ಮನುಷ್ಯ ಗುಣದಿಂದ ದೊಡ್ಡವನಾಗಬೇಕು ಹಣದಿಂದಲ್ಲ ;  ರಂಭಾಪುರಿ ಶ್ರೀ

ಸಂಜೆವಾಣಿ ವಾರ್ತೆ
ಬಾಳೆಹೊನ್ನೂರು.ಆ.೧೩; ಬದುಕಿನ ಅತಿ ದೊಡ್ಡ ಸಾಧನೆಯ ಹಿಂದೆ ದೊಡ್ಡ ತ್ಯಾಗ ಇರುತ್ತದೆ. ತ್ಯಾಗ ಮತ್ತು ಪರಿಶ್ರಮ ಇಲ್ಲದೇ ಯಾವುದೂ ಸಿದ್ಧಿಸುವುದಿಲ್ಲ. ಮನುಷ್ಯ ಹಣದಿಂದ ದೊಡ್ಡವನಾಗದೇ ಗುಣದಿಂದ ದೊಡ್ಡವನಾಗಬೇಕೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು  ಶ್ರೀ ರಂಭಾಪುರಿ ಪೀಠದಲ್ಲಿ ಶ್ರಾವಣ ಪೂಜಾನುಷ್ಠಾನ ಹಾಗೂ ಲಿಂ.ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಸತ್ಯದ ದಾರಿ ಯಾವಾಗಲೂ ಕಷ್ಟಕರವಾಗಿರುತ್ತದೆ. ಆದರೆ ಆ ದಾರಿ ಎಂದಿಗೂ ನಮ್ಮನ್ನು ಸೋಲಲು ಬಿಡುವುದಿಲ್ಲ. ಬೆಂಕಿಯಲ್ಲಿ ಬೆಂದಷ್ಟು ಚಿನ್ನ ಹೊಳೆಯುವ ಹಾಗೆ ಸಂಕಟಗಳನ್ನು ಅನುಭವಿಸಿದಷ್ಟು ಮನುಷ್ಯ ಜ್ಞಾನಿಯಾಗುತ್ತಾನೆ. ಗುರಿ ಇಟ್ಟುಕೊಂಡು ಸಾಗುವವರು ಸಾಧಕ ರಾಗುತ್ತಾರೆ. ಆಶೆಗಳನ್ನು ಇಟ್ಟುಕೊಂಡು ಸಾಗುವವರು ಸಾಮಾನ್ಯರಾಗಿ ಉಳಿಯುತ್ತಾರೆ. ಮನುಷ್ಯನಿಗೆ ಮರಣ ಇರುತ್ತದೆ. ಆದರೆ ಒಳ್ಳೆತನಕ್ಕೆ ಮರಣ ಇರುವುದಿಲ್ಲ. ಜೀವನದಲ್ಲಿ ಉನ್ನತಿ ಸಾಧಿಸಬೇಕಾದರೆ ಜನಬಲ ಹಣಬಲ ತೋಳಬಲ ಇದ್ದರೆ ಸಾಲದು. ದೈವಬಲ ಅಗತ್ಯವಾಗಿದೆ. ದುರ್ಯೋಧನನಿಗೆ ಎಲ್ಲವೂ ಇತ್ತು ಆದರೆ ದೈವಬಲ ಇರಲಿಲ್ಲ. ತಿಳುವಳಿಕೆಗಿಂತ ನಡವಳಿಕೆಗಳು ಶ್ರೇಷ್ಠ. ತಿಳುವಳಿಕೆ ಸೋಲಬಹುದು. ಆದರೆ ಉತ್ತಮ ನಡವಳಿಕೆ ಎಂದಿಗೂ ಸೋಲುವುದಿಲ್ಲ. ವೀರಶೈವ ಧರ್ಮ ಅರಿವು ಆದರ್ಶಗಳನ್ನು ಕೊಟ್ಟಿದೆ. ಶ್ರೀ ಗುರುವಿಗೆ ಎಲ್ಲಾ ಧರ್ಮಗಳಲ್ಲಿ ಪ್ರಥಮ ಸ್ಥಾನ ಕಲ್ಪಿಸಿದ್ದಾರೆ. ಲಿಂ.ಶ್ರೀ ರಂಭಾಪುರಿ ರುದ್ರಮುನಿ ಜಗದ್ಗುರುಗಳು ನಿರಂತರ ಸಾಧನೆ ಮತ್ತು ಪ್ರಯತ್ನದಿಂದ ಜೀವನದಲ್ಲಿ ಶ್ರೇಯಸ್ಸು ಕಂಡವರು. ಕಿರಿ ವಯಸ್ಸಿನಲ್ಲಿ ಹೆತ್ತ ತಂದೆ ತಾಯಿ ತಾರುಣ್ಯಾವಸ್ಥೆಯಲ್ಲಿ ಶ್ರೀ ಗುರುವಿನ ಮಾರ್ಗದರ್ಶನದಲ್ಲಿ ಬೆಳೆದು ಘನ ವಿದ್ವಾಂಸರಾದರು. ಶ್ರೀ ಜಗದ್ಗುರು ರಂಭಾಪುರಿ ಪೀಠವನ್ನು ಆರೋಹಣ ಮಾಡಿ ರಚನಾತ್ಮಕ ಮತ್ತು ಗುಣಾತ್ಮಕ ಕಾರ್ಯಗಳನ್ನು ಕೈಗೊಂಡ ಕೀರ್ತಿ ಅವರಿಗೆ ಸಲ್ಲುತ್ತದೆ. ಶ್ರೀ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲೆ ಹಾಗೂ ಶ್ರೀ ಜಗದ್ಗುರು ರುದ್ರಮುನೀಶ್ವರ ಸಮುದಾಯ ಭವನ ನಿರ್ಮಿಸುವುದರ ಮೂಲಕ ಶ್ರೀಪೀಠ ಕೃತಜ್ಞತೆಯನ್ನು ಸಲ್ಲಿಸಿದೆ ಎಂದರು.