ದೇವಸ್ಥಾನ ಧ್ವಂಸ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ದಸಂಸ ಪ್ರತಿಭಟನೆ
ಕೆಆರ್ ಪುರ,ಆ.೧೩-ಮಹದೇವಪುರ ಕ್ಷೇತ್ರದ ವರ್ತೂರು ಹೋಬಳಿಯ ಬೋಗನಹಳ್ಳಿಯಲ್ಲಿ ರಾತ್ರೋರಾತ್ರಿ ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನವನ್ನು ಧ್ವಂಸ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಕೆಆರ್ ಪುರದಲ್ಲಿರುವ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆ ರಾಜ್ಯಾಧ್ಯಕ್ಷ ಸೋರುಣಸೆ ವೆಂಕಟೇಶ್ ಮಾತನಾಡಿ, ಬೆಂಗಳೂರು ಪೂರ್ವ ತಾಲ್ಲೂಕು , ವರ್ತೂರು ಹೋಬಳಿ, ಬೋಗನಹಳ್ಳಿ ಸರ್ವೇ ನಂ. ೩೩/೧ ರಲ್ಲಿ ೧ ಎಕರೆ ೩೯ ಗುಂಟೆ ಜಾಗ ಸ್ಮಶಾನಕ್ಕೆ ಮೀಸಲಿಡಲಾಗಿತ್ತು. ಈ ಜಾಗದಲ್ಲಿ ಅಂಗಾಳ ಪರಮೇಶ್ವರಿ ದೇವಸ್ಥಾನ ಸಹ ಇದ್ದು ಇದೀಗ ಈ ದೇವಸ್ಥಾನವನ್ನು ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ರಾತ್ರೋ ರಾತ್ರಿ ಏಕಾಏಕಿ ದೇವಸ್ಥಾನ ಧ್ವಂಸ ಮಾಡಿ ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಪ್ರಭಾವಿ ವ್ಯಕ್ತಿಗಳು ತಮ್ಮ ರಾಜಕೀಯ ಪ್ರಭಾವ ಬಳಿಸಿ ಕಂದಾಯ ಅಧಿಕಾರಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ಹಣದ ಆಮಿಷವೊಡ್ಡಿ ಅಧಿಕಾರಿಗಳನ್ನು ದುರುಪಯೋಗಪಡೆಸಿಕೊಂಡು ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದಾರೆ ಎಂದರು.
ಅಕ್ರಮ ಎಸಗಿರುವವರ ವಿರುದ್ಧ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರಿ ಭೂ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ವಿಜಯ್ ಕುಮಾರ್, ಕರ್ನಾಟಕ ದಲಿತ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಸತ್ಯಾವತಿ,ಬೆಂಗಳೂರು ಪೂರ್ವ ತಾಲ್ಲೂಕು ಅಧ್ಯಕ್ಷ ಬೋಗನಹಳ್ಳಿ ಬಿ.ಎನ್.ಸುರೇಶ್ , ಮುಖಂಡರಾದ ಪುಷ್ಪವತಿ,ಜಮುನಾ,ನಿರ್ಮಲಾ,ರತ್ನ ಭಾಗ್ಯ,ಮಂಜುಳಾ ದೇವರಾಜ್, ಗೀತಾ ಮತ್ತಿತರರಿದ್ದರು.