ಭೂ ಸ್ವಾಧೀನ ಪರಿಹಾರಕ್ಕೆ ಆಗ್ರಹ
ರಾಯಚೂರು,ಆ.೧೨ – ರಾಷ್ಟ್ರೀಯ ಹೆದ್ದಾರಿ ೭೪೮ಎ ಗಾಗಿ ಸ್ವಾಧೀನ ಮಾಡಿಕೊಳ್ಳುವ ಜಮೀನಿಗೆ ನ್ಯಾಯಬದ್ದ ಪರಿಹಾರ ಒದಗಿಸಲು ಜಿಲ್ಲಾಧಿಕಾರಿಗಳು ಮುಂದಾಗಬೇಕು ಎಂದು ಹೆದ್ದಾರಿ ೭೪೮ಎ ಭೂಸಂತ್ರಸ್ಥ ರೈತರ ಹೋರಾಟ ಸಮಿತಿಯ ಸಂಚಾಲಕ ಶರಣಪ್ಪ ಉದ್ಬಾಲ್ ಒತ್ತಾಯಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ೭೪೮ಎ ಗಾಗಿ ಸ್ವಾಧೀನ ಮಾಡಿಕೊಳ್ಳುವ ಜಮೀನಿಗೆ ಪರಿಹಾರ ಒದಗಿಸುವರೆಗೂ ಭೂ ಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಳಿಸಬೇಕು. ಬೆಳಗಾವಿ-ಹುನಗುಂದ-ರಾಯಚೂರು ೭೪೮ಎ ಹೆದ್ದಾರಿಗಾಗಿ ಜಮೀನು ಕಳೆದು ಕೊಳ್ಳವ ರೈತರಿಗೆ ಬದುಕು ಕಟ್ಟಿಕೊಳ್ಳಲು ಪರ್ಯಾಯ ಜಮೀನು ಕೊಡಬೇಕು. ಇಲ್ಲವಾದರೆ ಪ್ರಸಕ್ತ ವಾಸ್ತವದಲ್ಲಿ ಇರುವ ನ್ಯಾಯಯುತ ಮಾರುಕಟ್ಟೆ ಬೆಲೆಯನ್ನು ನಿಗದಿ ಮಾಡಿ ಜಮೀನು ಕಳೆದುಕೊಳ್ಳವ ರೈತರಿಗೆ ನ್ಯಾಯಬದ್ದ ಪರಿಹಾರ ಕೊಟ್ಟು ಭೂ ಸಂತ್ರಸ್ತರ ಹಿತ ಕಾಪಾಡಿದರೆ ಮಾತ್ರ ಜಮೀನು ಕೊಡಲು ಸಿದ್ದರಿದ್ದೇವೆ ಇಲ್ಲವಾದರೆ, ನಮ್ಮ ಬದುಕಿಗೆ ಮಾರಕವಾಗಿ ಬರುತ್ತಿರುವ ಈ ಹೆಮ್ಮಾರಿ ಹೆದ್ದಾರಿಗೆ ಜೀವಬೇಕಾದರು ಕೊಟ್ಟೆವು. ಜಮೀನು ಕೊಡುವುದಿಲ್ಲ ಎಂದು ಎಚ್ಚರಿಸಿದರು.
ಕಳೆದ ವರ್ಷದಿಂದ ಮನವಿ ಮಾಡುತ್ತಾ ಬಂದರು ಇಲ್ಲಿಯವರೆಗೆ ಸಮಬಂಧಪಟ್ಟ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಯಾವುದೇ ರೀತಿಯ ಸ್ಪಂದನೆ ನೀಡದಿರುವುದು ಖಂಡನೀಯ.
ಭಾರತಮಾಲ ಯೋಜನೆಯಲ್ಲಿ ನಿರ್ಮಾಣ ಮಾಡಲು ಹೊರಟಿರುವ ಬೆಳಗಾವಿ-ಹುನಗುಂದ- ರಾಯಚೂರು ೭೪೮ಎ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಹೋಗುವ ಒಟ್ಟು ೨೬೨೯.೫ ಹೆಕ್ಟೇರ್ ಜಮೀನಿನಲ್ಲಿ ರಾಯಚೂರು ಜಿಲ್ಲೆಯ ೭೪೧.೪೮ ಹೆಕ್ಟೇರ್ ಜಮೀನು ಹೋಗುತ್ತದೆ. ಇಲ್ಲಿ ಮೊದಲನೆಯದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಭೂ ಸ್ವಾಧೀನಕ್ಕಾಗಲಿ, ಬೆಲೆ ನಿಗದಿಗಾಗಲಿ ಅಗತ್ಯವಿರುವ ಯಾವುದೇ ಕಾನೂನಿನ ನಿಯಮಗಳನ್ನು ಪಾಲನೆ ಮಾಡದೆ. ರೈತರ ಜಮೀನಿನಲ್ಲಿ ರಸ್ತೆ ಹಾದು ಹೋಗುವುದನ್ನು ಮಾರ್ಕ್ ಮಾಡಿ. ಹೆದ್ದಾರಿಗಾಗಿ ಜಮೀನು ಸ್ವಾಧೀನ ಮಾಡಿಕೊಳ್ಳಲು ಹೊರಟಿರುವುದೇ ದೊಡ್ಡ ತಪ್ಪು. ವಿಶೇಷ ಭೂಸ್ವಾಧೀನ ಅಧಿಕಾರಿ ಬಾಗಲಕೋಟ ಅವರು ಸಾಧೀನ ಮಾಡಿಕೊಂಡ ಜಮೀನಿನಲ್ಲಿ ರೈತರು ಉಳುಮೆ ಮಾಡುತ್ತಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ರಾಯಚೂರು ಜಿಲ್ಲಾಧಿಕಾರಿಗಳಿಗೆ ೨೦೨೩ ಸಪ್ಟೆಂಬರ್ ತಿಂಗಳಿನಲ್ಲಿ ಪತ್ರ ಬರೆದಿದ್ದಾರೆ. ಜಿಲ್ಲಾಧಿಕಾರಿಗಳು ಆ ಪತ್ರವನ್ನು ಎಲ್ಲಾ ತಹಶಿಲ್ದಾರರಿಗೆ ರವಾನಿಸಿದ್ದಾರೆ. ಇಲ್ಲಿ ರೈತನಿಗೆ ತನ್ನ ಜಮೀನಿನಲ್ಲಿ ಹೆದ್ದಾರಿಗಾಗಿ ಎಷ್ಟು ಜಮೀನು ಹೋಗುತ್ತದೆ ಅನ್ನುವುದೇ ಗೊತ್ತಿಲ್ಲ, ಅಂತಹುದ್ದರಲ್ಲಿ ತಮ್ಮ ಜಮೀನಿನಲ್ಲಿ ಉಳುಮೆ ಮಾಡಿದರೆ ಅದು ತಪ್ಪೆಂದು ಅವರ ಮೇಲೇರಿ ಹೋಗುವುದು ಎಂಥಹ ವಿಪರ್ಯಾಸ ? ಈ ರೀತಿ ಭೂಸಂತ್ರಸ್ತರಿಗೆ ಹೆದರಿಸಿ ಬೆದರಿಸಿ ಒಂದು ರೀತಿಯ ಭಯ ಹುಟ್ಟಿಸುವ ದಿಕ್ಕಿನಲ್ಲಿ ಹೆದ್ದಾರಿ ಪ್ರಾಧಿಕಾರ ನಡೆದು ಕೊಂಡಿದೆ.ಕೂಡಲೇ ಪ್ರಸಕ್ತ ಮಾರುಕಟ್ಟೆ ದರಕ್ಕನುಗುಣವಾಗಿ ನ್ಯಾಯವಾದ ದರ ನಿಗದಿಗೆ ಮುಂದಾಗಬೇಕು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಲ್ಲನಗೌಡ ಹಳ್ಳಿ, ಸಿದ್ಧಲಿಂಗಪ್ಪ ಸಾಹುಕಾರ ಬುದ್ಧಿನ್ನಿ, ಶರಣಗೌಡ ಬಸ್ಸಾಪುರ, ಶಿವನಗೌಡ ವಟಗಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.