ಶರಣರು ಹಾಕಿರುವ ಆಧ್ಯಾತ್ಮ ಸಾಧನೆಗೆ ಅಷ್ಟಾವರಣ ಬೇಕು
ಬೀದರ:ಆ.12:”ನರಜನ್ಮವತೊಡೆದು,… ಹರಜನ್ಮವ ಮಾಡಿದ ಗುರುವೆ!
ಬವ ಬಂಧನವ ಬಿಡಿಸಿ, ಪರಮ ಸುಖವ ತೋರಿದ ಗುರುವೆ!
ಭವಿಯೆಂಬುದ ತೊಡೆದು,… ಭಕ್ತೆಯೆಂದೆನಿಸಿದ ಗುರುವೆ!
ಇದು ಲಿಂಗ ದೀಕ್ಷಾ ನಂತರ ವೈರಾಗ್ಯ ನಿಧಿ ಅಕ್ಕಮಹಾದೇವಿ ತಾಯಿಯವರ ಅಂತರಾಳದಿಂದ ಹೊರಹೊಮ್ಮಿರುವ ವಚನ. ಗುರುವಿನ ಹಸ್ತಮಸ್ತಕ ಸಂಯೋಗದಿಂದ ಜನನ ಮರಣದಿಂದ ಬಿಡುಗಡೆಯಾಗಿ, ಈ ಜನ್ಮವೇ ಕಡೆಯಾಗಿ ಸಾಧಿಸಿ ತೋರಿಸಿದರು ನಮ್ಮ ಶರಣರು. ಆದರೆ ಇಂದು ಸಾಧನೆ , ಗುರು, ಮಠ ಎನ್ನುವುದು ಈ ಸಮಾಜದಲ್ಲಿ ಕೆಲವು ಜನರಿಗೆ ಬೇಸರದ ಸಂಗತಿಯಾಗಿದೆ. ಗುರು ಇಲ್ಲ ಅರಿವೇ ಗುರು ಎನ್ನುವರು ಕೆಲವರು, ಲಿಂಗ ಬೇಕಾಗಿಲ್ಲ ಆತ್ಮಲಿಂಗ ಇದೆ ಎನ್ನುವರು ಕೆಲವರು, ಜಾತಿ ಜಂಗಮ ವಿಡಿದು, ನಾವೇ ಜಂಗಮರು ಜಗದೋದ್ಧಾರಕರು ಎನ್ನುವರು ಕೆಲವರು ಆದರೆ ಶರಣರು ಹಾಕಿರುವ ಆಧ್ಯಾತ್ಮ ಸಾಧನೆಗೆ ಅಷ್ಟಾವರಣ ಬೇಡವೆ?
ಗುರುವಿನಿಂದ ಕುರುಹು: ಕುರುವಿನಿಂದ ಅರುಹು: ಅರುವಿನಿಂದ ಆಚಾರ: ಆಚಾರದಿಂದ ಅನುಭಾವ: ಅನುಭವದಿಂದ ನಿಜವ ಕಾಣಬೇಕೆಂದರು ನಮ್ಮ ಶರಣರು. ಹಾಗಾದರೆ ಗುರುವಿನಿಂದ ಅರುಹು ಪಡೆಯಲೇಬೇಕು ಎಂದರ್ಥವಾಯಿತು. ವಿಶ್ವಗುರು ಬಸವಣ್ಣನವರು ಗುರುವಿನಲ್ಲಿ ಗುಣವನರಸುವೆ. ಲಿಂಗದಲ್ಲಿ ಕಳೆಯನರಸುವೆ ಎಂದು ಹೇಳಿದ್ದಾರೆ. ಲಾಂಛನಕ್ಕೆ ಶರಣೆಂಬೆ : ಲಾಂಛನಕ್ಕೆ ತಕ್ಕ ಆಚಾರವಿಲ್ಲದಿದ್ದರೆ ಛೀ ಎಂಬೆ ಎಂದು ನಿಷ್ಠರವಾಗಿ ಡಾಂಬಿಕ ಗುರುಗಳನ್ನು ಸ್ವಾಮಿಗಳನ್ನು ತಿರಸ್ಕರಿಸಿದ್ದಾರೆ. ಹಾಗೆಯೇ ಯೋಗ್ಯ ಗುರುಗಳು ಇದ್ದಾರೆ ಸಮಾಜದಲ್ಲಿ, ಗುರುವಿಗೆ ತಕ್ಕ ಯೋಗ ಶಿಷ್ಯರು ಇದ್ದಾರೆ.
