ಹರ್‌ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸಿ
ರಾಯಚೂರು,ಆ.೯ – ಸ್ವಾತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ ಪ್ರತಿ ಮನೆ-ಮನೆ ಮೇಲೂ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಹರ್‌ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸಿ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರಿಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹರ್‌ಘರ್ ತಿರಂಗಾ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,
ರಾಷ್ಟ್ರಧ್ವಜ ನಮ್ಮ ದೇಶದ ಹೆಮ್ಮೆ. ಪ್ರತಿಯೊಬ್ಬ ನಾಗರೀಕನೂ ರಾಷ್ಟ್ರಧ್ವಜಕ್ಕೆ ಗೌರವಿಸುವ ಕೆಲಸವಾಗಬೇಕು. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ ಹರ್ ಘರ್ ತಿರಂಗಾ ಅಭಿಯಾನವನ್ನು ಆ.೧೩ ರಿಂದ ಆ.೧೫ರ ಹಮ್ಮಿಕೊಳ್ಳಲಾಗಿದೆ. ಕಳೆದ ಬಾರಿಯೂ ಜಿಲ್ಲೆಯಾದ್ಯಂತ ಈ ಅಭಿಯಾನ ಯಶಸ್ವಿಯಾಗಿತ್ತು. ಈ ಬಾರಿಯೂ ಹರ್‌ಘರ್ ತಿರಂಗಾ ಅಭಿಯಾನ ಮುಂದುವರಿದಿದೆ. ಪ್ರತಿಯೊಬ್ಬರಲ್ಲೂ ದೇಶಭಕ್ತಿ, ದೇಶಾಭಿಮಾನವನ್ನು ಮೂಡಿಸುವ ಈ ಅಭಿಯಾನವನ್ನು ಎಲ್ಲರೂ ಸಮರ್ಥವಾಗಿ ನಿರ್ವಹಿಸಬೇಕು. ಇದರನ್ವಯ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ತಮ್ಮ ಮನೆಗಳ ಮೇಲೆ ರಾಷ್ಟ್ರಂಧ್ವಜವನ್ನು ಸಂಜೆ ಸೂರ್ಯಾಸ್ತದವರೆಗೆ ನಿರಂತರವಾಗಿ ಧ್ವಜ ಹಾರಿಸಬೇಕು ತಿಳಿಸಿದರು.
ಭಾರತದ ಧ್ವಜ ಸಂಹಿತೆಯು ರಾಷ್ಟ್ರೀಯ ಧ್ವಜವು ಆಯತಾಕಾರವಾಗಿರಬೇಕು, ಉದ್ದ ಮತ್ತು ಎತ್ತರದ ನಿಗದಿತ ಅನುಪಾತದಲ್ಲಿರಬೇಕು. ಧ್ವಜವನ್ನು ಯಾವುದೇ ರೀತಿಯ ಅಲಂಕಾರ ಉದ್ದೇಶಗಳಿಗಾಗಿ ಬಳಸಬಾರದು. ತ್ರಿವರ್ಣ ಧ್ವಜಕ್ಕೆ ತನ್ನದೇ ಆದ ಗೌರವ, ಘನತೆ ಇರುತ್ತದೆ. ಮನೆಯಲ್ಲಿ ರಾಷ್ಟ್ರ,ಧ್ವಜವನ್ನು ಹಾರಿಸುವಾಗ ಮನೆಯ ಮೇಲಿನ ಅತೀ ಎತ್ತರದ ಜಾಗದಲ್ಲಿ ಮಾಡಬೇಕು. ಧ್ವಜ ಸ್ಥಂಭ ಮತ್ತು ಧ್ವಜ ನೆರವಾಗಿರಬೇಕು. ಅದು ಎಡಕ್ಕೆ ಬಲಕ್ಕೆ, ಹಿಂದಕ್ಕೆ ಮುಂದಕ್ಕೆ ವಾಲಿರಬಾರದು. ತ್ರಿವರ್ಣ ಧ್ವಜಕ್ಕಿಂತ ಎತ್ತರವಾಗಿ, ಸಮಾನವಾಗಿ ಹಾಗೂ ಧ್ವಜದ ಬಲಗಡೆ ಯಾವುದೇ ಧ್ವಜ ಇರಬಾರದು. ಗಲಿಜಾದ ಮತ್ತು ಹರಿದ ಧ್ವಜವನ್ನು ಬಳಸಬಾರದು. ಕೇಸರಿ ಬಣ್ಣ ಮೇಲೆ ಇರುವಂತೆ ಧ್ವಜಾರೋಹಣ ಮಾಡಬೇಕು. ಸಂವಿಧಾನವನ್ನು ಪಾಲಿಸುವುದು ಮತ್ತು ಅದರ ಆದರ್ಶಗಳು ಮತ್ತು ಸಂಸ್ಥೆಗಳು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಈ ಎಲ್ಲಾ ಅಂಶಗಳನ್ನು ಎಲ್ಲಾರೂ ಕಟ್ಟುನಿಟ್ಟಾಗಿ ಪಾಲನೆ ಮಾಡಿ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.