ಕರವೇ ಸಂಘಟನೆ ಬಲವರ್ಧನೆಗೆ ಒತ್ತು : ವಾಜೀದ್ ಹಿರೇಕುಡಿ
ಅಥಣಿ :ಅ.೧: ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಎಚ್. ಶಿವರಾಮೇಗೌಡರ ನೇತೃತ್ವದಲ್ಲಿ ಸಂಘಟನೆ, ಈಗಾಗಲೇ ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆದಿದೆ. ಅವರ ಮಾರ್ಗದರ್ಶನದಲ್ಲಿ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಕನ್ನಡ ಪರ ಹೋರಾಟ, ಕಾರ್ಯಕರ್ತರ ಸಮಾವೇಶ, ಕನ್ನಡ ಪರ ಕಾರ್ಯಕ್ರಮಗಳು ನಿರಂತರವಾಗಿ ಜರುಗುತ್ತಿವೆ. ಕಿತ್ತೂರು ಕರ್ನಾಟಕ ಭಾಗದಲ್ಲಿ ನಮ್ಮ ಕರವೇ ಸಂಘಟನೆ ಬಲವರ್ಧನೆಗೆ ಒತ್ತು ನೀಡಲಾಗಿದ್ದು, ಕರವೇ ನೂತನ ಪದಾಧಿಕಾರಿಗಳು ಸಂಘಟನೆಗೆ ಇನ್ನಷ್ಟು ಶಕ್ತಿ ತುಂಬುವ ಮೂಲಕ ಸಮರ್ಥವಾಗಿ ಮುನ್ನಡೆಸಬೇಕು ಎಂದು ಬೆಳಗಾವಿ ಕರವೇ (ಎಚ್. ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ವಾಜೀದ್ ಹಿರೇಕುಡಿ ಹೇಳಿದರು.
ಅವರು ಅಥಣಿ ಪಟ್ಟಣದಲ್ಲಿ ಶಿವರಾಮೇಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರವೇ ಸಂಘಟನೆಯ ಅನೇಕ ಶಾಖೆಗಳು ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಕನ್ನಡದ ಸೇವೆ, ಕನ್ನಡಿಗರ ಕಾಳಜಿಯೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಸಂಘಟನೆಯ ಸಂಸ್ಥಾಪಕರು ನನಗೆ ಕಿತ್ತೂರು ಕರ್ನಾಟಕ ಭಾಗದಲ್ಲಿ ಸಂಘಟನೆಯ ಬಲವರ್ಧನೆಗೆ ಹೆಚ್ಚು ಒತ್ತು ನೀಡಲು ಆದೇಶಿಸಿದ್ದಾರೆ. ಮುಂಬರುವ ದಿನಗಳಲ್ಲಿ ಬೆಳಗಾವಿ ಜಿಲ್ಲೆಗಳಲ್ಲಿ ಸಂಘಟನೆಯ ಕಾರ್ಯ ಚಟುವಟಿಕೆಗಳನ್ನು ಇನ್ನಷ್ಟು ಹೆಚ್ಚಿಸಲಾಗುವುದು. ಇಲ್ಲಿಯ ಸಮಸ್ಯೆಗಳ ವಿರುದ್ಧ ಹೋರಾಟ ಹಮ್ಮಿಕೊಂಡ ಸರಕಾರದ ಗಮನ ಹರಿಸುವಲಾಗುವುದು ಎಂದು ಹೇಳಿದರು.
ಅಥಣಿ ತಾಲೂಕಿನಲ್ಲಿ ಕಳೆದ ೧೫ ವರ್ಷಗಳಿಂದ ಅಣ್ಣಾಸಾಬ ತೆಲಸಂಗ ಅವರ ಮುಂದಾಳತ್ವದಲ್ಲಿ ಉತ್ತಮ ರೀತಿಯಲ್ಲಿ ಜನಪರ ಕಾಳಜಿಯೊಂದಿಗೆ ಹೋರಾಟಗಳನ್ನು ಮಾಡುತ್ತಾ ಬರಲಾಗಿದ್ದು, ಅವರನ್ನು ಈಗ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದ್ದು, ಅಥಣಿ ತಾಲೂಕ ಸಂಘಟನೆಗೆ ನೂತನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಉದಯ ಮಾಕಾಣಿ ಅವರ ಮುಂದಾಳತ್ವದಲ್ಲಿ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಗ್ರಾಮ ಶಾಖೆಗಳನ್ನು ಆರಂಭಿಸಿ ಸಂಘಟನೆಯನ್ನು ಬಲಪಡಿಸುವುದರ ಜೊತೆಗೆ ನಮ್ಮ ಉಸಿರಿನ ಮತ್ತು ಅನ್ನದ ಭಾಷೆಯಾಗಿರುವ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಕರೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನ್ನಪೂರ್ಣಾ ಅಶೋಕರ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆಯ ವ್ಯಾಮೋಹದಿಂದ ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಕನ್ನಡ ಭಾಷೆಯನ್ನು ಉಳಿಸಿರಿ ಬೆಳೆಸಿರಿ ಎನ್ನುವ ಪರಿಸ್ಥಿತಿ ಬಂದಿದೆ. ಅನ್ಯ ಭಾಷೆಗಳನ್ನು ಗೌರವಿಸಬೇಕು, ನಮ್ಮ ಮಾತೃಭಾಷೆಯನ್ನು ಪ್ರೀತಿಸಬೇಕು. ಕನ್ನಡವನ್ನು ನಾವು ನಿತ್ಯ ಬಳಸಿದಾಗ ಉಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಕರವೇ ಸಂಘಟನೆ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಚಟುವಟಿಕೆಗಳನ್ನು ಮಾಡಬೇಕೆಂದು ಕರೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಾಸಾಬ ತೆಲಸಂಗ ಮಾತನಾಡಿ ಅಥಣಿ ತಾಲೂಕಿನಲ್ಲಿ ಕನ್ನಡಪರ ಹೋರಾಟ, ಕಾರ್ಯಕ್ರಮಗಳನ್ನು ಮಾಡುವಲ್ಲಿ ಸಹಾಯ ಸಹಕಾರ ನೀಡಿದ ಎಲ್ಲಾ ಕನ್ನಡಪರ ಮನಸ್ಸುಗಳಿಗೆ, ನಮ್ಮ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತೇನೆ. ಮುಂಬರುವ ದಿನಗಳಲ್ಲಿ ನೂತನ ಅಧ್ಯಕ್ಷ ಉದಯ ಮಾಕಾಣಿ ಮುಂದಾಳತ್ವದಲ್ಲಿ ನಡೆಯುವ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ, ಕನ್ನಡಪರ ಹೋರಾಟಗಳಿಗೆ ಸಹಾಯ ಸಹಕಾರ ನೀಡಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಅಥಣಿ ತಾಲೂಕ ಘಟಕದ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ಮತ್ತು ಕನ್ನಡ ಬಾವುಟ ನೀಡಿ ಜವಾಬ್ದಾರಿಗಳನ್ನು ಹಸ್ತಾಂತರಿಸಲಾಯಿತು. ಅಥಣಿ ಘಟಕದ ನೂತನ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡ ಉದಯ ಮಾಕಾಣಿ ಮಾತನಾಡಿ ಅಥಣಿ ತಾಲೂಕಿನಲ್ಲಿ ಕರವೇ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಮ್ಮೆಲ್ಲರ ಮಾರ್ಗದರ್ಶನ ಮತ್ತು ಸಹಾಯ ಸಹಕಾರ ನಿರಂತರವಾಗಿ ಇರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಜಗನ್ನಾಥ ಭಾಮನೆ, ರೇಣುಕಾ, ಶಾಹಿದ್ ಅಟೇಲ್, ಮಾರುತಿ ಮನೋಜ್, ಸಿದ್ದು ಹಂಡಗಿ, ಕುಮಾರ್ ಬಡಿಗೇರ, ಸತೀಶ ಯಲ್ಲಟ್ಟಿ, ಶಂಕರ ಮಗದುಮ, ಮಹಾಂತೇಶ ಹಲವಾಯಿ, ಅನಿಲ ಪಾಟೀಲ, ರಾಜು ವಾಘಮಾರೆ, ಸುಕುಮಾರ ಮಾದರ, ಪರಶುರಾಮ ಕಾಂಬಳೆ, ಜಿಶಾನ್ ಮುಜಾವರ, ಮುತ್ತಣ್ಣ ಗೊಲ್ಲರ, ಮಹಾದೇವಿ ಹೋಳಿಕಟ್ಟಿ, ಭೀಮವ್ವ ದಂಡಗಿ, ಶೋಭಾ ಮಾಳಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಉದಯ ಮಾಕಾಣಿ ಸ್ವಾಗತಿಸಿದರು. ಅಣ್ಣಾಸಾಬ ತೆಲಸಂಗ ನಿರೂಪಿಸಿದರು.ರಾಜು ವಾಘಮಾರೆ ವಂದಿಸಿದರು.