ಮಾದಕ ವಸ್ತುಗಳ ಬಗ್ಗೆ ಯುವ ಜನತೆಗೆ ಅರಿವು ಅಗತ್ಯ
ಕೋಲಾರ,ಆ.೧೩- ಕೋಲಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ, ಆರೋಗ್ಯ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗ್ರಾಮವಿಕಾಸ ಮತ್ತು ಗ್ರೀನ್ ವಾರಿಯರ್ಸ್ ವತಿಯಿಂದ ಅಂತರಾಷ್ಟ್ರೀಯ ಯು ದಿನಾಚರಣೆ ಅಂಗವಾಗಿ ಪ್ಲಾಸ್ಟಿಕ್, ನಶಾ ಮತ್ತು ಎಚ್.ಐ.ವಿ ಮುಕ್ತ ಜಿಲ್ಲೆಗಾಗಿ ಯುವ ಜನರು ವಿಚಾರಗೊಷ್ಟಿಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ಆವರಣದಲ್ಲಿ ಗಿಡ ನೆಡುವ ಮೂಲಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್ ಹೊಸಮನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿ ಯುವಜನರು ಉತ್ತಮವಾಗಿ ಆರೋಗ್ಯವಾಗಿ ಬೆಳೆಯಬೇಕಾದರೆ ಯುವಜನರಿಗೆ ಮಾದಕ ವಸ್ತುಗಳ ಬಗ್ಗೆ ಅರಿವು ಅಗತ್ಯವಾಗಿ ಬೇಕಾಗಿದೆ ಅದರಿಂದ ಮಾದಕ ವಸ್ತುಗಳಿಂದ ದೂರವಿದ್ದು ಪಾಲಕರ ಪ್ರೀತಿ ಪಾತ್ರರಾಗಿ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಇತರರಿಗೂ ಮಾದರಿಯಾಗಿ ಬದುಕು ನಡೆಸಿರಿ ಎಂದು ಹೇಳಿದರು.
ಹದಿಹರೆಯದವರಿಗೆ ಉತ್ತಮ ಸೇವೆಗಳನ್ನು ಒದಗಿಸುವುದು ಹೇಗೆ ಹದಿಹರೆಯದವರಿಗೆ ಸ್ನೇಹಪರ ಆರೋಗ್ಯ ಸೇವೆಗಳನ್ನು ಆಸ್ಪತ್ರೆಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ, ಶಾಲೆಗಳಲ್ಲಿ ಮತ್ತು ಸಮುದಾಯದ ಮಟ್ಟದಲ್ಲಿ ಒದಗಿಸಬಹುದು. ಹದಿಹರೆಯದವರ ಜೀವನದಲ್ಲಿ ರೂಢಿಸಿಕೊಂಡ ನಡವಳಿಕೆಗಳು ಹಾಗೂ ಜೀವನ ಶೈಲಿಗಳು ಈಗಿನ ಮತ್ತು ಮುಂದಿನ ಜೀವನಕ್ಕೆ ಬುನಾದಿಯಾಗಲಿವೆ. ಇದರಿಂದ, ಮುಂದಿನ ಜನಾಂಗದ ಮೇಲೂ ಉತ್ತಮ ಪರಿಣಾಮ ಉಂಟಾಗುತ್ತದೆ. ಎಚ್.ಐ.ವಿ. ಯಾಕೆ ಹೆಚ್ಚಾಗುತ್ತಿದೆ ಅಂದರೆ ಈ ದಿನಗಳಲ್ಲಿ ಹದಿಹರೆಯದವರಲ್ಲಿ ಮದುವೆಗಿಂತ ಮೊದಲೇ ಲೈಂಗಿಕ ಚಟುವಟಿಕೆ ಪ್ರಾರಂಭಗೊಳ್ಳುತ್ತದೆ. ಲೈಂಗಿಕ ಸಂಬಂಧಗಳು ಕೆಲವೊಮ್ಮೆ ಒತ್ತಡದಿಂದಾಗಿ ಸಂಗಾತಿ ದೋಷದಿಂದಾಗಿ ಅಥವಾ ಮುಂದಾಲೋಚನೆ ಇಲ್ಲದೆ ಆಗಬಹುದು. ಆರೋಗ್ಯವೆಂದರೆ ಶಾರೀರಿಕವಾಗಿ, ಮಾನಸಿಕವಾಗಿ ಚೆನ್ನಾಗಿರುವುದು ಎಂದರ್ಥ. ಆರೋಗ್ಯವಂತ ವ್ಯಕ್ತಿ ದೈಹಿಕವಾಗಿ, ಮಾನಸಿಕವಾಗಿ ದೃಢವಾಗಿರುವನು. ಆರೋಗ್ಯವಂತ ವ್ಯಕ್ತಿಗಳನ್ನು ಸಮಾಜವು ಗುರುತಿಸುತ್ತದೆ. ಅಲ್ಲದೆ, ಅವರು ತಮ್ಮ ವ್ಯಕ್ತಿತ್ವವನ್ನು ತಾವೇ ರೂಢಿಸಿಕೊಳ್ಳಲು ಸಹಾಯ ಮಾಡುತ್ತದೆ. ಯಾವುದೇ ವ್ಯಕ್ತಿ ಉತ್ತಮ ಉದ್ಯೋಗ, ಉತ್ತಮ ಆದಾಯ ಗಳಿಸಬೇಕಾದರೆ ಆತನ ಆರೋಗ್ಯ ಸ್ಥಿತಿ ಉತ್ತಮವಾಗಿರಬೇಕು. ಆರೋಗ್ಯವಂತ ಯುವ ಜನರು ನಮ್ಮ ದೇಶದ ಸಂಪತ್ತು ಎಂದು ಆರೋಗ್ಯ ಇಲಾಖೆಯ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಜಿ.ಪ್ರಸನ್ನಕುಮಾರ್ ತಿಳಿಸಿದರು.
