ಪ್ರಥಮ ತರಗತಿ ಫಲಿತಾಂಶ ಮೂರು ವರ್ಷದ ನಂತರ…!

ಮಕ್ಕಳ ಭವಿಷ್ಯದಲ್ಲಿ ‘ಆಟ’ ವಾಡಿದ ವಿಶ್ವವಿದ್ಯಾಲಯ- ಪುತ್ತೂರು ಶಾಸಕರಲ್ಲಿ ಅಳಲು ತೋಡಿಕೊಂಡ ಮಕ್ಕಳು

ಪುತ್ತೂರು; ವಿಶ್ವವಿದ್ಯಾಲಯದ ಬೇಜವಾಬ್ದಾರಿ ಇದೀಗ ಹಲವು ಮಕ್ಕಳ ಭವಿಷ್ಯಕ್ಕೆ ಆತಂಕ ತಂದೊಡ್ಡಿರುವ ಘನಟೆಯೊಂದು ಇದೀಗ ಬೆಳಕಿಗೆ ಬಂದಿದೆ. ಪ್ರಥಮ ವರ್ಷದ ಭಾಷಾ ವಿಷಯದ ಪರೀಕ್ಷಾ ಫಲಿತಾಂಶವನ್ನು ಅಂತಿಮ ವರ್ಷದ ಪರೀಕ್ಷಾ ನಂತರ ಪ್ರಕಟಿಸಿದ್ದಲ್ಲದೆ, ಪರೀಕ್ಷೆಗೆ ಹಾಜರಾಗಿದ್ದರೂ ‘ಗೈರು’ ಎಂದು ನಮೂದಿಸಿದ್ದರು. ಇದೀಗ ಅನುತ್ತೀರ್ಣ ಎಂದು ಘೋಷಣೆ ಮಾಡಲಾಗಿದೆ.  ಇದರಿಂದ ನಮ್ಮ ಭವಿಷ್ಯವೇ ನಾಶವಾಗುವ ಸ್ಥಿತಿ ಉಂಟಾಗಿದೆ ಎಂದು ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಮೂವರು ವಿದ್ಯಾರ್ಥಿಗಳು ಇದೀಗ ಪುತ್ತೂರು ಶಾಸಕ ಅಶೋಕ್ ರೈ ಅವರ ಮೊರೆ ಹೋಗಿದ್ದಾರೆ.
ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸೋಮವಾರ ಶಾಸಕರನ್ನು ಭೇಟಿ ಮಾಡಿ ಮಂಗಳೂರು ವಿಶ್ವವಿದ್ಯಾಲಯದ ಈ ವ್ಯವಸ್ಥೆಯಿಂದ ನಮ್ಮ ಶೈಕ್ಷಣಿಕ ಬದುಕಿಗೆ ತೊಂದರೆ ಉಂಟಾಗಿದೆ. ಇದನ್ನು ಸರಿಪಡಿಸಿ ನಮ್ಮ ಭವಿಷ್ಯಕ್ಕೆ ತೊಂದರೆ ಉಂಟಾಗದಂತೆ ಮಾಡಬೇಕು ಎಂದು ಅಳವತ್ತುಕೊಂಡಿದ್ದಾರೆ.
೨೦೨೧-೨೨ರಲ್ಲಿ ಪ್ರಥಮ ಪದವಿ ಪರೀಕ್ಷೆಗೆ ಕುಳಿತಿದ್ದ ದೀಕ್ಷಿತಾ , ಸ್ವಾತಿ ಹಾಗೂ ಜನಾರ್ಧನ ಎನ್ನುವ ವಿದ್ಯಾರ್ಥಿಗಳು ಇಂಗ್ಲೀಷ್ ಭಾಷಾ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದರು. ಈ ಹಿನ್ನಲೆಯಲ್ಲಿ ಸಪ್ಲಿಮೆಂಟರಿ ಪರೀಕ್ಷೆಗೆ ಕುಳಿತುಕೊಂಡಿದ್ದರು. ಆದರೆ ಫಲಿತಾಂಶದಲ್ಲಿ ಪರೀಕ್ಷೆಗೆ ಗೈರು ಎಂದು ತೋರಿಸಿತ್ತು. ಈ ಬಗ್ಗೆ ಕಾಲೇಜಿನಿಂದ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂಬುವುದಕ್ಕೆ ದಾಖಲೆಗಳನ್ನೂ ಕಳುಹಿಸಿಕೊಡಲಾಗಿತ್ತು. ತಮ್ಮ ಭವಿಷ್ಯದ ದೃಷ್ಠಿಯಿಂದ ಈ ಮೂವರು ವಿದ್ಯಾರ್ಥಿಗಳು ಹಲವು ಬಾರಿ ಮಂಗಳೂರು ವಿಶ್ವವಿದ್ಯಾಲಯದ ಕಚೇರಿಯನ್ನು ಸಂಪರ್ಕಿಸಿ ಫಲಿತಾಂಶ ನೀಡುವಂತೆ ವಿನಂತಿಸಿದ್ದರು.
