ಮಾವುತ ಮತ್ತು ಕಾವಾಡಿಗಳಿಗೆ ಸನ್ಮಾನ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ: ಆ.13:- ಮಾನವನ ಅತಿಯಾಸೆಯಿಂದಾಗಿ ಕಾಡು ಪ್ರಾಣಿಗಳ ವಾಸಪ್ರದೇಶ ಅತಿಕ್ರಮಣವಾಗುತ್ತಿದ್ದು ಮಾನವ ಮತ್ತು ಕಾಡು ಪ್ರಾಣಿಗಳ ನಡುವೆ ಸಂಘರ್ಷಣೆ ಏರ್ಪಟ್ಟಿದೆ ಎಂದು ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಅಧ್ಯಕ್ಷ ಜೆ.ಎಸ್.ನಾಗರಾಜ್ ತಿಳಿಸಿದರು.
ವಿಶ್ವ ಆನೆ ದಿನದ ಅಂಗವಾಗಿ ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಸಂಸ್ಥೆ ವತಿಯಿಂದ ತಾಲೂಕಿನ ಭೀಮನ ಕಟ್ಟೆ ಸಾಕಾನೆ ಶಿಬಿರದಲ್ಲಿ ಸೋಮವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾವುತ ಮತ್ತು ಕಾವಾಡಿಗಳಿಗೆ ಸನ್ಮಾನಿಸಿ ಮಾತನಾಡಿದರು. ಕಾಡು ಪ್ರಾಣಿಗಳಿಗೆ ಅಗತ್ಯವಾದ ಪರಿಪೂರ್ಣ ಆಹಾರ ದೊರಕದಿದ್ದಲ್ಲಿ ಅವುಗಳು ಆಹಾರವನ್ನು ಅರಸಿ ನಾಡಿನತ್ತ ವಲಸೆ ಬರುವುದು ಅನಿವಾರ್ಯವಾಗಿದೆ ಎಂದರು. ಕಾಡು ಪ್ರಾಣಿಗಳು ಕಾಡನ್ನು ತೊರೆದು ನಾಡಿನತ್ತ ನುಸುಳದಂತೆ ತಡೆಯಲು ಸರ್ಕಾರವು ಅರಣ್ಯದಂಚಿನಲ್ಲಿ ಕಂದಕಗಳ ನಿರ್ಮಾಣ, ಸೋಲಾರ್ ತಂತಿ ಬೇಲಿ ನಿರ್ಮಾಣ, ಸೋಲಾರ್ ತೂಗು ತಂತಿ ಅಳವಡಿಕೆ, ರೈಲ್ವೆ ಹಳಿಗಳನ್ನು ಬಳಸಿ ತಡೆ ಗೋಡೆಗಳ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಹ ಈವರೆಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದರು.
ಆನೆ ಎಂಬುದು ಬೃಹತ್ ಗಾತ್ರದ ಕಾಡಿನ ಸೌಮ್ಯ ಪ್ರಾಣಿಯಾಗಿದ್ದು ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯಂದಿರವರೆಗೂ ಅಚ್ಚುಮೆಚ್ಚಿನ ಪ್ರಾಣಿಯಾಗಿದೆ ಎಂದರು. ಅವಸಾನದ ಅಂಚಿನಲ್ಲಿ ಸಾಗುತ್ತಿರುವ ಆನೆಗಳ ಸಂತತಿಯನ್ನು ಸಂರಕ್ಷಿಸುವ ಸಲುವಾಗಿ 2011 ರಿಂದ ಆಗಸ್ಟ್ 12 ರಂದು ವಿಶ್ವ ಆನೆಗಳ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ, ಭಾರತದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ್ದಾಗಿದೆ ಎಂದರು. ಆನೆ ಬೃಹತ್ ಗಾತ್ರದ ಪ್ರಾಣಿಯಾಗಿದ್ದರೂ ಸಹ ಮಾವುತರು ಆನೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಪಳಗಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು. ಮಾವುತರು ತಮ್ಮ ಕುಟುಂಬದ ಸದಸ್ಯರೊಂದಿಗಿನ ಒಡನಾಟಕ್ಕಿಂತಲೂ ಹೆಚ್ಚು ಒಡನಾಟ ಆನೆಗಳೊಂದಿಗೆ ಹೊಂದಿದ್ದಾರೆ, ಆನೆಗಳ ಜೊತೆಗಿನ ಬಾಂಧವ್ಯದೊಂದಿಗೆ ತಮ್ಮ ಜೀವನವನ್ನು ಮುಡುಪಿಟ್ಟು ಬದುಕು ನಡೆಸುತ್ತಿರುವ ಮಾವುತರಿಗೆ ಉತ್ತಮ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಸರ್ಕಾರದ ಹೊಣೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾವುತರಾದ ತಮ್ಮಯ್ಯ ಮತ್ತು ವೆಂಕಟೇಶ್ ಮಾತನಾಡಿ ಆನೆಗಳ ಜೀವನಶೈಲಿ ಮತ್ತು ಮನಸ್ಥಿತಿಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಾಕಾನೆ ಶಿಬಿರದ ಮಾವುತರಾದ ವೆಂಕಟೇಶ್, ಜೆ.ಕೆ.ರವಿ, ಜೆ.ಎಸ್.ತಮ್ಮಯ್ಯ, ಹರೀಶ್ ಕಾವಾಡಿಗಳಾದ ಲವ, ಜೀವನ್, ಮಂಜು, ಗಣೇಶ್, ಕುಶಾಲಪ್ಪ ಅವರನ್ನು ಸನ್ಮಾನಿಸಲಾಯಿತು. ಹಾಗೂ ಅವರ ಕುಟುಂಬದ ಮಹಿಳೆಯರು ಮತ್ತು ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಸಂಸ್ಥೆ ಕಾರ್ಯದರ್ಶಿ ಬಿ.ಎಸ್.ಪ್ರಸನ್ನ ಕುಮಾರ್, ಖಜಾಂಚಿ ಬಿ.ಆರ್.ಗಣೇಶ್, ಸದಸ್ಯರಾದ ಸಿ.ಎನ್.ವಿಜಯ್, ವಿ.ಬಿ.ರವಿಚಂದ್ರ, ಸತೀಶ್ ಆರಾಧ್ಯ, ಡಿ.ಆರ್. ಧನಂಜಯ್, ಇಮ್ತಿಯಾಜ್ ಅಹಮದ್ ಸೇರಿದಂತೆ ಇತರರು ಇದ್ದರು.