ಆಧಾರ್ ಕಾರ್ಡ್ ನ್ನು 10 ವರ್ಷದಿಂದ ಅಪ್‌ಡೇಟ್‌ ಮಾಡಿರದವರು ಮತ್ತೊಮ್ಮೆ ಮಾಡಿಸಿ : ಜಿಲ್ಲಾಧಿಕಾರಿ ಡಾ.ಸುಶೀಲ.ಬಿ
ಯಾದಗಿರಿ: ಆ. 12: ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಪಡೆದು 10 ವರ್ಷ ಮೇಲ್ಪಟ್ಟ ಹಾಗೂ ಇಲ್ಲಿಯವರೆಗೂ ಆಧಾರ್ ಕಾರ್ಡ್ ನವೀಕರಿಸದೆ ಇರುವವರು ತಮ್ಮ ವೈಯಕ್ತಿಕ ಗುರುತಿನ ದಾಖಲೆ ಹಾಗೂ ವಿಳಾಸದ ದಾಖಲೆಗಳೊಂದಿಗೆ ಹತ್ತಿರದ ಆಧಾರ್ ನೋಂದಣಿ ಅಥವಾ ಆನ್ ಲೈನ್ ಕೇಂದ್ರದಲ್ಲಿ ಯುಐಡಿಎಐ ಸಂಸ್ಥೆ ಅಭಿವೃದ್ಧಿಪಡಿಸಿರುವ ಹೊಸ ವಿಶಿಷ್ಟ ದಾಖಲಾತಿ ನವೀಕರಣ ತಂತ್ರಾಂಶದಲ್ಲಿ ನವೀಕರಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಸುಶೀಲ ಬಿ.ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಆಧಾರ ದಾಖಲಾತಿಗಳನ್ನು ಬಲಪಡಿಸಲು ಹಾಗೂ ಆಧಾರ ಸಂಬಂಧಿಸಿದ ಕಾರ್ಯಗಳನ್ನು ಸಂಯೋಜಿಸುವ ಸಲುವಾಗಿ ಜಿಲ್ಲಾಮಟ್ಟದ ಆಧಾರ ಸಮಿತಿ ರಚಿಸಿ ಅವರು ಮಾತನಾಡಿದರು.
ಆಧಾರ್‌ ಕಾರ್ಡ್ ಪಡೆದು 10 ವರ್ಷವಾಗಿದ್ದರೂ ಈಗ ಮತ್ತೊಮ್ಮೆ ಅಪ್‌ಡೇಟ್‌ ಮಾಡಿಸಬೇಕಿದೆ. ಇದಕ್ಕೆ ಕಾರಣ ಆಧಾರ್ ಕಾರ್ಡ್ ಪಡೆದ ವ್ಯಕ್ತಿಯ ಬಗ್ಗೆ ಮಾಹಿತಿಯನ್ನು ಅಪ್‌ಡೇಟ್‌ ಮಾಡೋದು ಮತ್ತು ದುರುಪಯೋಗ ತಪ್ಪಿಸುವ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
5 ವರ್ಷ ಮೇಲ್ಪಟ್ಟು 7 ವರ್ಷದ ಒಳಗಿನ ಎಲ್ಲಾ ಮಕ್ಕಳ ಬಯೋಮೇಟ್ರಿಕ್ ಮತ್ತು ಮೊಬೈಲ್ ಸಂಖ್ಯೆಯನ್ನು ಸಹ ನವೀಕರಣಗೊಳಿಸಬೇಕು. ಸರ್ಕಾರದ ವಿವಿಧ ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸಿರುವುದರಿಂದ ಜಿಲ್ಲೆಯ ನಾಗರಿಕರು ಆಧಾರ್ ನೋಂದಣಿ ಮಾಡಿಕೊಳ್ಳಬೇಕು. ಅಲ್ಲದೇ ಪ್ರತಿ 10 ವರ್ಷಕ್ಕೊಮ್ಮೆ ಬಯೋಮೆಟ್ರಿಕ್ ನವೀಕರಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಆಧಾರ್ ಕಾರ್ಡ್ ಅಪ್‌ಡೇಟ್‌ಗೆ ಶುಲ್ಕ 50 ರಿಂದ 100 ರೂ.:
ಹೊಸದಾಗಿ ಆಧಾರ್ ನೋಂದಣಿಗೆ ಮತ್ತು 5 ವರ್ಷ ಮೇಲ್ಪಟ್ಟು 7 ವರ್ಷದ ಒಳಗಿನ ಎಲ್ಲಾ ಮಕ್ಕಳ ಬಯೋಮೇಟ್ರಿಕ್ ನವೀಕರಣವು ಉಚಿತವಾಗಿರುತ್ತದೆ. ಉಳಿದಂತೆ ಹೆಸರು, ಲಿಂಗ, ವಯಸ್ಸು, ವಿಳಾಸ ಹಾಗೂ ಮೊಬೈಲ್ ನಂಬರುಗಳ ವಿವರ (ಡೆಮೋಗ್ರಾಫಿಕ್) ನವೀಕರಣಕ್ಕೆ 50 ರೂ. ಮತ್ತು ಕಣ್ಣು, ಮುಖ, ಕೈ ಬೆರಳುಗಳ ವಿವರ (ಬಯೋಮೆಟ್ರಿಕ್) ನವೀಕರಣಕ್ಕೆ 100 ರೂ.ಗಳ ಸೇವಾ ಶುಲ್ಕ ಇದ್ದು, ಸಾರ್ವಜನಿಕರು ಇದಕ್ಕಿಂತ ಹೆಚ್ಚಿನ ಶುಲ್ಕ ಪಾವತಿ ಮಾಡಬೇಕಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಸಂಗೀತ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯಕುಮಾರ್ ಮಡ್ಡೆ, ಯುಐಡಿಎಐ ಸಂಸ್ಥೆ ಮ್ಯಾನೇಜರ್ ರಿಕೇಶ ಕುಮಾರ, ಸಹಾಯಕ ಅಂಚೆ ಅಧೀಕ್ಷಕ ಕೃಷ್ಣ ಮೋಹಿತೆ, ಡಿಡಿಪಿಯು ಚನ್ನಬಸಪ್ಪ ಕುಳಗೇರಿ, ಶಿರಸ್ತೆದಾರ ಸುನಿತಾ ಪಿ ಹುಕ್ಕೇರಿ, ಜಿಲ್ಲಾ ಆಧಾರ ಸಂಯೋಜಕ ಪ್ರವೀಣ ಕುಮಾರ ಕುಲ್ಕರ್ಣಿ ಸೇರಿದಂತೆ ಇನ್ನಿತರ ಅಧಿಕಾರಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.