ಜನಪ್ರತಿನಿಧಿಗಳು/ಅಧಿಕಾರಿಗಳ ಮಧ್ಯೆ ಸಮನ್ವಯತೆ ಇದ್ದರೆ ಪಟ್ಟಣದ ಅಭಿವೃದ್ಧಿ ಸಾಧ್ಯ : ಶಾಸಕ ಲಕ್ಷ್ಮಣ ಸವದಿ
ಅಥಣಿ :ಅ.೧: ರಾಜ್ಯದ ಮೊಟ್ಟ ಮೊದಲನೆಯ ಪುರಸಭೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಥಣಿ ಪುರಸಭೆಗೆ ಎರಡು ವರ್ಷಗಳ ನಂತರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಸರ್ಕಾರದ ಮೀಸಲಾತಿ ಅನ್ವಯ ಮಹಿಳೆಯರು ಅಧಿಕಾರ ಸ್ವೀಕರಿಸಿದ ನಂತರ ಮೊಟ್ಟ ಮೊದಲನೇ ಸಾಮಾನ್ಯ ಸಭೆ ಸೋಮವಾರ ಶಾಸಕ ಲಕ್ಷ್ಮಣ ಸವದಿ ಅವರ ಮಾರ್ಗದರ್ಶನದಂತೆ ನೂತನ ಅಧ್ಯಕ್ಷೆ ಶಿವಲೀಲಾ ಸದಾಶಿವ ಬುಟಾಳಿ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಜರುಗುವ ಮೂಲಕ ಪಟ್ಟಣದ ಹಲವಾರು ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
ಸಭೆಯ ಆರಂಭದ ಪೂರ್ವದಲ್ಲಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ ಅಥಣಿ ಪುರಸಭೆ ಇತಿಹಾಸದಲ್ಲಿಯೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ವಿರೋಧ ಪಕ್ಷವೇ ಇಲ್ಲದ ಈ ಆಡಳಿತ ಮಂಡಳಿಯಿAದ ಅಥಣಿ ಪಟ್ಟಣದ ೨೭ ವಾರ್ಡ್ ಗಳ ಜನತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷಿಸಿದ್ದಾರೆ. ಜನತೆ ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಮೂಲಕ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಮುಖ್ಯ ಅಧಿಕಾರಿಗಳನ್ನು ಒಳಗೊಂಡ ಎಲ್ಲಾ ಸಿಬ್ಬಂದಿ ವರ್ಗ ಸಮನ್ವಯತೆಯಿಂದ ಅಭಿವೃದ್ಧಿ ಕೆಲಸಗಳನ್ನ ಚರ್ಚಿಸಿ ಅವುಗಳನ್ನ ಅನುಷ್ಠಾನಗೊಳಿಸುವ ಮೂಲಕ ಇತಿಹಾಸ ಸೃಷ್ಟಿಸಬೇಕು. ಶಾಸಕಾಂಗ ಮತ್ತು ಕಾರ್ಯಾಂಗ ಒಟ್ಟಿಗೆ ಕೆಲಸ ಮಾಡುವಂತೆ ಆಡಳಿತ ಸದಸ್ಯರು ಮತ್ತು ಅಧಿಕಾರಿಗಳು ಸ್ನೇಹಕೂಟದಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಈ ಮತಕ್ಷೇತ್ರದ ಶಾಸಕನಾಗಿ ನಾನು ಕೂಡ ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರದಿಂದ ಹೆಚ್ಚಿನ ಅನುದಾನವನ್ನ ತರುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು
ಪ್ರಾಸ್ತಾವಿಕವಾಗಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಮಾತನಾಡಿ, ಪುರಸಭೆ ಸದಸ್ಯರು ಸೂಚಿಸುವ ಎಲ್ಲ ಕಾರ್ಯಗಳನ್ನು ಅನುದಾನದ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕಾಗುತ್ತದೆ. ಅಲ್ಲದೆ ಶಾಸಕ ಲಕ್ಷ್ಮಣ ಸವದಿ ಅವರು ಈಗಾಗಲೇ ೨೫ ಕೋಟಿ ರೂ.ಗಳ ವಿಶೇಷ ಅನುದಾನವನ್ನು ಮಂಜೂರು ಮಾಡಿದ್ದು ಜೋಡಿ ಕೆರೆ ಹಾಗೂ ಭಗೀರಥಿ ನಾಲಾ ಕಾಮಗಾರಿಯನ್ನು ಕೈಗೊಳ್ಳುವ ಕಾರ್ಯ ನಡೆಯುತ್ತಿದ್ದು ಅಧ್ಯಕ್ಷರ ಅಪ್ಪಣೆಯ ಮೇರೆಗೆ ವಿವಿಧ ವಾರ್ಡಗಳ ಕಾಮಗಾರಿ ಜೊತೆಗೆ ಪಟ್ಟಣದ ಪ್ರಮುಖ ಬೀದಿಗಳಿಗೆ ಸ್ವಾಗತ ಕಮಾನುಗಳ ನಿರ್ಮಾಣ ಹಾಗೂ ರಸ್ತೆ, ಚರಂಡಿ, ಬೀದಿ ದೀಪ, ಶೌಚಾಲಯ, ಸ್ವಚ್ಚತೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ನಂತರ ಜರುಗಿದ ಸಾಮಾನ್ಯ ಸಭೆಯಲ್ಲಿ ಆಡಳಿತ ಮಂಡಳಿಯ ಸದಸ್ಯರು ತಮ್ಮ ವಾರ್ಡಿನಲ್ಲಿರುವ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತರುವ ಮೂಲಕ ಅವುಗಳನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದರು. ಅಥಣಿ ಪಟ್ಟಣದ ಐತಿಹಾಸಿಕ ಜೋಡಿ ಕೆರೆಗಳನ್ನು ಸುಮಾರು ೧೫ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ವಾಯುವಿಹಾರಕ್ಕೆ ಮತ್ತು ಮಕ್ಕಳ ಪಾರ್ಕ್, ಬೋಟಿಂಗ್ ವ್ಯವಸ್ಥೆ ಕಲ್ಪಿಸಲು ನೀಲ ನಕ್ಷೆಯನ್ನ ತಯಾರಿಸಿ ಟೆಂಡರ್ ಮೂಲಕ ಅಭಿವೃದ್ಧಿ ಕಾಮಗಾರಿ ಆರಂಭಿಸಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು. ಅದೇ ರೀತಿ ಸುಮಾರು ೧೦ ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ದೇಶ್ವರ ದೇವಸ್ಥಾನದಿಂದ ಮಿರಜ್ ರಸ್ತೆಯವರಿಗೆ ಭಾಗೀರಥಿ ನಾಲಾ ಅಭಿವೃದ್ಧಿಪಡಿಸಲು ಹೊಸ ನೀಲ ನಕ್ಷೆ ತಯಾರಿಸುವಂತೆ ಇಂಜಿನಿಯರ್ ಗಳಿಗೆ ಸೂಚಿಸಲಾಯಿತು. ಅಥಣಿ ಪುರಸಭೆಯ ನೂತನ ಕಟ್ಟಡ ಸ್ಥಾಪನೆ ಬಗ್ಗೆ ಚರ್ಚಿಸಲಾಗಿ ಈಗಾಗಲೇ ಸರ್ಕಾರಕ್ಕೆ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ನಗರಸಭೆ ಆಡಳಿತಕ್ಕೆ ಸಂಬAಧಿಸಿದAತೆ ಸುವ್ಯವಸ್ಥಿತ ಕಟ್ಟಡವನ್ನು ನಿರ್ಮಿಸುವುದು, ಅಥಣಿ ಪಟ್ಟಣದ ಹೊರಭಾಗದಲ್ಲಿ ಪ್ರಮುಖ ರಸ್ತೆಗಳಲ್ಲಿ ದ್ವಾರ ಬಾಗಿಲುಗಳನ್ನ ನಿರ್ಮಿಸುವುದು, ಅಥಣಿ ಮಾರುಕಟ್ಟೆಯಲ್ಲಿ ಜನದಟ್ಟಣೆ ಮತ್ತು ವಾಹನಗಳ ಕಿರಿಕಿರಿ ತಪ್ಪಿಸಲು ತರಕಾರಿ ಹರಾಜು ಪ್ರಕ್ರಿಯೆ ಬೇರೆಡೆಗೆ ಸ್ಥಳಾಂತರಿಸಬೇಕು ಮತ್ತು ಸರಕು ಸಾಗಾಣಿಕೆ ವಾಹನಗಳಿಗೆ ಪೋಲೀಸ್ ಇಲಾಖೆ ಜೊತೆಗೂಡಿ ಸಮಯವನ್ನು ನಿಗದಿ ಮಾಡಬೇಕೆಂದು ನಿರ್ಣಯಿಸಲಾಯಿತು.
ಅಥಣಿ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ ಎಂಬ ದೂರುಗಳಿದ್ದು, ಹೆಚ್ಚುವರಿ ಕಸದ ವಾಹನ ಖರೀದಿಸುವುದು, ಗುತ್ತಿಗೆ ಆಧಾರದ ಮೇಲೆ ಹೆಚ್ಚುವರಿ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.
