ಗುಲಬರ್ಗಾ ವಿವಿ 42ನೇ ಘಟಿಕೋತ್ಸವ :168 ಚಿನ್ನದ ಪದಕ ಪ್ರದಾನ ನಿಮ್ಮ ಮೇಲಿನ ನಂಬಿಕೆಯೇ ಯಶಸ್ಸಿನ ಕೀಲಿ ಕೈ
ಕಲಬುರಗಿ,ಆ 12: ನಿಮ್ಮ ಮೇಲಿನ ನಂಬಿಕೆಯೇ ಯಶಸ್ಸಿನ ಕೀಲಿ ಕೈ ಎಂಬುದನ್ನು ಯಾವತ್ತೂ ಮರೆಯಬಾರದು ಎಂದು ಗೋವಾದ ಡೋನಾಪೌಲಾ ಸಿಎಸ್‍ಐಆರ್, ರಾಷ್ಟ್ರೀಯ ಸಾಗರಶಾಸ್ತ್ರ ಸಂಸ್ಥೆಯ ನಿರ್ದೇಶಕ ಪೆÇ್ರ. ಸುನೀಲಕುಮಾರ ಸಿಂಗ್ ಕಿವಿಮಾತು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ 42ನೇ ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಪ್ರಧಾನ ಭಾಷಣಕಾರರಾಗಿ ಅವರು ಮಾತನಾಡಿದರು. ಬದುಕಿನಲ್ಲಿ ಮುಂದೆ ಬರಬೇಕಾದರೆ ಇಲಿ ಓಟ (ರ್ಯಾಟ್ ರೇಸ್) ನಿಲ್ಲಿಸಬೇಕು. ಇತರರಿಗಾಗಿ ಕೆಲಸ ಮಾಡುವುದರ ಬದಲು ನೀವು ಇಷ್ಟಪಡುವುದನ್ನು ಮಾಡಿದರೆ ಮಾತ್ರ ಸಾಧನೆ ಕೈವಶವಾಗುತ್ತದೆ ಎಂದರು.
ಇಷ್ಟ ಪಡುವುದನ್ನು ಮಾಡುವುದನ್ನು ರೂಢಿಸಿಕೊಂಡರೆ ನಮ್ಮ ಮೇಲೆ ನಮಗೆ ಹೆಚ್ಚು ನಂಬಿಕೆ ಮೂಡುತ್ತದೆ. ನಮ್ಮ ಮೇಲೆ ನಮಗಿರುವ ನಂಬಿಕೆಯೇ ನಮ್ಮ ಗೆಲುವಿನ ಹಾದಿ ನಿರ್ಧರಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿಶ್ವವಿದ್ಯಾಲಯದಿಂದ ಹೊರಗೆ ಬಂದ ಕೂಡಲೆ ಬದುಕಿನ ನಿಜವಾದ ಕಲಿಕೆ ಆರಂಭಗೊಳ್ಳುತ್ತದೆ. ಈ ವೇಳೆ ಎದುರಾಗುವ ಪ್ರತಿಯೊಬ್ಬರೂ ಶಿಕ್ಷಕರಾಗಿ ನಮಗೆ ಒಂದಲ್ಲ ಒಂದು ರೀತಿಯ ಜ್ಞಾನ ನೀಡುತ್ತಾರೆ. ಇಂತಹ ಕಲಿಕೆಗೆ ಶಾ ಸಿದ್ದರಿರಬೇಕು ಎಂದರು.
ಭಾರತ ಒಂದು ಕಾಲದಲ್ಲಿ ವಿಶ್ವಗುರು ಎಂದೇ ಗುರುತಿಸಿಕೊಂಡಿತ್ತು. ಈ ದೇಶದಲ್ಲಿ ಬುದ್ಧಿವಂತಿಕೆ ಮತ್ತು ಸಂಪತ್ತಿಗೆ ಕೊರತೆಯಿಲ್ಲ. ಕೇವಲ ನಾಲ್ಕು ಶತಮಾನಗಳ ಮೊದಲು ನಮ್ಮ ದೇಶವು ಜಾಗತಿಕ ಜಿಡಿಪಿಯ ಅರ್ಧದಷ್ಟು ಕೊಡುಗೆ ನೀಡುತ್ತಿತ್ತು. ಹಾಗಾಗಿ ಚಾಲ್ತಿಯಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಲು ಇಂದಿನ ವಿದ್ಯಾರ್ಥಿಗಳು ತಮಗಿರುವ ಅವಕಾಶಗಳನ್ನು ಬಳಸಿಕೊಳ್ಳಲು ಮುಂದೆ ಬರಬೇಕು ಎಂದು ಆಪ್ತ ಸಲಹೆ ನೀಡಿದರು.
76 ವಿದ್ಯಾರ್ಥಿಗಳಿಗೆ 168 ಚಿನ್ನದ ಪದಕ
ಗುಲಬರ್ಗಾ ವಿವಿಯ 42ನೇ ಘಟಿಕೋತ್ಸವದಲ್ಲಿ 52 ವಿದ್ಯಾರ್ಥಿನಿಯರು, 22 ವಿದ್ಯಾರ್ಥಿಗಳು ಸೇರಿ ಒಟ್ಟು 74 ವಿದ್ಯಾರ್ಥಿಗಳಿಗೆ 168 ಚಿನ್ನದ ಪದಕ, 9 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪರಿವರ್ತಿಸಿ ನಗದು ಬಹುಮಾನ ನೀಡಲಾಯಿತು.
ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿನಿ ಆನಂದಮ್ಮ 13 ಚಿನ್ನದ ಪದಕಗಳನ್ನು ಪಡೆದು ಗಮನ ಸೆಳೆದರು.
ಇದೇ ವೇಳೆ, ಪ್ರಾಣಿಶಾಸ್ತ್ರ ವಿಭಾಗದ ಪೂರ್ವಕ ಗದ್ವಾಲ- 7 ಚಿನ್ನದ ಪದಕ, ಎಂಬಿಎ ಅಧ್ಯಯನ ವಿಭಾಗದ ಅಭಿಷೇಕ-6 ಚಿನ್ನದ ಪದಕ, ಸಮಾಜಕಾರ್ಯ ವಿಭಾಗದ ಅಂಬಿಕಾ-6 ಚಿನ್ನದ ಪದಕ, ರಾಜ್ಯಶಾಸ್ತ್ರ ವಿಭಾಗದ ಪಲ್ಲವಿ-6 ಚಿನ್ನದ ಪದಕ, ಸಸ್ಯಶಾಸ್ತ್ರ ವಿಭಾಗದ ಆಫ್ರಿನ್ ಸುಲ್ತಾನಾ, ಜೀವರಸಾಯನ ಶಾಸ್ತ್ರ ವಿಭಾಗದ ವಿಷ್ಣುಕಾಂತ, ಎಂಸಿಎ ವಿಭಾಗದ ಮಲ್ಕಮ್ಮ, ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಭಾಗ್ಯ ಕ್ರಮವಾಗಿ 5 ಚಿನ್ನದ ಪದಕಗಳನ್ನು ಸ್ವೀಕರಿಸಿದರು.
ಈ ಘಟಿಕೋತ್ಸವದಲ್ಲಿ ಒಟ್ಟು 29309 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಸ್ವೀಕರಿಸಿದರು. ಈ ಪೈಕಿ 15869 ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಪದವಿ ಪ್ರಮಾಣಪತ್ರ ಪಡೆದರು.
ಏತನ್ಮಧ್ಯೆ, ವಿವಿಧ ನಿಕಾಯಗಳ 113 ವಿದ್ಯಾರ್ಥಿಗಳಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಲಾಯಿತು. ಕಲಾ ನಿಕಾಯ-35 ಪಿಎಚ್‍ಡಿ, ಸಮಾಜ ವಿಜ್ಞಾನ ನಿಕಾಯ- 29 ಪಿಎಚ್‍ಡಿ, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ-26 ಪಿಎಚ್‍ಡಿ, ವಾಣಿಜ್ಯ ಮತ್ತು ನಿರ್ವಹಣಾ ನಿಕಾಯ- 11 ಪಿಎಚ್‍ಡಿ, ಶಿಕ್ಷಣ ನಿಕಾಯ-9 ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಪ್ರದಾನ ಮಾಡಲಾಯಿತು.ಆರಂಭದಲ್ಲಿ ವಿವಿ ಉಪಕುಲಪತಿ ಪೆÇ್ರ.ದಯಾನಂದ ಅಗಸರ ಸ್ವಾಗತಿಸಿ ವಿವಿಯ ಸಾಧನೆಗಳ ಕುರಿತು ಪರಿಚಯ ಮಂಡಿಸಿದರು.
ಕುಲಸಚಿವ ಪೆÇ್ರ. ಲಕ್ಷ್ಮಣ ರಾಜನಾಳಕರ್, ಮೌಲ್ಯಮಾಪನ ಕುಲಸಚಿವೆ ಪೆÇ್ರ. ಮೇಧಾವಿನಿ ಕಟ್ಟಿ, ಹಣಕಾಸು ಅಧಿಕಾರಿ ಕು. ಗಾಯತ್ರಿ ಸೇರಿದಂತೆ ವಿವಿಧ ನಿಕಾಯಗಳ ಮುಖ್ಯಸ್ಥರು
ಇದ್ದರು.
ಲಿಂಗರಾಜಪ್ಪ, ತಿವಾರಿ, ದಸ್ತಿಗೆ ಗೌರವ ಡಾಕ್ಟರೇಟ್
ಗುಲಬರ್ಗಾ ವಿವಿಯ 42ನೇ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಕಾನೂನು ಮತ್ತು ನ್ಯಾಯಾಂಗ ಕ್ಷೇತ್ರದಲ್ಲಿ ಗುರುತರ ಸೇವೆ ಪರಿಗಣಿಸಿ ಅರ್ಚನಾ ಪ್ರದೀಪ್ ತಿವಾರಿ, ಪ್ರಾದೇಶಿಕ ಅಸಮತೋಲನ ನಿವಾರಣೆಗೆ ನಿರಂತರ ಹೋರಾಟ ಮತ್ತು ಸಾಮಾಜಿಕ ಸೇವೆ ಸಲ್ಲಿಸಿದ ಹೋರಾಟಗಾರ ಲಕ್ಷ್ಮಣ ದಸ್ತಿ, ಶಿಕ್ಷಣ, ಕೃಷಿ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಲಿಂಗರಾಜಪ್ಪ ಅಪ್ಪ ಅವರನ್ನು ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ಕೆ.ಕೆ.ಆರ್.ಡಿ.ಬಿಯ ಶೇ.10ರಷ್ಟು ಅನುದಾನ
ಕಲ್ಯಾಣ ಕರ್ನಾಟಕ ಭಾಗದ ಎಲ್ಲ ವಿಶ್ವವಿದ್ಯಾಲಯಗಳ ಪ್ರಗತಿಗೆ ಪೂರಕವಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ತನ್ನ ವಾರ್ಷಿಕ ಅನುದಾನದಲ್ಲಿ ಶೇ.10ರಷ್ಟು ಹಣವನ್ನು ಮೀಸಲಿಡುವಂತೆ ರಾಜ್ಯಪಾಲರು ಸೂಚಿಸಿದ್ದಾರೆ ಎಂದು ರಾಜ್ಯ ಉನ್ನತ ಶಿಕ್ಷಣ ಖಾತೆ ಸಚಿವ ಹಾಗೂ ಗುಲಬರ್ಗಾ ವಿವಿ ಸಮಕುಲಪತಿ ಡಾ.ಎಂ.ಸಿ.ಸುಧಾಕರ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಖಾಲಿಇರುವ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಪೂರಕವಾಗಿ ರಾಜ್ಯ ಹಣಕಾಸು ಇಲಾಖೆಗೆ ಕೂಡಲೆ ಪ್ರಸ್ತಾವನೆ ಸಲಿಸುವಂತೆ ಸಹ ಸಚಿವ ಸುಧಾಕರ ನಿರ್ದೇಶನ ನೀಡಿದರು.
ಈಗಾಗಲೇ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೆ ವಿವಿ ಕುಲಪತಿಗಳು ಕೂಡಲೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲಿಸಬೇಕೆಂದು ಹೇಳಿದರು.
ಶಿಕ್ಷಣ ಯಶಸ್ಸಿನ ಹಿಂದಿನ ಶಕ್ತಿ
ಶಿಕ್ಷಣವು ಯಶಸ್ಸಿನ ಹಿಂದಿನ ಪ್ರಮುಖ ಚಾಲನಾ ಶಕ್ತಿಯಾಗಿದೆ ಎಂದು ರಾಜ್ಯಪಾಲ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರ್ ಚಂದ ಗೆಹ್ಲೋಟ್ ಹೇಳಿದರು.
ಗುಲಬರ್ಗಾ ವಿವಿಯ 42ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಣಕ್ಕೆ ಆದ್ಯತೆ ನೀಡುವುದು ಎಂದರೆ ಯಶಸ್ಸಿನ ಹಾದಿ ಆಯ್ಕೆ ಮಾಡಿಕೊಂಡಂತೆ ಎಂದರು.
ಭಾರತದ ಅರ್ಥ ವ್ಯವಸ್ಥೆ ಸುಧಾರಿಸುವ ವಿದ್ಯಾರ್ಥಿಗಳು ತಮ್ಮ ಪಾಲುದಾರಿಕೆ ಸಾಬೀತುಪಡಿಸಿದರೆ ದೇಶ ಪುನಃ ಜಗತ್ತಿನ ವಿಶ್ವಗುರು ಆಗಲಿದೆ ಎಂದರು.
