ನಾಗರ ಪಂಚಮಿ ಬಸವ ಪಂಚಮಿಯಾಗಿ ಆಚರಣೆ
ಚಿತ್ತಾಪುರ:ಆ.12:ನಾಗರ ಪಂಚಮಿ ದಿನದಂದು ಕಲ್ಲಿಗೆ ಹಾಲೇರೆಯುವ ಬದಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೊಗಿಗಳಿಗೆ ಹಾಲು ನೀಡುವದರ ಮೂಲಕ ಬಸವ ಪಂಚಮಿಯನ್ನಾಗಿ ಆಚರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋದನೆ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಶಾಂತಕುಮಾರ ಮಳಖೇಡ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋದನಾ ಪರಿಷತ್ತು ತಾಲೂಕು ಘಟಕದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ನಾಗರ ಪಂಚಮಿ ಹಬ್ಬದ ನಿಮಿತ್ತ ಗುಣಮಟ್ಟದ ಹಾಲು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಗರ ಹುತ್ತಕ್ಕೆ, ಕಲ್ಲಿನ ಮೂರ್ತಿಗಳಿಗೆ ಹಾಲು ಸುರಿದು ಅವೈಜ್ಞಾನಿಕವಾಗಿ ಆಚರಣೆಗೆ ಜನರು ಮುಂದಾಗುತ್ತಾರೆ. ಇದರಿಂದ ಅಪಾರ ಪ್ರಮಾಣ ಹಾಲು ವ್ಯರ್ಥವಾಗುತ್ತಿದೆ. ಪ್ರಸ್ತುತ ಅಪೌಷ್ಠಿಕತೆಯಿಂದ ಸಾವಿರಾರು ಮಕ್ಕಳು ಸಾವಿಗೀಡಾಗುತ್ತಿದ್ದಾರೆ ಹಾಲನ್ನು ವ್ಯರ್ಥ ಮಾಡುವ ಬದಲಿಗೆ ಮಕ್ಕಳಿಗೆ ಮತ್ತು ಬಡವರಿಗೆ ಕೊಟ್ಟರೆ ಅದು ಅಮೃತವಾಗುತ್ತದೆ ಎಂದು ಹೇಳಿದರು.
ನಾಗರ ಪಂಚಮಿ ನಿಮಿತ್ತ ತಾಲೂಕಿನಲ್ಲಿ ಇದೊಂದು ವಿಶಿಷ್ಟ ಮತ್ತು ವಿನೂತನ ಕಾರ್ಯಕ್ರಮವಾಗಿದೆ. ತಾಲೂಕಿನ ಜನರಲ್ಲಿನ ಮೂಢನಂಬಿಕೆಗಳನ್ನು ಹೋಗಲಾಡಿಸಲು ಮುಂದಿನ ದಿನಗಳಲ್ಲಿ ಅನೇಕ ವೈಚಾರಿಕ ಮತ್ತು ವೈಜ್ಞಾನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಪರಿಷತ್ತಿನ ಉಪಾಧ್ಯಕ್ಷ ರವಿ ಇವಣಿ ಮಾತನಾಡಿದರು.
ಪರಿಷತ್ತಿನ ಗೌರವಾಧ್ಯಕ್ಷ ಕಾಶಿನಾಥ ಗುತ್ತೇದಾರ, ಸಹ ಕಾರ್ಯದರ್ಶಿ ವೀರುಪಾಕ್ಷರುದ್ರ ಬೆಣ್ಣಿ, ನಿರ್ದೇಶಕರಾದ ಸುರೇಶ ಬೆನಕನಳ್ಳಿ, ಮೋಯಿನ್ ಸಾತನೂರ, ರವಿಶಂಕರ ಬುರ್ಲಿ, ನರಸಪ್ಪ ಚಿನ್ನಾಕಟ್ಟಿ, ಜಗನಾಥ ಮುಡಬೂಳಕರ್, ಶಿವರಾಮ ಚವ್ವಾಣ, ನರಸಿಂಹ ಅಲಮೇಲಕರ್, ಪರಶುರಾಮ ಕಂದಗಲ್ ಇತರರು ಇದ್ದರು. ಕಾಶಿರಾಯ ಕಲಾಲ ನಿರೂಪಿಸಿದರು.