ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಹುಟ್ಟು ಹಬ್ಬ ಆಚರಣೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.13: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 77 ನೇ ಹುಟ್ಟು ಹಬ್ಬವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಸ್ಥಳೀಯ ಕಾಂಗ್ರೆಸ್ ಮುಖಂಡರು ಆಚರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬಿ.ನಾಗೇಂದ್ರ ಕುಮಾರ್ ಮತ್ತು ಹರಳಹಳ್ಳಿ ವಿಶ್ವನಾಥ್ ನೇತೃತ್ವದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಸಿದ್ದರಾಮಯ್ಯ ಬಡವರು ಮತ್ತು ದೀನ ದಲಿತರ ಪರವಾದ ವ್ಯಕ್ತಿ. ತಮ್ಮ ನಲವತ್ತು ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಕಳಂಕ ರಹಿತ ಆಡಳಿತ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಕ್ಕೆ ತಂದು ಬಡವರ ಬದುಕಿಗೆ ಆಸರೆಯಾಗಿದ್ದಾರೆ. ಎರಡನೇ ಸಲ ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರ ಜನಪ್ರಿಯತೆಯಿಂದ ಆತಂಕಗೊಂಡಿರುವ ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಪಾದಯಾತ್ರೆಯ ಮೂಲಕ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಹಚ್ಚಲು ಮುಂದಾಗಿವೆ. ಇದನ್ನು ನಾವೆಲ್ಲರೂ ಕಂಡಿಸುತ್ತೇವೆ. ಸಿದ್ದರಾಮಯ್ಯ ದೇಶದ ಪ್ರದಾನಿಯಾಗಬೇಕೆಂಬ ಬಯಕೆ ನಮ್ಮದಾಗಿದ್ದು ಅವರಿಗೆ ಪಕ್ಷದ ಪರವಾಗಿ ಮತ್ತು ಬಡ ಜನರ ಪರವಾಗಿ ಹುಟ್ಟು ಹಬ್ಬದ ಶುಭ ಕೋರಲಾಗುತ್ತಿದೆ ಎಂದರು.
ಮಾಜಿ ಶಾಸಕ ಬಿ.ಪ್ರಕಾಶ್, ಮುಖಂಡರಾದ ವಿಜಯರಾಮೇಗೌಡ, ಎಂ.ಡಿ.ಕೃಷ್ಣಮೂರ್ತಿ, ಕಿಕ್ಕೇರಿ ಸುರೇಶ್, ಕೋಡಿಮಾರನಹಳ್ಳಿ ದೇವರಾಜು, ಶೀಳನೆರೆ ಅಂಬರೀಶ್, ಕೆ.ಆರ್.ರವಿಂದ್ರಬಾಬು, ಅಗಸರಹಳ್ಳಿ ಗೋವಿಂದರಾಜು,ಅಕ್ಕಿಹೆಬ್ಬಾಳು ದಿವಾಕರ್, ಸ್ನೇಹಿತ ರಮೇಶ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆ.ಪುರುಷೋತ್ತಮ್ ಸೇರಿದಂತೆ ಹಲವರು ಮಾತನಾಡಿ ಮುಖ್ಯಮಂತ್ರಿಗಳಿಗೆ ಹುಟ್ಟು ಹಬ್ಬದ ಶುಭಕೋರಿದರು.