ಭ್ರಷ್ಟಾಚಾರ, ಕಳಪೆ ಕಾಮಗಾರಿ ವಿರುದ್ಧ ನೀರಾವರಿ ಕಚೇರಿ ಮುಂದೆ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.13: ನೀರಾವರಿ ಇಲಾಖೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿಯ ವಿರುದ್ಧ ತಾಲೂಕು ರೈತಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪಟ್ಟಣದ ಹೇಮಾವತಿ ಜಲಾಶಯ ವ್ಯಾಪ್ತಿಯ ಹೆಚ್.ಎಲ್.ಬಿ.ಸಿ ನಂ 03 ವಿಭಾಗೀಯ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ನೇತೃತ್ವದಲ್ಲಿ ನೀರಾವರಿ ಇಲಾಖೆಯ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿದ ರೈತರು ಮತ್ತು ಕನ್ನಡ ಪರ ಹೋರಾಟಗಾರರು ಇಂಜಿನಿಯರುಗಳ ವಿರುದ್ದ ದಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಧರಣಿ ಆರಂಭಿಸಿದರು. ಇಂಜಿನಿಯರುಗಳನ್ನು ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡ ರೈತ ಮುಖಂಡ ಎಂ.ವಿ.ರಾಜೇಗೌಡ ತಾಲೂಕು ಕುಂದೂರು ಗ್ರಾಮ ವ್ಯಾಪ್ತಿಯಲ್ಲಿ ಆರಂಭಗೊಂಡು ಮಲ್ಲೇನಹಳ್ಳಿಯವರೆಗೆ ಹಾದುಹೋಗಿರುವ 31 ಕಿ.ಮೀ ಉದ್ದದ ಹೇಮಾವತಿ ವಿತರಣಾ ನಾಲೆಯ ಅಧುನೀಕರಣ ಕಾಮಗಾರಿ ಅತ್ಯಂತ ಕಳಪೆಯಾಗಿದೆ. ತಾಲೂಕಿನ ಕಸಬಾ ಹೋಬಳಿಯ ಐದು ಸಾವಿರಕ್ಕೂ ಅಧಿಕ ಪ್ರದೇಶಕ್ಕೆ ನೀರೊದಗಿಸುವ 54 ನೇ ವಿತರಣಾ ನಾಲೆಯ ಆಧುನೀಕರಣ ಕಾಮಗಾರಿ ಈ ಭಾಗದ ರೈತ ಹೋರಾಟಗಾರರ ದಶಕಗಳ ಹೋರಾಟದ ಫಲವಾಗಿ ಆರಂಭಗೊಂಡಿದೆ. 55 ಕೋಟಿ ರೂಗಳ ಈ ಕಾಮಗಾರಿ ನಿಯಮಾನುಸಾರ ನಡೆಯುತ್ತಿಲ್ಲ. ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಮತ್ತು ಇಂಜಿನಿಯರುಗಳು ಪರಸ್ಪರ ಶಾಮೀಲಾಗಿ ಕಳಪೆ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ನಾಲೆಯ ಲೈನಿಂಗ್ ಕಾಮಗಾರಿಗೆ ಗುಣಮಟ್ಟದ ಕಬ್ಬಿಣ ಬಳಕೆ ಮಾಡುತ್ತಿಲ್ಲ. ನಿಯಮಾನುಸಾರ ಗುಣಮಟ್ಟದ ಗ್ರಾವಲ್ ಮಣ್ಣನ್ನು ಹೊರಗಿನಿಂದ ತಂದು ಹಾಕುವ ಬದಲು ಸ್ಥಳದಲ್ಲಿಯ ಸಪ್ಪೆ ಮಣ್ಣನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಲೈನಿಂಗ್ ಆರಂಭದಲ್ಲಿಯೇ ಕಿತ್ತು ಹೋಗುತ್ತಿದೆ. ಕಾಮಗಾರಿ ಹೆಸರಿನಲ್ಲಿ ರೈತರ ತೆರಿಗೆ ಹಣವನ್ನು ಲೂಟಿ ಮಾಡುವ ಕಾರ್ಯಕ್ರಮ ನಡೆಯುತ್ತಿದೆ. ಇಂಜಿನಿಯರುಗಳ ನಮ್ಮೊಂದಿಗೆ ಬಂದು ಸ್ಥಳಪರಿಶೀಲನೆ ಮಾಡಿ ಕಾಮಗಾರಿ ಗುಣಮಟ್ಟದ ಬಗ್ಗೆ ವರದಿ ನೀಡುವಂತೆ ಪಟ್ಟು ಹಿಡಿದರು.