ಇತ್ತೀಚಿಗೆ ಪೂಜ್ಯ ನವದಿಗಿಯ ರೇವಪ್ಪಜ್ಜ, ಪೂಜ್ಯ ಹುಡುಗಿಯ ಕರಬಸಪ್ಪನವರು, ಸಜ್ಜಲಗುಡ್ಡದ ಶರಣಮ್ಮ ನವರು ಇವರೆಲ್ಲಾ ಆಧುನಿಕ ಯುಗದ ಶಿವಯೋಗದ ಸಾಧನೆಯನ್ನು ಮಾಡಿದವರು ಮತ್ತು ಲಿಂಗ ಲೀಲೆ ಸಮಾಜಕ್ಕೆ ತೋರಿದವರು. ಆದರೆ ಈ ಸಾಧಕರು ಸಮಾಜ ಸುಧಾರಣೆ ಗೋಸ್ಕರ ಸಮಯ ಸಂದರ್ಭಕ್ಕೆ ಅನುಗುಣವಾಗಿ ಆತ್ಮಶಕ್ತಿ ಘಟಿಸುತ್ತದೆ. ಲಿಂಗ ಲೀಲೆಗಳು ಮಾಡಬೇಕು ಎಂದು ಬಂದವರಲ್ಲ, ತೋರಿಕೆಗಾಗಿ ಜೀವಿಸಿದವರು ಅಲ್ಲ, ಮಠಪೀಠಗಳು ಕಟ್ಟಿದವರು ಅಲ್ಲ. ಆದರೆ ಇಂದು ಅವರ ಭಕ್ತರು ಅವರ ಹೆಸರಿನಲ್ಲಿ ಸಮಾಧಿಯ ಕಟ್ಟಡಗಳು ಆಗಿವೆ ಅಷ್ಟೇ.
ಇವತ್ತಿನ ದಿನಗಳಲ್ಲಿ ಕೂಡ ಗುರುವಿಲ್ಲದ ಗುಡ್ಡ ಆಗಲು ಸಾಧ್ಯವಿಲ್ಲ, ಆಧ್ಯಾತ್ಮದ ಹಾದಿ ತೋರಲು ವ್ಯಕ್ತಿಯ ರೂಪದಲ್ಲಿ ಅವ್ಯಕ್ತಿಯ ರೂಪದಲ್ಲಿ ಆ ದೇವರು ನಮಗೆ ಸಂದೇಶವನ್ನು ಕೊಡುತ್ತಾನೆ ದೇವರ ಮೇಲೆ ನಂಬಿಕೆ ಇದ್ದಿದ್ದೆ ಆದರೆ, ಸಾಧನೆ ಹಾದಿಯಲ್ಲಿ ನಾವು ಇದ್ದಾಗ ಇದೆಲ್ಲ ಸಹಜವಾಗಿ ಕಾಣುತ್ತವೆ. ಒಂದು ಜೀವಂತ ಸತ್ಯವಾದ ಮಾತು ಬಿಚ್ಚು ಹೃದಯದಿಂದ ನಿಮಗಾಗಿ ಉದಾಹರಣೆ:- ಸಾದಕ ಅಥವಾ ಸಾಧಕಿಯ ಸಾಧನೆಯ ಹಾದಿಯಲ್ಲಿ, ಈ ಆಧುನಿಕ ಯುಗದಲ್ಲಿ ವೈರಾಗ್ಯವನ್ನು ತಾಳಿ, ಇನ್ನು ಸಾಧನೆಯ ಹಾದಿ ಮನೆಯಲ್ಲಿ ನಡೆದಿತ್ತು. ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲಿ ಲಿಂಗ ಪೂಜೆಯ ಸಂದರ್ಭದಲ್ಲಿ, ಅಂತರಂಗದಲ್ಲಿ ಒಂದು ಮಠವನ್ನು ಆಯ್ಕೆ ಮಾಡಿಕೊಂಡು, ಆ ಮಠದ ಗುರುವಿಗೆ ತಾನು ಮನೆ ಬಿಡುವುದಕ್ಕಿಂತ ಮುಂಚಿತವಾಗಿ ಒಬ್ಬ ಸಾಧಕಿ ನಿಮ್ಮ ಮಠಕ್ಕೆ ಬರುತ್ತಾರೆ ಎಂಬ ಸಂದೇಶವನ್ನು ಲಿಂಗ ಪೂಜೆಯ ಮುಖಾಂತರ ಈ ಸಂದೇಶ ಕಳಿಸುತ್ತಾರೆ ಸಾಧಿಕಿ. ಈ ಸಾಧಕನ ಸ್ಥಿತಿ ಸತ್ಯವಾಗಿದೆ. ಆ ಗುರುಗಳಿಗೆ ಮುಟ್ಟಿದೆ. ಆ ಗುರುಗಳು ಒಂದು ಕಡೆ ಪ್ರವಚನವನ್ನು ಮಾಡಿ ರಾತ್ರಿ ಮಠಕ್ಕೆ ಬರುವಂತಹ ಸಂದರ್ಭದಲ್ಲಿ ಗುರುಗಳೇ ನಾನು ನಿಮ್ಮ ಮಠಕ್ಕೆ ಬರುತ್ತೇನೆ, ಗುರುಗಳೇ ನಾನು ನಿಮ್ಮ ಮಠಕ್ಕೆ ಬರುತ್ತೇನೆ ಎಂಬ ಶಬ್ದ ಕೇಳಿಸಿತು. ಇಷ್ಟು ರಾತ್ರಿಯಲ್ಲಿ ಯಾರು ಮಾತಾಡುತ್ತಾರೆ ಎಂದು ಉದಾಸೀನ ಮಾಡಿದರು. ಮತ್ತೆ ಅದೇ ಶಬ್ದ ಕೇಳಿಸಿತು, ಹಿಂದಿ ತಿರುಗಿ ನೋಡುತ್ತಾರೆ ಚಿಕ್ಕ ವಯಸ್ಸಿನ ಹುಡುಗಿಯನ್ನು ನೋಡಿ ಭಾರವ್ವ ಯಾರು ಬೇಡ ಅಂದರು ಎಂದು ನುಡಿಯುತ್ತಾರೆ. ಇಷ್ಟು ಆ ಗುರುಗಳು ನುಡಿದ ಮೇಲೆ ಆ ಹುಡುಗಿ ಅಲ್ಲಿಲ್ಲ.
ಕೆಲವು ದಿನಗಳ ನಂತರ ಎರಡು ಮೂರು ಜನ ಸಾಧಕಿ ಯರು ಆ ಮಠಕ್ಕೆ ಬಂದು ಎರಡು ಮೂರು ದಿನ ಇದ್ದು, ಬೆಳಗಿನ ಜಾವ ತಮ್ಮ ಊರಿಗೆ ಹೋಗಬೇಕೆಂದು ಬಹುಬೇಗ ಏಳುವಷ್ಟರಲ್ಲಿ ಅವರಿಗೆ ಒಂದು ಕನಸು ಬಿದ್ದಿರುತ್ತದೆ. ಆ ಕನಸಿನಲ್ಲಿ ಒಬ್ಬ ಚಿಕ್ಕ ವಯಸ್ಸಿನ ಸಾಧಕಿ ಈ ಮಠಕ್ಕೆ ಬರುತ್ತಿದ್ದಾರೆ ಎಂಬ ಸಂದೇಶ ಗೊತ್ತಾಗುತ್ತದೆ. ಈ ತಾಯಂದಿರು ಸ್ನಾನ ಪೂಜಾದಿ ಗಳು ಮುಗಿಸಿಕೊಂಡು ಹೊರಡುವಾಗ ಆ ಗುರುಗಳಿಗೆ ಈ ಕನಸಿನ ಬಗ್ಗೆ ಹೇಳುತ್ತಾರೆ, ಆಗ ಆ ಗುರುಗಳು ಕೂಡ ಹೌದು ತಾಯಿ, ನನಗೆ ಎರಡು ತಿಂಗಳ ಹಿಂದೆ ಇದು ಗೊತ್ತಾಗಿದೆ ಅನ್ನುತ್ತಾರೆ.