ಜನರು ಪ್ಲಾಸ್ಟಿಕ್ ಚೀಲಗಳಲ್ಲಿ ಹಸಿ ತ್ಯಾಜ್ಯವನ್ನು ತುಂಬಿ ಅವೈಜ್ಞಾನಿಕವಾಗಿ ಎಲ್ಲೆಂದರಲ್ಲಿ ಎಸೆಯುತ್ತಾರೆ. ಇದರಿಂದಾಗಿ ಆ ಹಸಿ ತ್ಯಾಜ್ಯ ನೆಲದ ಸಂಪರ್ಕವನ್ನು ಪಡೆಯದೇ ಅಲ್ಲಿ ಕೊಳೆತು ನಾರುತ್ತದೆ. ಮಣ್ಣಿನಲ್ಲಿ ಸೇರಿ ಹೋಗುವ ಅವಕಾಶ ಅದಕ್ಕೆ ಇರುವುದೇ ಇಲ್ಲ. ಇದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುವುದಲ್ಲದೆ ಮಣ್ಣಿನಲ್ಲಿರುವ ಎರೆಹುಳಗಳ ಜೀವಕ್ಕೆ ಮಾರಕವಾಗಿವೆ. ಪ್ಲಾಸ್ಟಿಕನ್ನು ಪರಿಸರದಲ್ಲಿ ಎಲ್ಲೆಂದರಲ್ಲಿ ಎಸೆದಾಗ ಅದು ಮಣ್ಣಿನಲ್ಲಿ ಸಸಿಗಳ ಬೇರು ಇಳಿಯದಂತೆ ತಡೆಯುತ್ತದೆ. ಇದರಿಂದಾಗಿ ಪ್ಲಾಸ್ಟಿಕ್ ಇರುವಲ್ಲಿ ಒಂದು ಹುಲ್ಲು ಕಡ್ಡಿ ಕೂಡ ಹುಟ್ಟುವುದಿಲ್ಲ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಅನ್ನು ಎಸೆಯುವ ಪರಿಣಾಮವಾಗಿ ನೀರು ಮಣ್ಣಿನಲ್ಲಿ ಇಂಗದಂತೆ ಪ್ಲಾಸ್ಟಿಕ್ ತಡೆಯುತ್ತದೆ. ಇದರಿಂದ ಅಂತರ್ಜಲದ ಮಟ್ಟ ಕುಸಿಯಲು ಪ್ಲಾಸ್ಟಿಕ್ ಕಾರಣವಾಗುತ್ತದೆ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹರಿಯುವ ಚರಂಡಿ, ನದಿಗಳಲ್ಲಿ ಬಿಸಾಡುವುದರಿಂದ ಜಲ ಮಾಲಿನ್ಯ ಉಂಟಾಗುವುದಲ್ಲದೆ ನೀರಿನ ಹರಿವಿಗೆ ತೊಂದರೆ ಉಂಟಾಗುತ್ತದೆ. ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ತಟ್ಟೆ ಲೋಟಗಳಲ್ಲಿ ನೀರು ನಿಲ್ಲುತ್ತದೆ. ಅದರಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತವೆ. ಆದ್ದರಿಂದ ಇವು ಮಲೇರಿಯಾ, ಫೈಲೇರಿಯಾ (ಆನೆಕಾಲು ರೋಗ), ಡೆಂಗ್ಯೂ, ಚಿಕುನ್ ಗುನ್ಯಾದಂಥ ಸಾಂಕ್ರಾಮಿಕ ರೋಗಗಳ ಆಶ್ರಯತಾಣವಾಗುತ್ತೀವೆಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರಾಧಿಕಾರಿ ಡಾ.ಕೆ.ರಾಜು ತಿಳಿಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ತ್ಯಾಗರಾಜು, ಹೂಹಳ್ಳಿ ನಾಗರಾಜ್, ಜಿಲ್ಲಾಧಿಕಾರಿ ಕಛೇರಿಯ ತಹಸೀಲ್ದಾರ್ ಶಿರಿನ್ ತಾಜ್, ಆರೋಗ್ಯ ಇಲಾಖೆಯ ಪ್ರೇಮಾ, ಹೇಮಾಲತಾ, ಮಹಿಳಾ ನಾಯಕಿ ಶಶಿಕಲಾ, ಗ್ರೀನ್ ವಾರಿಯರ್ಸ್ ಆನಂದ ಮಹಾರಾಜ್, ಶ್ಯಾಮಲ, ತೇಜು, ಚಂದನ, ನಂದಿತಾ, ಫಾಹೀಮಾ ಮುಂತಾದವರು ಭಾಗವಹಿಸಿದ್ದರು.