ತಾಯಿ ಮಗು ಆರೋಗ್ಯವಾಗಿರಲು ಉತ್ತಮ ಆಹಾರ ಪದ್ಧತಿ ಅತ್ಯಗತ್ಯ
ಭಾಲ್ಕಿ:ಅ.೧: ತಾಯಿ ಮತ್ತು ಮಗು ಆರೋಗ್ಯವಾಗಿರಬೇಕಾದರೆ ಗರ್ಭಿಣಿ ಮಹಿಳೆಯರಲ್ಲಿ ಉತ್ತಮ ಆಹಾರ ಪದ್ಧತಿ ಅತ್ಯಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಘವೇಂದ್ರ ವೈಜಿನಾಥ ಹೇಳಿದರು.
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ನಡೆದ ರಾಷ್ಟೀಯ ಪೋಷಣ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಾಯಿ ಮತ್ತು ಮಗು ಉತ್ತಮ ಆರೋಗ್ಯ ಹೊಂದಬೇಕಾದರೆ ಆಹಾರ ಪದ್ಧತಿ ಉತ್ತಮವಾಗಿರಬೇಕು. ಉತ್ತಮ ಜೀವನ ಶೈಲಿ ರೂಪಿಸಿಕೊಳ್ಳಬೇಕು. ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಪೌಷ್ಠಿಕ ಆಹಾರ ಸೇವಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ರೀನಿವಾಸ ಬಾಳುವಾಲೆ, ಒಬ್ಬ ಆರೋಗ್ಯವಂತ ತಾಯಿ ಒಂದು ಆರೋಗ್ಯವಂತ ಮಗುವಿಗೆ ಜನ್ಮನೀಡಿ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ವಕೀಲರ ಸಂಘದ ಉಪಾಧ್ಯಕ್ಷ ಶಿವಶಂಕರ ಲದ್ದೆ ಮಾತನಾಡಿ, ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿನ ಅಪೌಷ್ಠಿಕತೆ ಮತ್ತು ರಕ್ತಹೀನತೆಯನ್ನು ಹೊಗಲಾಡಿಸುವುದೇ ಈ ಯೋಜನೆಯ ಉದ್ದೇಶವಾಗಿದೆ ಎಂದು ಹೇಳಿದರು.
ಇದೇವೇಳೆ ನಿವೃತ್ತ ಅಂಗನವಾಡಿ ಕಾರ್ಯಕರ್ತೇ ಸುಶೀಲ ಹತ್ತಿಯವರಿಗೆ ವಿಶೇಷ ಸನ್ಮಾನ ನಡೆಯಿತು. ನ್ಯಾಯವಾದಿ ಸಂದೀಪ ತೆಲಗಾಂವಕರ ವಿಶೇಷ ಉಪನ್ಯಾಸ ಮಂಡಿಸಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಪ್ರಭಾಕರ, ತಾಲೂಕು ಆರೋಗ್ಯ ಅಧಿಕಾರಿ ರವಿ ಕಲಶಟ್ಟಿ, ಗುಂಡಪ್ಪ ಮೇತ್ರೆ, ಅಮರ ಪಾಟೀಲ, ಇಸಿಓ ಮಲ್ಲಿಕಾರ್ಜುನ ಕನ್ನಾಳೆ ಉಪಸ್ಥಿತರಿದ್ದರು.
ಅಂಗನವಾಡಿ ಮೇಲ್ವಿಚಾರಕಿ ಆರತಿ ಮೇತ್ರೆ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಿಸಿದರು.