಗೆಯಾಗಬೇಕಾದರೆ, ಉತ್ಪಾದಕರ ಒಂದೊಂದು ಬೆವರಿನ ಹನಿಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ. ಕಾಂಗ್ರೆಸ್ ನವರು ಡೇರಿಯಲ್ಲಿ ಅಧಿಕಾರಕ್ಕಾಗಿ ಹಾತೊರೆಯುತ್ತಾರೆ. ಜೆಡಿಎಸ್-ಬಿಜೆಪಿ ಒಟ್ಟಾಗಿ ಜನರ ಮುಂದೆ ಹೋಗುತ್ತಿದ್ದೇವೆ. ನಾವು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಿಕೊಂಡು ಬಂದಿದ್ದೇವೆ. ಇದನ್ನು ಮತದಾರರು ಮನಗಂಡಿದ್ದಾರೆ. ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ತಾಲ್ಲೂಕು ಅಧ್ಯಕ್ಷ ಬಿ.ಮುನೇಗೌಡ ಅವರ ಮಾರ್ಗದರ್ಶನದಲ್ಲಿ ನಾವು ೧೨ ಸ್ಥಾನಗಳಲ್ಲಿ ಗೆಲ್ಲುತ್ತೇವೆ. ಪುನಃ ಹಾಲು ಉತ್ಪಾದಕರ ಹಿತ ಕಾಪಾಡಲು ಶ್ರಮಿಸುತ್ತೇವೆ ಎಂದರು.
ಜೆಡಿಎಸ್ ಟೌನ್ ಪ್ರಧಾನ ಕಾರ್ಯದರ್ಶಿ ಮಹೇಶ್ ಕುಮಾರ್, ಪುರಸಭಾ ಸದಸ್ಯ ರವಿ, ಮಾಜಿ ಅಧ್ಯಕ್ಷ ಕೇಶವಪ್ಪ, ವೆಂಕಟೇಶ್, ಕೆ.ವಿ.ಮುನಿರಾಜು, ಚಿನ್ನಯ್ಯ, ಬಿಜೆಪಿ ಜಿಲ್ಲಾ ಓಬಿಸಿ ಅಧ್ಯಕ್ಷ ಕನಕರಾಜು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಟೌನ್ ಪ್ರಧಾನ ಕಾರ್ಯದರ್ಶಿ ಡಿ.ಎಂ.ಮುನೀಂದ್ರ, ಚ.ವಿಜಯಬಾಬು, ಜೆ.ಆರ್.ಮುನಿವೀರಣ್ಣ, ಕೆ.ಮುನಿರಾಜು, ಮನೋಹರ್, ಅಶೋಕ್, ಮಂಜಣ್ಣ ಸುಬ್ಬಣ್ಣ, ಆಂಜಿನಪ್ಪ, ಹಾಜರಿದ್ದರು.