ಅಪರೂಪವಾಗುತ್ತಿರುವ ಅಡಕಲು ಗಡಿಗೆ
ಕಲಬುರಗಿ,ಆ 12: ಆಧುನಿಕತೆ ಕಾಲಿರಿಸಿದಂತೆ ಪಾರಂಪರಿಕ ಗ್ರಾಮೀಣ ಉದ್ಯೋಗಗಳು ಅಧುನಿಕತೆಯಲ್ಲಿ ಕೊಚ್ಚಿ ಹೋಗುತ್ತಿವೆ.ಕ್ರಮೇಣ ಹಳ್ಳಿಗಳಲ್ಲಿ ಒಲೆ, ಬೆಳಕಿಂಡಿ ,ತತ್ರಾಣಿ, ತಂಬಾಕು ಸೇದುವ ಚಿಲುಮೆ, ಮಳೆ ನೀರು ಹರಿಯುವ ಪನ್ನೋಳಗಿ, ರೊಕ್ಕದ ಕುಡಕಿ ,ಪಣತಿ, ಹರವಿ, ಮುಚ್ಚಳ, ಹೂಜಿಕಡಿಮೆಯಾಗಿವೆ.
ಎಪ್ಪತ್ತು ಎಂಬತ್ತರ ದಶಕಗಳವರೆಗೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಮನೆ ಮನೆಯಲ್ಲೂ ಕಾಣಸಿಗುತಿದ್ದ ಅಡಕಲ ಗಡಿಗೆಗಳು ಈಗ ಸದ್ಯ ಬೆರಳೆಣೆಕೆಯಷ್ಟು ಜನರ ಮನೆಯಲ್ಲಿ ಮಾತ್ರ ಇವೆ. ದೇವರ ಕೋಣೆಯಲ್ಲಿ ಅಥವಾ ಇದಕ್ಕೆ ಒಂದು ಪ್ರತ್ಯೇಕ ಕೊಣೆ ಇರುತಿತ್ತು. ಅದಕ್ಕೆ ಅಡಕಲ ಕೋಣೆ ಎಂದೇ ಕರೆಯುತಿದ್ದರು. ಮೊದಲು ದೊಡ್ಡದು ನಂತರ ಕ್ರಮವಾಗಿ ಸಣ್ಣದು ಒಂದರ ಮೇಲೊಂದು ಏಳು ಎಂಟು ಮಡಿಕೆಗಳನ್ನು ಇಟ್ಟಿರುವರು.ದೊಡ್ಡದರಲ್ಲಿ ಐವತ್ತರಿಂದ ನೂರು ಕೆ.ಜಿಯವರೆಗೆ ಧಾನ್ಯ ಹಾಕುತ್ತಿದ್ದರು
ಅಂಥವು ಒಂದು ಎರಡು ಮೂರು ಐದು ಸಾಲುಗಳ ಅವರವರ ಮನೆಯ ಕುಟುಂಬ ಸದಸ್ಯರ ಸಂಖ್ಯೆಗಳ ಆಧಾರದಮೇಲೆ ನೆಲದಿಂದ ಸ್ವಲ್ಪ ಎತ್ತರ ಜಾಗದಲ್ಲಿ ಹಾಗೂ ಹಿಂಭಾಗ ಗೋಡೆಗೆ ತಾಗಿಸಿ ಇಡುತಿದ್ದರು
ಒಂದರಲ್ಲಿ ಒಡವೆವಸ್ತ್ರ ರೊಕ್ಕ ರೂಪಾಯಿ ಇಟ್ಟರೆ ಇನ್ನೊಂದರಲ್ಲಿ ಧಾನ್ಯ ಮತ್ತೊಂದರಲ್ಲಿ ಬೇಸಿಗೆಯಲ್ಲಿ ಮನೆಯಲ್ಲೇ ತಯಾರಿಸಿದ ಶಾವಿಗೆ,ಗೌಲಿಯಂತ ಅಡಿಗೆ ಸಾಮಾನುಗಳು ಮತ್ತೊಂದರಲ್ಲಿ ಬಗೆ ಬಗೆಯ ಹಪ್ಪಳ ,ಸಂಡಿಗೆ ಇಡುತ್ತಿದ್ದರು.
ಒಳಗಿದ್ದ ದವಸ ಧಾನ್ಯಗಳಿಗೆ ನುಸಿ, ಹುಳುಗಳಾಗದಂತೆ ಗಡಿಗೆಯ ಹೊರಭಾಗಕ್ಕೆ ಸುತ್ತಲೂ ಸುಣ್ಣ ಬಳಿಯುತಿದ್ದರು. ಕೆಲವರು ದಿನಾಲೂ ಪೂಜೆ ಮಾಡಿದರೆ ಇನ್ನು ಕೆಲವರು ಹಬ್ಬ ಹರಿದಿನಗಳಲ್ಲಿ ಪೂಜೆ ಮಾಡುತಿದ್ದರು. ಮನೆಯಲ್ಲಿ ನಡೆಯುವ ಮದುವೆ ಉಪನಯನ ಇತರೆ ಶುಭ ಕಾರ್ಯಗಳಲ್ಲಿ ಇವುಗಳ ಪಾತ್ರ ಪ್ರಮುಖವಾಗಿರುತ್ತಿತ್ತು.
-ಗುರು.ಕೆ.ಪಿ