ವೈರಾಗ್ಯವನ್ನು ತಾಳಿ, ಸಾಧನೆಯ ಹಾದಿಯಲ್ಲಿ ಎಲ್ಲವೂ ನಿನಗ ಅರ್ಪಣಿ ಎಂದು ದೇವರಲ್ಲಿ ಸಂಪೂರ್ಣ ಶರಣಾಗತರಾಗಿ, ಮನೆ ದೊರೆಯುವುದು ನಿರ್ಧರಿಸಿಕೊಳ್ಳುತ್ತಾರೆ ಮನದಲ್ಲಿ, ಯಾರಿಗೂ ಹೇಳದೆ ಕೇಳದೆ ಸಾಯಂಕಾಲದ ಹೊತ್ತಿಗೆ ಮನೆಯನ್ನು ತೊರೆ ಯುತ್ತಾರೆ. ಯಾವುದೋ ಬಸ್ಸು ಹಿಡಿದು ಪಯಣ ಬೆಳೆಯಿತು. ಸೂರ್ಯ ಅರುಣೋದಯ ಸಮಯಕ್ಕೆ ಇನ್ನೊಂದು ಊರು ತಲುಪಿ, ಬೆಳಿಗ್ಗೆಯ 10, 11 ಗಂಟೆ ಆಗುವಷ್ಟರಲ್ಲಿ ತಾವು ಲಿಂಗಯ್ಯನ ಮುಖಾಂತರ ಕಳಿಸಿರುವ ಸಂದೇಶ ಮುಟ್ಟಿದ ಸ್ಥಳಕ್ಕೆ ಬರುತ್ತಾರೆ. ಈ ಸಾಧಕಿ ಯನ್ನು ನೋಡಿದ ತಕ್ಷಣ ಆ ಗುರುಗಳು ನೀವು ಬರುವುದು ನನಗೆ ಮೊದಲೇ ಗೊತ್ತಾಗಿತ್ತು ಎಂದು ನುಡಿಯುತ್ತಾರೆ, ಆಗ ಈ ತಾಯಿ ಮುಗುಳ್ನಗೆ ಬೀರುತ್ತಾರೆ ಕಾರಣ ಲಿಂಗ ಮಾತಾಡಿದೆ ಎಂದು. ನನ್ನ ಲಿಂಗಯ್ಯ ಈ ಕೆಲಸ ಮಾಡಿದ್ದಾರೆ ಎಂದು.
ಗುರುವಿದೆ, ಲಿಂಗವಿದೆ ಶಿಷ್ಯನ ಸುಜ್ಞಾನದಲ್ಲಿ. ಆದರೆ ಇಂದು ಸಾಧನೆ ಇಲ್ಲದೆ ವಚನಗಳು ಹಿಡಿದುಕೊಂಡು ಬಳಲುತ್ತಿದ್ದೇವೆ. ನಮಗೆ ಹೇಗೆ ಬೇಕು ಹಾಗೆ ವಚನಗಳು ಬಳಸಿಕೊಳ್ಳುತ್ತಿದ್ದೇವೆ. ಇದು ದುರಂತ. ಇದು ಕಲಿಗಾಲ.
ಲೋಕದಂತೆ ಬಾರರು, ಲೋಕದಂತೆ ಇರರು, ಲೋಕದಂತೆ ಹೋಗರು ನೋಡಯ್ಯ, ಪುಣ್ಯದಂತೆ ಬಪ್ಪರು, ಜ್ಞಾನದಂತೆ ಇಪ್ಪರು, ಮುಕ್ತಿಯಂತೆ ಹೋಹರು ನೋಡಯ್ಯ. ಉರಿಲಿಂಗದೇವ ನಿಮ್ಮ ಶರಣರು ಉಪಮಾತೀತರಾಗಿ ಉಪಮಿಸ ಬಾರದು. ಹೀಗೆ ಅರಿತು ಮರೆತವರಾದರೆ ಅದಕ್ಕೆ ಹೇಳುವವರು ಇನ್ನಾರು. ಸರ್ವರಿಗೂ ಶರಣು ಶರಣಾರ್ಥಿ
-ಪೂಜ್ಯ ಪ್ರಭುಶ್ರೀ ತಾಯಿ, ಅಕ್ಕಮಹಾದೇವಿ ಆಶ್ರಮ ಕಲಬುರ್ಗಿ.