ಪುರಸಭೆ ವತಿಯಿಂದ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳನ್ನು ಮತ್ತೊಮ್ಮೆ ಟೆಂಡರ್ ಪ್ರಕ್ರಿಯೆ ನಡೆಸಿ ಹರಾಜು ನೀಡುವುದು, ಈಗಾಗಲೇ ನೀಡಲಾಗಿರುವ ವಾಣಿಜ್ಯ ಮಳಿಗೆಗಳು ಮತ್ತು ಇನ್ನಿತರ ವ್ಯಾಪಾರಸ್ಥರ ಲೈಸೆನ್ಸ್ ಗಳನ್ನು ನವೀಕರಣ ಮಾಡುವುದರ ಜೊತೆಗೆ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಮತ್ತು ದೊಡ್ಡ ವ್ಯಾಪಾರಸ್ಥರಿಗೆ ಪ್ರತ್ಯೇಕ ತೆರಿಗೆ ಆಕರಣೆ ಮಾಡುವಂತೆ ನಿರ್ಣಯಿಸಲಾಯಿತು. ವಿವಿಧ ವಾರ್ಡುಗಳಲ್ಲಿ ಪಡೆದುಕೊಂಡಿರುವ ತುಂಡು ಗುತ್ತಿಗೆ ಕಾಮಗಾರಿಗಳು ಅಪೂರ್ಣವಾಗಿದ್ದು ಅವುಗಳನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕು. ಪಟ್ಟಣದ ಆರು ವಾರ್ಡುಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡುವುದು,
ಎಸ್ಸಿ ಎಸ್ಟಿ ಸ್ಮಶಾನಭೂಮಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು, ಪಟ್ಟಣದ ಬಹುತೇಕ ವಾರ್ಡ್ ಗಳಲ್ಲಿ ಉದ್ಯಾನವನ ಮತ್ತು ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡ ಗಂಟೆಗಳನ್ನು ತೆರವುಗೊಳಿಸಿ ಅಭಿವೃದ್ಧಿ ಕೈಗೊಳ್ಳುವುದು ಸೇರಿದಂತೆ ಅಧ್ಯಕ್ಷರ ಅಪ್ಪಣೆಯ ಮೇರೆಗೆ ಹಲವು ವಿಷಯಗಳು ಚರ್ಚಿಸಿ ಅಂತಹAತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಕೊಳ್ಳಲು ಸರ್ವಾನುಮತದಿಂದ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.
ಈ ಸಾಮಾನ್ಯ ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ, ಆಡಳಿತ ಮಂಡಳಿಯ ಸದಸ್ಯರಾದ ರಾವಸಾಬ ಐಹೊಳೆ, ದತ್ತಾ ವಾಸ್ಟರ್, ಸಂತೋಷ ಸಾವಡಕರ, ರಾಜಶೇಖರ ಗುಡೋಡಗಿ. ಕಲ್ಲೇಶ ಮಡ್ಡಿ, ಮೃಣಾಲಿನಿ ದೇಶಪಾಂಡೆ, ಬಿಬಿಜಾನ ತಾಂಬೋಳಿ. ಜುಲೇಖಾ ಖೇಮಲಾಪೂರ. ವಿದ್ಯಾ ಐಹೊಳೆ, ಲತಾ ಭಜಂತ್ರಿ. ರಿಯಾಜ್ ಸನದಿ. ಸೈಯದಅಮೀನ್ ಗದ್ಯಾಳ. ಮಲ್ಲಿಕಾರ್ಜುನ ಬುಟಾಳಿ, ಪ್ರಮೋದ್ ಬಿಳ್ಳೂರ. ವಿಲೀನ ಯಳಮಲ್ಲಿ, ಉದಯ ಸೋಳಸಿ. ಬಸವರಾಜ ಪಾಟೀಲ. ಸೇರಿದಂತೆ ಇನ್ನುಳಿದ ಸದಸ್ಯರು ಪುರಸಭೆ ಅಧಿಕಾರಿಗಳು, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಉಪಸ್ಥಿತರಿದ್ದರು.
ಜೋಡಿ ಕೆರೆ ಹಾಗೂ ಭಾಗೀರಥಿ ನಾಲಾ ಅಭಿವೃದ್ಧಿಗೆ ೨೫ ಕೋಟಿ : ಶಾಸಕ ಲಕ್ಷ್ಮಣ ಸವದಿ
ಪಟ್ಟಣದ ೨೭ ವಾರ್ಡ್ ಗಳ ಜನತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷಿಸಿದ್ದಾರೆ.
ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಪಟ್ಟಣದ ಸೌಂದರ್ಯೀಕರಣ, ಜೋಡಿ ಕೆರೆಗಳ ಅಭಿವೃದ್ಧಿಗಾಗಿ ಈಗಾಗಲೇ ೨೫ ಕೋಟಿ ರೂಪಾಯಿಗಳನ್ನು ಪುರಸಭೆಗೆ ಒದಗಿಸಲಾಗಿದ್ದು, ಕೆರೆಗಳ ಅಭಿವೃದ್ಧಿ ಮತ್ತು ಭಾಗೀರಥಿ ನಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಬೇಕು ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವದು ಪುರಸಭೆಯ ಮೊದಲ ಆದ್ಯತೆಯಾಗಬೇಕು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಮನ್ವಯತೆಯಿಂದ ಒಟ್ಟಿಗೆ ಸಹಮತದಿಂದ ಕೆಲಸ ಮಾಡಿದರೆ ಮಾತ್ರ ಪಟ್ಟಣದ ಅಭಿವೃದ್ದಿ ಸಾದ್ಯವಾಗುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.