ಹಿಂದೂಗಳ ಮೇಲಿನ ದಾಳಿಗೆ ಖಂಡನೆ
ಸಂಜೆವಾಣಿ ನ್ಯೂಸ್
ಮೈಸೂರು: ಆ.13:- ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ಖಂಡಿಸಿ ಹಿಂದೂ ಹಿತರಕ್ಷಣ ಸಮಿತಿ ವತಿಯಿಂದ ನಗರದ ಹಲವು ವೃತ್ತಗಳಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು.
ಚಾಮುಂಡಿಪುರ ವೃತ್ತ, ವೇದಾಂತ ಹೆಮ್ಮಿಗೆ ವೃತ್ತ, ರಾಮಸ್ವಾಮಿ ವೃತ್ತ, ಗನ್‍ಹೌಸ್ ವೃತ್ತ, ನ್ಯಾಯಾಲಯದ ಮುಂಭಾಗ, ಸೇರಿದಂತೆ ನಗರದ ಪ್ರಮುಖ 30 ವೃತದಲ್ಲಿ ಬಿತ್ತಿ ಪತ್ರ ಪ್ರದರ್ಶಿಸಿ ಹಿಂದೂಗಳ ಮೇಲಿನ ದಾಳಿ ಖಂಡಿಸಲಾಯಿತು.
ಈ ವೇಳೆ ಮಾತನಾಡಿದ ಹಿಂದೂ ಹಿತರಕ್ಷಣಾ ಸಮಿತಿ ಸಂಚಾಲಕ ರಂಗಸ್ವಾಮಿ, ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ಮೂಲಭೂತವಾದಿಗಳು ಮಾಡುತ್ತಿರುವ ಹಿಂಸಾಚಾರ ಖಂಡನೀಯ. ಅಲ್ಲಿ ಅರಾಜಕತೆ ಉಂಟಾಗಿದ್ದು, ಹಿಂದೂಗಳ ಮನೆ, ಅಂಗಡಿ, ದೇವಸ್ಥಾನದ ಮೇಲೆ ದಾಳಿ ನಡೆಸಲಾಗುತ್ತಿದೆ. ಅತ್ಯಾಚಾರ, ಹತ್ಯೆ, ಆಸ್ತಿನಾಶದಂತಹ ಅಮಾನವೀಯ ಕೃತ್ಯ ಎಸಗಲಾಗುತ್ತಿದೆ. ಅಲ್ಲಿನ ಸೇನೆಯೂ ಇದನ್ನು ತಡೆಯುತ್ತಿಲ್ಲ ಎಂದು ದೂರಿದರು.
ಮಾಜಿ ಪಾಲಿಕೆ ಸದಸ್ಯ ಮಾ.ವಿ.ರಾಂಪ್ರಸಾದ್, ಹಿಂದೂ ಹಿತರಕ್ಷಣಾ ಸಮಿತಿಯ ಸಂಚಾಲಕರಾದ ಮಹೇಶ್, ರಂಗಸ್ವಾಮಿ, ಗಿರೀಶ್, ಸಂತೋಷ್, ವಿಕ್ರಂ ಅಯ್ಯಂಗಾರ್, ಚಂದ್ರು ಕುಮಾರ್, ಬೈರತಿ ಲಿಂಗರಾಜು, ಶ್ರೀನಿವಾಸ್, ಎಸ್.ಎನ್.ರಾಜೇಶ್, ಸೇರಿದಂತೆ ಇನ್ನಿತರ ಹಿಂದು ಮುಖಂಡರುಗಳು ಭಾಗವಹಿಸಿದ್ದರು.
ಹಿಂದೂಗಳ ರಕ್ಷಣೆಗೆ ಆಗ್ರಹ: ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ ಭಾಗವಹಿಸಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿ, ಅವರಿಗೆ ಭದ್ರತೆ ಒದಗಿಸುವಂತೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಶ್ರೀವತ್ಸ, ಬಾಂಗ್ಲಾದೇಶದಲ್ಲಿರುವ ಹಿಂದೂಗಳ ರಕ್ಷಣೆಗೆ ನಾವಿದ್ದೇವೆ ಎಂಬ ನೈತಿಕ ಸ್ಥೈರ್ಯ ತುಂಬುವುದಕ್ಕೆ ಹಾಗೂ ಆ ದೇಶದ ಸಂಕಷ್ಟಕ್ಕೆ ದೇಶದ ಜನರನ್ನು ನಿಲ್ಲುವಂತೆ ಪ್ರೇರೇಪಿಸುವ ಜತೆಗೆ ಸರ್ಕಾರದ ಗಮನ ಸೆಳೆಯಲು ಇಡೀ ದಿನ ಜನ ಜಾಗೃತಿ ಕಾರ್ಯಕ್ರಮ ರೂಪಿಸಿದ್ದೇವೆ.
ನನ್ನ ಕ್ಷೇತ್ರದ 19 ವಾರ್ಡ್‍ಗಳಲ್ಲಿ ಪ್ರತಿ ವಾರ್ಡ್‍ನ ಮೂರು ಸಾರ್ವಜನಿಕ ಸ್ಥಳಗಳಲ್ಲಿ ಜನಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮದ ಮೂಲಕ ಪ್ರತಿಭಟನೆ ಆಯೋಜಿಸಿದ್ದೇವೆ. ಸರ್ಕಾರ ಬಾಂಗ್ಲಾದೇಶದಲ್ಲಿ ಇರುವ ಹಿಂದೂಗಳನ್ನು ರಕ್ಷಿಸಬೇಕೆಂದು ಕೋರುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ ಗೋಪಾಲ್ ರಾಜ ಅರಸ್, ಪ್ರಧಾನ ಕಾರ್ಯದರ್ಶಿ ಜೈಶಂಕರ, ಜಯರಾಮ್, ನಗರ ಉಪಾಧ್ಯಕ್ಷ ಎಂ.ಆರ್.ಬಾಲಕೃಷ್ಣ, ಮೈಸೂರು ನಗರ ಮಾಜಿ ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ಬಿಲ್ಲಯ್ಯ, ಚೇತನ್, ಚಂದ್ರಶೇಖರ್, ವಾದಿರಾಜ ಬಲ್ಲಾಳ್, ಹರೀಶ್, ರವಿ, ಕೀರ್ತಿ, ಕಿಶೋರ್ ಸೇರಿದಂತೆ ಹಲವರು ಭಾಗವಹಿಸಿದ್ದರು.