ರಾಜ್ಯದಲ್ಲೂ ಕೇಜ್ರಿವಾಲ್ ಮಾದರಿ ಆಡಳಿತ
ಸಂಜೆವಾಣಿ ನ್ಯೂಸ್
ಮೈಸೂರು: ಆ.13:- ರಾಜ್ಯದಲ್ಲೂ ಅರವಿಂದ ಕೇಜ್ರಿವಾಲ್ ಮಾದರಿ ಆಡಳಿತ ಜಾರಿಯಾಗಲಿದ್ದು, ಜೈಲಿನಿಂದಲೇ ಆಡಳಿತ ಮಾಡುವ ಪರಿಸ್ಥಿತಿ ಬರಲಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಭವಿಷ್ಯ ನುಡಿದರು.
ನಗರದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಿತ್ತು. ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಸೂಚನೆ ನೀಡಬೇಕಿತ್ತು. ಆದರೆ, ಬಿಜೆಪಿ ತಪ್ಪು ಮಾಡಿದೆ ಎಂದು ನೆಪ ಹೇಳುತ್ತಿದ್ದಾರೆ. ಅರವಿಂದ ಕೇಜ್ರಿವಾಲ್ ಜೈಲಿನಿಂದ ಆಧಿಕಾರ ಮಾಡುತ್ತಿದ್ದಾರೆ. ನಮ್ಮದೇನು ಎನ್ನುವ ರೀತಿ ಇದ್ದಾರೆ. ಈ ಬಗ್ಗೆ ನಾವು ರಾಷ್ಟ್ರಪತಿಗಳಿಗೆ ದೂರು ನೀಡುತ್ತೇವೆ. ಸಾವಿರಾರು ಕೋಟಿ ಹಗರಣವಾಗಿರುವುದರಿಂದ ಇಡಿ ಮೂಲಕ ತನಿಖೆಗೆ ಒತ್ತಾಯಿಸಲಿದ್ದು, ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.
ಬಿಜೆಪಿಯಿಂದ ಬಳ್ಳಾರಿಗೆ ಪರ್ಯಾಯ ಪಾದಯಾತ್ರೆ ಕುರಿತು ಮಾತನಾಡಿ, ಬಳ್ಳಾರಿಗೆ ಪಾದಯಾತ್ರೆ ಸಂಬಂಧ ಬೆಳಗಾವಿಯಲ್ಲಿ ಸಭೆ ನಡೆಸಿರುವ ಬಗ್ಗೆ ನನಗೂ ಮಾಹಿತಿ ಬಂದಿದೆ. ಮಾಜಿ ಸಂಸದರು, ಮಾಜಿ ಸಚಿವರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಆದರೆ ಯಾವ ಕಾರಣಕ್ಕೆ ಸಭೆ ಸೇರಿದ್ದರು ಎಂಬ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಪಡೆದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ಪರ್ಯಾಯ ಸಭೆ ನಡೆಸಿ ಚರ್ಚಿಸಿದ ವಿಚಾರ ಕೇಳಿ ಕಾರ್ಯಕರ್ತನಾಗಿ ಮುಜುಗರ ಆಗುತ್ತದೆ. ಆದರೆ ಶಾಸಕನಾಗಿ ಹೇಳುವುದಾದರೆ ಅವರೆಲ್ಲರೂ ಹಿರಿಯರಿದ್ದಾರೆ. ಈ ಬಗ್ಗೆ ಹೈ ಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.
ಚಾಮುಂಡಿ ಬೆಟ್ಟದ ಪ್ರಾಧಿಕಾರ ರಚನೆ ಮೂಲಕ ರಾಜಮನೆತನದ ಅಧಿಕಾರ ಮೊಟಕು ಮಾಡುತ್ತಿದ್ದಾರೆ. ರಾಜ ಮನೆತನದ ಅಧಿಕಾರ ಮೊಟಕುಗೊಳಿಸಲು ಜನರ ವಿರೋಧವಿದೆ. ಇದಕ್ಕೆ ನನ್ನ ವಿರೋಧವೂ ಇದೆ. ನಾವು ರಾಜಮನೆತನದ ಪರ ಇದ್ದೇವೆ.
ಈ ಬಗ್ಗೆ ಇಂದಿನ ದಸರಾ ಉನ್ನತ ಮಟ್ಟದ ಸಭೆಯಲ್ಲಿ ಸಿಎಂ ಅವರೊಂದಿಗೆ ಮಾತನಾಡುತ್ತೇನೆ. ಚಾಮುಂಡಿ ಬೆಟ್ಟದ ಪ್ರಾಧಿಕಾರದ ಜತೆಗೆ ದಸರಾ ಪ್ರಾಧಿಕಾರ ಸೇರಿಸಲು ಮನವಿ ಮಾಡಿದ್ದೆವು. ಈ ಎಲ್ಲದರ ಬಗ್ಗೆ ಸಿಎಂ ಜತೆಗೆ ಮಾತನಾಡುತ್ತೇನೆ ಎಂದು ಹೇಳಿದರು.
ರಾಷ್ಟ್ರಪತಿಗೆ ದೂರು:
ರಾಜ್ಯಪಾಲರು ನೀಡಿರುವ ಶೋಕಾಸ್ ನೋಟಿಸ್‍ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಿಯಾಗಿ ಉತ್ತರ ನೀಡದೇ ಹೋದರೆ, ಮುಡಾ ಪ್ರಕರಣದ ಬಗ್ಗೆ ರಾಷ್ಟ್ರಪತಿಗೆ ದೂರು ಸಲ್ಲಿಸಲು ತೀರ್ಮಾನಿಸಲಾಗಿದೆ. ಮುಡಾ ವಿಚಾರದಲ್ಲಿ 5,000 ಕೋಟಿ ಹಗರಣವಾಗಿದೆ.
ಮುಖ್ಯಮಂತ್ರಿಗಳ ಕುಟುಂಬದ ಹೆಸರಿನಲ್ಲಿ ಕಾನೂನುಬಾಹಿರವಾಗಿ ನಿವೇಶನ ಪಡೆದಿರುವ ಬಗ್ಗೆ ರಾಜ್ಯಪಾಲರು ಸರ್ಕಾರಕ್ಕೆ ನೋಟಿಸ್ ನೀಡಿದ್ದರು. ಸರ್ಕಾರದ ವತಿಯಿಂದ ಸರಿಯಾದ ಉತ್ತರ ನೀಡಿಲ್ಲ. ಹೀಗಾಗಿ ಮುಡಾ ಪ್ರಕರಣವನ್ನು ರಾಷ್ಟ್ರಪತಿಗಳ ಅಂಗಳಕ್ಕೆ ತೆಗೆದುಕೊಂಡು ಹೋಗಿ, ಅವರ ಬಳಿ ಈ ಪ್ರಕರಣವನ್ನು ಇಡಿ ಅಥವಾ ಇತರ ತನಿಖಾ ಸಂಸ್ಥೆಗಳಿಂದ ತನಿಖೆಗೆ ವಹಿಸುವಂತೆ ಮನವಿ ಮಾಡುತ್ತೇವೆ. ಪ್ರಕರಣದಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಿದರೆ ಹಾಗೂ ಸೈಟ್ ವಾಪಸ್ ನೀಡಿದರೆ ಮಾತ್ರ ನಾವು ರಾಷ್ಟ್ರಪತಿ ಅಂಗಳಕ್ಕೆ ಇದನ್ನು ಕೊಂಡೊಯ್ಯುವುದಿಲ್ಲ ಎಂದರು.