ನಿರುದ್ಯೋಗದ ಬಿಕ್ಕಟ್ಟು ಪರಿಹಾರ, ತುರ್ತುಕ್ರಮಕ್ಕೆ ಒತ್ತಾಯ
ರಾಯಚೂರು,ಆ.೧೨:ಅಖಿಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿಯಿಂದ ಭಾರತದಲ್ಲಿ ಯುವಜನರು ಎದುರಿಸುತ್ತಿರುವ ನಿರುದ್ಯೋಗ ಬಿಕ್ಕಟ್ಟು ಪರಿಹಾರಕ್ಕೆ ತುರ್ತುಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ನಿರುದ್ಯೋಗ ಹೋರಾಟ ಸಮಿತಿ ಒತ್ತಾಯಿಸಿದೆ.
ಯುವಜನತೆಯ ಉತ್ತಮ ಉದ್ಯೋಗಾವಕಾಶಗಳು ಮತ್ತು ಶಿಕ್ಷಣದ ಹುಡುಕಾಟದಲ್ಲಿ ತಮ್ಮ ತಾಯಿನಾಡು ಮತ್ತು ಪ್ರೀತಿಪಾತ್ರರನ್ನು ಬಿಟ್ಟು ನಮ್ಮ ದೇಶವನ್ನು ತೊರೆಯುತ್ತಿದ್ದಾರೆ. ವಲಸೆ ಕಾರ್ಮಿಕರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ವರ್ಷಗಳ ನಿರಂತರ ಪ್ರಯತ್ನ ಮತ್ತು ಹಲವಾರು ಪ್ರಯತ್ನಗಳ ನಂತರವೂ ಯು.ಪಿ. ಎಸ್.ಸಿ ಮತ್ತು ರಾಜ್ಯ ಸೇವಾ ಆಯೋಗಗಳ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಆರ್ಥಿಕ ಭದ್ರತೆ ಮತ್ತು ಸ್ಥಿರ ಉದ್ಯೋಗದ ಭರವಸೆ ನೀಡುವ ಸರ್ಕಾರಿ ಉದ್ಯೋಗವನ್ನು ಪಡೆಯುವ ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ನಿರುದ್ಯೋಗ ಬಿಕ್ಕಟ್ಟು ನಮ್ಮ ಯುವಜನರ ಮಾನಸಿಕತೆಯ ಮೇಲೆ ಭಾರಿ ದುಷ್ಪರಿಣಾಮವನ್ನು ಉಂಟುಮಾಡುತ್ತಿದೆ. ನಮ್ಮ ದೇಶವು ತನ್ನ ಯುವಜನರ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತಿಲ್ಲ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇವೆ. ಈ ನಿರುದ್ಯೋಗದ ಬಿಕ್ಕಟ್ಟನ್ನು ಪರಿಹರಿಸಲು ತಕ್ಷಣ ಕ್ರಮಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ.
ರೈಲ್ವೆ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಿ,ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸುವ ಮೂಲಕ ಎಲ್ಲರಿಗೂ ಶಾಶ್ವತ ಉದ್ಯೋಗವನ್ನು ಒದಗಿಸಿ, ನಿರುದ್ಯೋಗಿಗಳಿಗೆ ಗೌರವಯುತ ಜೀವನವನ್ನು ನಡೆಸಲು ಅವಶ್ಯಕತೆಯಿರುವಷ್ಟು ನಿರುದ್ಯೋಗ ಭತ್ಯೆಯನ್ನು ಒದಗಿಸಿ,ಈ ಬೇಡಿಕೆಗಳನ್ನು ಈಡೇರಿಸಲು ಮತ್ತು ಲಕ್ಷಾಂತರ ನಿರುದ್ಯೋಗಿ ಯುವಜನರ ನೋವನ್ನು ನಿವಾರಿಸಲು ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ನಾವು ಒತ್ತಾಯಿಸಿದ್ದಾರೆ.
ರಾಜ್ಯ ಕಾರ್ಯದರ್ಶಿ ಚನ್ನಬಸವ ಜಾನೇಕಲ್, ಜಿಲ್ಲಾ ಅಧ್ಯಕ್ಷ ಡಾ. ಹನುಮಂತ ಕುರುಡಿ, ಜಿಲ್ಲಾ ಕಾರ್ಯದರ್ಶಿ ರಾಮಚಂದ್ರಪ್ಪ,ಯಲ್ಲಪ್ಪ, ವಿನೋದ್ ,ಸಂತೋಷ್ ಸಾಗರ್, ಸಂದೀಪ್, ಪ್ರಜ್ವಲ್ ಕಿರಣ್,ರಾಬಿನ್ ಸನ್, ಮೌನೇಶ್, ಮಾರೆಪ್ಪ ಮುಂತಾದವರು ಇದ್ದರು.