ರೈತರ ಕೆರೆ ಖಾಸಗಿ ವ್ಯಕ್ತಿ ಪಾಲು: ಪಟ್ಟಣದ ಹೊರವಲಯದ ತೇಗನಹಳ್ಳಿ ಎಲ್ಲೆಯಲ್ಲಿರುವ ಸರ್ವೆ ನಂ 77 ರಲ್ಲಿ ಕಾಳೇಗೌಡನ ಕಟ್ಟೆ ಎನ್ನುವ ಚಿಕ್ಕ ಕೆರೆಯಿದೆ. ಸದರಿ ಕೆರೆಯನ್ನು ಪುರ ಗ್ರಾಮದ ಪ್ರಭಾವಿ ಗುತ್ತಿಗೆದಾರನೊಬ್ಬ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದಾನೆ. ಕೆರೆಗೆ ಬೇಲಿ ಹಾಕಿ ಸಾರ್ವಜನಿಕರು ತಿರುಗಾಡದಂತೆ ಹಾಗೂ ಕೆರೆಯ ನೀರನ್ನು ಬಳಕೆ ಮಾಡುವುದಕ್ಕೆ ತಡೆಯೊಡ್ಡಿದ್ದಾನೆ. ಸದರಿ ಕೆರೆಯ ಅಭಿವೃದ್ದಿಗೆ ನೀರಾವರಿ ಇಲಾಖೆ 33 ಲಕ್ಷಕ್ಕೂ ಅಧಿಕ ಅನುದಾನ ಹಾಕಿದೆ. ಸಾರ್ವಜನಿಕರ ಕೆರೆಯನ್ನು ತನ್ನ ವಶಕ್ಕೆ ಪಡೆದುಕೊಂಡು ಸದರಿ ಗುತ್ತಿಗೆದಾರ ಇಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದಾನೆ. ಸಾರ್ವಜನಿಕರ ಕೆರೆ ಖಾಸಗಿ ವ್ಯಕ್ತಿಯ ಪಾಲಾಗಿದ್ದರೂ ಅದನ್ನು ಸಾರ್ವಜನಿಕರಿಗೆ ತೆರವುಗೊಳಿಸುವ ಕೆಲಸವನ್ನು ಎಂಜಿನಿಯರುಗಳು ಮಾಡುತ್ತಿಲ್ಲ.ಸಾರ್ವಜನಿಕರ ಆಸ್ತಿಯನ್ನು ಸಂರಕ್ಷಿಸುವ ತಾಕತ್ತು ನಿಮಗಿಲ್ಲದಿದ್ದರೆ ನೀವು ಏಕೆ ಸರ್ಕಾರಿ ಕೆಲಸದಲ್ಲಿರಬೇಕು ಎಂದು ರೈತ ಮುಖಂಡ ಎಂ.ವಿ.ರಾಜೇಗೌಡ ಇಂಜಿನಿಯರುಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಕೆರೆ ತೆರವುಗೊಳಿಸುವಂತೆ ಆಗ್ರಹಿಸಿದರು.
ಕಾಲುವೆಗೆ ನೀರು ಬಿಟ್ಟ ಸಮಯದಲ್ಲಿ ಹೂಳೆತ್ತುವ ಕಾಮಗಾರಿ:- ತಾಲೂಕು ವ್ಯಾಪ್ತಿಯಲ್ಲಿ ಹೇಮಾವತಿ ಜಲಾಶಯ ವ್ಯಾಪ್ತಿಯ ನಾಲೆಗಳಿಗೆ ಈಗಾಗಲೇ ನೀರು ಬಿಟ್ಟಿದ್ದು ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಇಂತಹ ಸಮಯದಲ್ಲಿ ಹರಿಯುತ್ತಿರುವ ನೀರು ನಿಲ್ಲಿಸಿ ಕಾಲುವೆಗಳ ಹೂಳೆತ್ತುವ ಮತ್ತು ಜಂಗಲ್ ಕಟ್ ಮಾಡುವ ಕೆಲಸಕ್ಕೆ ಇಲಾಖೆ ಮುಂದಾಗಿರುವುದು ಎಷ್ಟು ಸರಿ. ಬೇಸಿಗೆ ಕಾಲದಲ್ಲಿ ಅಗತ್ಯ ಯೋಜನೆ ರೂಪಿಸಿ ನಾಲೆಗಳ ಹೂಳೆತ್ತಿ. ನೀರು ನಿಲ್ಲಿಸಿ ಹೂಳೆತ್ತುವುದಾದರೆ ರೈತರಿಗೆ ನಷ್ಟ ಪರಿಹಾರಕೊಡಿ ಎಂದು ರೈತ ಹೋರಟಗಾರರು ಪಟ್ಟ ಹಿಡಿದರು.