ಆದರೆ ಮಕ್ಕಳ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ಮಂಗಳೂರು ವಿವಿ ಈ ಸಮಸ್ಯೆಗೆ ಉಪ್ಪಿನಂಗಡಿ ಕಾಲೇಜು ಕಾರಣ ಎಂದು ವಿದ್ಯಾರ್ಥಿಗಳಿಗೆ ತಿಳಿಸಿತ್ತು. ಇತ್ತ ಉಪ್ಪಿನಂಗಡಿ ಕಾಲೇಜು ಮಕ್ಕಳು ಪರೀಕ್ಷೆಗೆ ಹಾಜರಾದ ದಾಖಲೆಗಳನ್ನು ನೀಡಿದ್ದರೂ ‘ಗೈರು’ ನಮೂದಿಸಿರುವುದು ಅವರದ್ದೇ ತಪ್ಪು ಎಂದು ಮಂಗಳೂರು ವಿವಿ ಕಡೆಗೆ ಬೆರಳು ತೋರಿಸುತ್ತಿದ್ದಾರೆ.  ಒಬ್ಬರು ಮತ್ತೊಬ್ಬರ ಮೇಲೆ ದೋಷಾರೋಪ ಮಾಡುತ್ತಿರುವುದನ್ನು ಬಿಟ್ಟರೆ ಈ ಮಕ್ಕಳ ಪ್ರಥಮ ಪದವಿಯ ಇಂಗ್ಲೀಷ್ ಭಾಷಾ ಪರೀಕ್ಷಾ ಫಲಿತಾಂಶವನ್ನು ಮಕ್ಕಳ ಕೊನೆಯ ಸೆಮಿಷ್ಟರ್ ಪರೀಕ್ಷೆಯ ತನಕವೂ ನೀಡಲೇ ಇಲ್ಲ..!
ಆದರೆ ಮೂರನೇ ವರ್ಷದ ಕೊನೆಯ ಸೆಮಿಷ್ಟರ್ ಪರೀಕ್ಷೆ ನಡೆದ ಬಳಿಕ ಇದೀಗ ಪ್ರಥಮ ವರ್ಷದ ಇಂಗ್ಲೀಷ್ ಭಾಷಾ ಫಲಿತಾಂಶವನ್ನು ನೀಡಿದ್ದಾರೆ. ಹಿಂದೆ ‘ಗೈರು’ ಎಂದು ನಮೂದಿಸಿರುವ ಕಡೆ ಈಗ ’ಫೈಲ್ ಎಂದು ಫಲಿತಾಂಶ ಘೋಷಣೆ ಮಾಡಿದ್ದಾರೆ…! ಇದರಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಉನ್ನತ ಶಿಕ್ಷಣ ಪಡೆಯುವ ಕನಸಿನಲ್ಲಿದ್ದ ಈ ಮಕ್ಕಳಿಗೆ ಮಂಗಳೂರು ವಿಶ್ವವಿದ್ಯಾಲಯ ಇದೀಗ ದೊಡ್ಡ ಶಾಕ್ ನೀಡಿದೆ.
ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೂವರು ಮಕ್ಕಳ ಪರಿಸ್ಥಿತಿ ಇದ್ದಾಗಿದ್ದರೆ, ಇನ್ನು ಮೂವರು ವಿದ್ಯಾರ್ಥಿಗಳ ಸಮಸ್ಯೆ ಮತ್ತೊಂದು ರೀತಿಯಲ್ಲಿದೆ. ಈ ಮೂವರು ವಿದ್ಯಾರ್ಥಿಗಳು ಪರೀಕ್ಷೆಗೆ ಬರೆದಿದ್ದು, ಫಲಿತಾಂಶ ಉತ್ತೀರ್ಣ ಎಂದು ಬಂದಿತ್ತು. ಆದರೆ ಮಂಗಳೂರು ವಿಶ್ವವಿದ್ಯಾಲಯ ಕೊಟ್ಟ ಅಧಿಕೃತ ದಾಖಲೆಯಲ್ಲಿ ಫೈಲ್ ಎಂದು ಬಂದಿದೆ. ಈ ಬಗ್ಗೆಯೂ ಹಲವಾರು ಸಲ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾಲಯಕ್ಕೆ ಭೇಟಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಸ್ತುತ ಈ ಮಕ್ಕಳ ಭವಿಷ್ಯವೂ ಅಂಧಕಾರದಲ್ಲಿದೆ.
ಶಾಸಕರ ‘ಗರಂ” ವಿವಿಗೆ ಖಡಕ್ ಸೂಚನೆ
ಮಕ್ಕಳ ಸಮಸ್ಯೆಯನ್ನು ಆಲಿಸಿದ ಶಾಸಕರು ತಕ್ಷಣ ಮಂಗಳೂರು ವಿವಿಗೆ ಫೊನ್ ಮಾಡಿದ್ದು, ಅಲ್ಲಿಂದ ಕಾಲೇಜಿನವರು ಮಾಡಿರುವ ತಪ್ಪು ಎಂಬ ಉತ್ತರದಿಂದ ‘ಗರಂ’ ಆದರು. ನೀವು ಒಬ್ಬರ ಮೇಲೊಬ್ಬರು ಗೂಬೆ ಕೂರಿಸಿಕೊಳ್ಳೋದು ಬೇಡ. ಮಾಡಿರುವ ತಪ್ಪಿನಿಂದ ಮಕ್ಕಳಿಗೆ ತೊಂದರೆಯಾಗಿದೆ. ಆವರು ಭವಿಷ್ಯಕ್ಕೆ ತೊಂದರೆ ಮಾಡಬೇಡಿ. ಮಕ್ಕಳ ಸಮಸ್ಯೆಗೆ ಪರಿಹಾರ ಬೇಕು. ಅದನ್ನು ತಕ್ಷಣ ಮಾಡಿ. ಸುಮ್ಮನೆ ಅವರ ತಪ್ಪು.. ಇವರ ತಪ್ಪು ಈ ನೆವ ಗಳನ್ನು ಹೇಳಬೇಡಿ ಎಂದು ‘ಖಡಕ್ ಆಗಿ ಸೂಚನೆ ನೀಡಿದರು.

ಮೇಘಾ ಪಾಲೆತ್ತಾಡಿ