ಮುಡಾ ಹಗರಣ ಸಿಬಿಐಗೆ ವಹಿಸಲು ಒತ್ತಾಯ
ಸಂಜೆವಾಣಿ ನ್ಯೂಸ್
ಮೈಸೂರು: ಆ.13:- ಬಹುಕೋಟಿ ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಹಳೆ ಜಿಲ್ಲಾಧಿಕಾರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಮುಡಾದಲ್ಲಿ ಸಾವಿರಾರು ಕೋಟಿ ಹಗರಣ ಆಗಿದ್ದರೂ ರಾಜ್ಯದ ಆಡಳಿತ-ವಿರೋಧ ಪಕ್ಷಗಳು ರಾಜಕೀಯ ದೊಂಬರಾಟವಾಡುತ್ತಿವೆ. ವಿಪಕ್ಷಗಳ ರಾಜಕೀಯ ಕೆಸರೆರಚಾಟ ನೋಡಿ ರಾಜ್ಯದ ಜನತೆಗೆ ಬೇಸರವಾಗಿದೆ. ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣ ರಾಜ್ಯದ ಜನರ ನಿದ್ದೆ ಕೆಡಿಸಿದೆ. ಇದು ಅತಿ ದೊಡ್ಡ ಹಗರಣಗಳಲ್ಲೊಂದಾಗಿದ್ದು, 80 ಸಾವಿರ ಜನ ಮುಡಾ ನಿವೇಶನಕ್ಕೆ ಕಾದು ಕುಳಿತಿದ್ದರೆ ಸರ್ಕಾರ ಹಾಗೂ ಮುಡಾ ಅಧಿಕಾರಿಗಳು ನಿವೇಶನಗಳನ್ನು ನುಂಗಿ ನೀರು ಕುಡಿದಿದ್ದಾರೆ. ನಗರಾಭಿವೃದ್ಧಿ ಸಚಿವರು ಮುಡಾ ಆಯುಕ್ತ ದಿನೇಶ್‍ಕುಮಾರ್ ಅವರನ್ನು ಅಮಾನತು ಮಾಡಿ, ವಿಚಾರಣೆಗೊಳಪಡಿಸದೆ, ರಾಜ ಮರ್ಯಾದೆಯಿಂದ ವರ್ಗಾವಣೆ ಮಾಡಿ ಕಳಿಸಿರುವುದು ನಿಜಕ್ಕೂ ಖಂಡನೀಯ ಎಂದು ಕಿಡಿ ಕಾರಿದರು.
ರಾಜ್ಯ ಸರ್ಕಾರ ಅಧಿಕಾರಿಕ್ಕೆ ಬಂದಾಗಿನಿಂದ ನೀರಾವರಿ ಯೋಜನೆಗಳು ಸಂಪೂರ್ಣ ಹಿಂದುಳಿದಿವೆ. ಅಭಿವೃದ್ಧಿ ಕೆಲಸಗಳು ನಡೆಯದೆ, ರಸ್ತೆ ಗುಂಡಿಗಳನ್ನು ಮುಚ್ಚಲೂ ಸರ್ಕಾರದಿಂದ ಸಾಧ್ಯವಾಗಿಲ್ಲ. ಅಹಿಂದ ಸಮುದಾಯಗಳಿಗೆ ಸವಲತ್ತು ಕೊಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಸರ್ಕಾರ ವಾಲ್ಮೀಕಿ ನಿಗಮದಲ್ಲಿ 187 ಕೋಟಿ, ಮುಡಾದಲ್ಲಿ 5 ಸಾವಿರ ಕೋಟಿ ಹಗರಣ ನಡೆಸಿದೆ. ಹೀಗಾಗಿ ಕೂಡಲೇ ರಾಜ್ಯಪಾಲರು ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಸುರೇಶ್ ಗೋಲ್ಡ್, ಪ್ರಭುಶಂಕರ್.ಎಂ.ಬಿ, ಕೃಷ್ಣಪ್ಪ, ಶಿವಲಿಂಗಯ್ಯ, ನಾಗಣ್ಯ.ಕೆ.ಪಿ, ಶಾಂತಕುಮಾರ್ ಗೌಡ, ನಾಗರಾಜ್, ವರಕೂಡು ಕೃಷ್ಣೇಗೌಡ, ಮಂಜುಳಾ, ಪ್ರಜೀಶ್.ಪಿ, ಶಿವಕುಮಾರ್, ಭಾಗಮ್ಮ ವಿ.ಮಹದೇವ್ ಪಡುವಾರಳ್ಳಿ, ಬೋಗಾದಿ ಸಿದ್ದೇಗೌಡ, ಪದ್ಮ, ಡಾ.ಶಾಂತ ರಾಜೇ ಅರಸ್, ನಂದಕುಮಾರ್, ನಾರಾಯಣಗೌಡ, ಡಾ.ರಾಮಕೃಷ್ಣೇಗೌಡ, ರವೀಶ್, ರಾಮಣ್ಯ, ಬೇಬಿರತ್ನ ಜಾಧವ್, ಪ್ರದೀಪ್, ಬಸವರಾಜು, ರವಿ ಒಲಂಪಿಯಾ, ರಾಧಾಕೃಷ್ಣ, ಹನುಮಂತಯ್ಯ, ಪರಿಸರ ಚಂದ್ರು, ರಮೇಶ್, ರಘು ಅರಸ್, ಕೆ.ಸಿ.ಗುರುಮಲ್ಲಪ್ಪ, ಹರೀಶ್, ಕುಮಾರ್, ಗಣೇಶ್ ಪ್ರಸಾದ್, ಶಿವನಾಯಕ್, ಚಂದ್ರಶೇಖರ್, ಮಹಾದೇವಸ್ವಾಮಿ, ದೂರ ಸುರೇಶ್, ದಿನೇಶ್, ಅಕ್ಷರ್, ಸ್ವಾಮಿ ಗೌಡ, ಪ್ರಭಾಕರ್, ರವಿನಾಯಕ್ ಸೇರಿದಂತೆ ಹಲವರು ಭಾಗವಹಿಸಿದ್ದರು.