ಸ್ಥಳಕ್ಕೆ ಆಗಮಿಸಿದ ಹೇಮಾವತಿ ಜಲಾಶಯ ಯೋಜನೆಯ ಅಧೀಕ್ಷಕ ಇಂಜಿನಿಯರ್ ಎಂ.ಎನ್.ಕಿಶೋರ್ ರೈತ ಹೋರಟಗಾರರ ಅಹವಾಲುಗಳನ್ನು ಆಲಿಸಿ ಆಗಿರುವ ಲೋಪಗಳನ್ನು ಸರಿಪಡಿಸುವ ಭರವಸೆ ನೀಡಿದರಲ್ಲದೆ ರೈತ ಸಮುದಾಯಕ್ಕೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಹೂಳೆತ್ತುವ ಕಾಮಗಾರಿ ನಡೆಸುವ ಭರವಸೆ ನೀಡಿದರು.
ಅಧೀಕ್ಷಕ ಇಂಜಿನಿಯರ್ ಅವರ ಭರವಸೆಗಳನ್ನು ಒಪ್ಪದ ರೈತ ಹೋರಾಟಗಾರರು ಕಳಪೆ ಕಾಮಗಾರಿ ಮತ್ತು ಖಾಸಗಿ ವ್ಯಕ್ತಿಯ ಪಾಲಾಗಿರುವ ಸರ್ಕಾರಿ ಕೆರೆಗೆ ಭೇಟಿ ನೀಡಿ ಪರಿಶೀಲಿಸಿ ರೈತರಿಗೆ ನ್ಯಾಯ ದೊರಕಿಸಿಕೊಡುವಂತೆ ಪಟ್ಟು ಹಿಡಿದರು. ರೈತರ ಹೋರಾಟಕ್ಕೆ ಮಣಿದ ಅಧೀಕ್ಷಕ ಇಂಜಿನಿಯರ್ ಕಿಶೋರ್ ಸ್ಥಳಪರಿಶೀಲನೆಗೆ ರೈತರೊಂದಿಗೆ ತೆರಳಿದರು.
ಅಡ್ಡಿ:- ಪಟ್ಟಣದ ಹೊರವಲಯದ ತೇಗನಹಳ್ಳಿ ಬಳಿ ಖಾಸಗಿ ವ್ಯಕ್ತಿ ವಶಪಡಿಸಿಕೊಂಡಿರುವ ಸರ್ಕಾರಿ ಕೆರೆಯ ಬಳಿ ಅಧಿಕಾರಿಗಳನ್ನು ಬಿಡಲು ಖಾಸಗಿ ವ್ಯಕ್ತಿಯ ಕಡೆಯವರು ಅಡ್ಡಿಪಡಿಸಿದರು. ಕೆರೆಯ ಸುತ್ತ ಬೇಲಿಹಾಕಿಕೊಂಡಿದ್ದು ಗೇಟ್ ಅಳವಡಿಸಿಕೊಂಡಿರುವುದರಿಂದ ಅಧಿಕಾರಿಗಳು ಪೆÇಲೀಸರ ನೆರವು ಪಡೆದು ಒಳಪ್ರವೇಶಿಸಬೇಕಾಯಿತು. ಕೆರೆ ಅತಿಕ್ರಮಣ ಹಾಗೂ 54 ನೇ ವಿತರಣಾ ನಾಲೆಯ ಕಳಪೆ ಕಾಮಗಾರಿಗಳನ್ನು ಪರಿಶೀಲಿಸಿದ ಅಧೀಕ್ಷಕ ಎಂಜಿನಿಯರ್ ಕಿಶೋರ್ ಕಾಮಗಾರಿ ಬಿಲ್ ತಡೆಹಿಡಿಯುವಂತೆ ಸ್ಥಳದಲ್ಲಿದ್ದ ಕಾರ್ಯಪಾಲಕ ಅಭಿಯಂತರ ಆನಂದ್ ಅವರಿಗೆ ಆದೇಶಿಸಿದರಲ್ಲದೆ ಗುಣಮಟ್ಟದ ಕಾಮಗಾರಿ ಮಾಡಿಸುವ ಭರವಸೆಯನ್ನು ರೈತ ಹೋರಟಗಾರರಿಗೆ ನೀಡಿದರು.
ರೈತ ಹೋರಾಟಗಾರರಾದ ಎಂ.ವಿ.ರಾಜೇಗೌಡ, ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಕೆ.ಆರ್.ಜಯರಾಂ, ಎಲ್.ಬಿ.ಜಗದೀಶ್, ಮರುವನಹಳ್ಳಿ ಶಂಕರ್, ಕರೋಟಿ ತಮ್ಮಯ್ಯ, ಹೊನ್ನೇಗೌಡ, ಕರವೇ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು, ತಾಲೂಕು ಅಧ್ಯಕ್ಷ ಶ್ರೀನಿವಾಸ್, ಕರವೇ ಪದವೀಧರರ ಘಟಕದ ಅಧ್ಯಕ್ಷ ಸಿ.ಬಿ.ಚೇತನ್ ಕುಮಾರ್, ಶಿವಪ್ರಸಾದ್, ಗೋಪಿ, ಆನಂದ, ಅನಿಲ್ ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿದ್ದರು.