ಬಿಜೆಪಿಯಲ್ಲಿ 20 ಬಣ: ಸಚಿವ ಎಂ.ಬಿ. ಪಾಟೀಲ ವಾಗ್ದಾಳಿ
ವಿಜಯಪುರ,ಆ.12:ಬಿಜೆಪಿಯಲ್ಲಿ 20 ಬಣಗಳಿವೆ. ಆರ್. ಅಶೋಕ ಬಣ, ವಿಜಯೇಂದ್ರ ಬಣ, ಪ್ರಹ್ಲಾದ ಜೋಶಿ ಬಣ, ಸಂತೋಷ ಬಣ, ಅಶ್ವಥ ನಾರಾಯಣ ಬಣ, ಯತ್ನಾಳ ಜಾರಕಿಹೊಳಿ ಬಣ, ಸಿ.ಟಿ. ರವಿ ಬಣ ಸೇರಿದಂತೆ ಬಿಜೆಪಿಯಲ್ಲಿ 20 ಬಣಗಳಿವೆ. ಈ ಎಲ್ಲ ಬಣಗಳೂ ಬಿಜೆಪಿ ಕಾಲಾವಧಿಯಲ್ಲಿ ನಡೆದ ಭೃಷ್ಟಚಾರದ ಬಗ್ಗೆ ಪಾದಯಾತ್ರೆ ನಡೆಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಕಾಲವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ಒಂದೊಂದು ಬಿಜೆಪಿ ಬಣ ಪ್ರತ್ಯೇಕವಾಗಿ ಪಾದಯಾತ್ರೆ ನಡೆಸಲಿ. ಕೊರೋನಾದ ಎರಡು ಸಾವಿರ ಕೋಟಿ ಹಣ ದುರುಪಯೋಗ, ಮಾರಿಷಸ್‍ನಲ್ಲಿ 10,000 ಕೋಟಿ ಇಟ್ಟಿರುವ ಹಗರಣ, ಭೋವಿ ನಿಗಮದ ಹಗರಣ, ತಾಂಡಾ ನಿಗಮದ ಹಗರಣ, ದೇವರಾಜ ಅರಸು ಟ್ರಕ್ ಟರ್ಮಿನಲ್ ಹಗರಣ ಇವೇ ಮುಂತಾದ 20 ಹಗರಣಗಳ ಕುರಿತು ಬಿಜೆಪಿಯವರು ಪಾದಯಾತ್ರೆ ಮಾಡಲಿ ಎಂದು ವಾಗ್ದಾಳಿ ನಡೆಸಿದರು.
ಒಕ್ಕಲಿಗರಿಗೂ ದೊರೆತ ಮಾದರಿಯಲ್ಲಿ ಲಿಂಗಾಯತ ಸಮಾಜದ ಎಲ್ಲ ಉಪ ಪಂಗಡಗಳಿಗೂ ಮೀಸಲಾತಿ ದೊರೆಯಬೇಕು. ಒಕ್ಕಲಿಗರಿಗೆ ಮೀಸಲಾತಿ ದೊರೆತಿರುವುದಕ್ಕೆ ತಮ್ಮ ವಿರೋಧವಿಲ್ಲ. ರಾಜ್ಯ ಹಾಗೂ ಕೇಂದ್ರದಲ್ಲಿಯೂ ಮೀಸಲಾತಿ ದೊರೆಯಬೇಕು ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು.