ಸಂಭ್ರಮದ ನಾಗಲಿಂಗೇಶ್ವರ ಜಾತ್ರೆ
ಬೀದರ್: ಆ.12:ಹೈದರಾಬಾದನ ಜಿಯಾಗುಡಾದ ನಾಗಲಿಂಗೇಶ್ವರ ಸಂಸ್ಥಾನ ಮಠದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಸಡಗರ, ಸಂಭ್ರಮದಿಂದ ನಡೆಯಿತು.
ಆಗಸ್ಟ್ 4 ರಂದು ಆರಂಭವಾದ ಜಾತ್ರೆ ನಾಗರ ಪಂಚಮಿ ದಿನವಾದ ಶುಕ್ರವಾರ ಸಮಾರೋಪಗೊಂಡಿತು. ನಿತ್ಯ ಪೂಜೆ, ನಾಗಮಾತೆ, ಹೊನ್ನಿಕೇರಿ ಸಿದ್ಧೇಶ್ವರರಿಗೆ ಉಡಿ ತುಂಬುವ ಕಾರ್ಯಕ್ರಮ, ಹಾನಗಲ್ ಕುಮಾರ ಶಿವಯೋಗಿಗಳ ಕುರಿತ ಪ್ರವಚನ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆ, ಭಕ್ತಿಯಿಂದ ನೆರವೇರಿದವು.
ಹಾನಗಲ್ ಶ್ರೀ ಕೊಡುಗೆ ಅಪಾರ:
ಹಾನಗಲ್ ಕುಮಾರ ಶಿವಯೋಗಿಗಳು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಮಠದ ಪೀಠಾಧಿಪತಿ ಹಾವಲಿಂಗೇಶ್ವರ ಶಿವಾಚಾರ್ಯರು ಹೇಳಿದರು.
ರಾಜ್ಯದಲ್ಲಿ ಅನೇಕ ಮಠಗಳಲ್ಲಿ ದೀಪ ಬೆಳಗಿಸುವವರು ಇಲ್ಲದ ಪರಿಸ್ಥಿತಿ ಇದ್ದಾಗ ಶಿವಯೋಗ ಮಂದಿರ ಸ್ಥಾಪಿಸಿ, ಸ್ವಾಮೀಜಿಗಳನ್ನು ತಯಾರು ಮಾಡಿದ್ದರು. ಅನೇಕ ಮಠಗಳಿಗೆ ಅವರನ್ನು ನೇಮಕ ಮಾಡಿದ್ದರು ಎಂದು ತಿಳಿಸಿದರು.
ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು, ಸಮಾಜ ಸಂಘಟನೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಕಟ್ಟಿದ್ದರು. ಪಂಚಾಕ್ಷರ ಗವಾಯಿಗಳಿಗೆ ಸಂಗೀತ ಕಲಿಯಲು ಪ್ರೇರಣೆ ನೀಡಿದ್ದರು ಎಂದು ಹೇಳಿದರು.
ಮಠಾಧೀಶರು ಮಠದ ಒಡೆಯರಲ್ಲ. ಸಮಾಜದ ನಿಷ್ಠಾವಂತ ಸೇವಕರು ಎಂದು ಹೇಳುತ್ತಿದ್ದರು. ಅವರ ಆದರ್ಶ ತತ್ವಗಳನ್ನು ಮಠಾಧೀಶರು ಸೇರಿದಂತೆ ಎಲ್ಲರೂ ಪಾಲಿಸಬೇಕಿದೆ ಎಂದು ತಿಳಿಸಿದರು.
ಉದ್ಯಮಿ ಶ್ರೀಕಾಂತ ಕುಡ್ತೆ ಆರು ದಿನಗಳ ಭಕ್ತಿ ದಾಸೋಹ ನೆರವೇರಿಸಿದರು. ಪ್ರಮುಖರಾದ ರಾಜಕುಮಾರ ಬಿರಾದಾರ, ಬಾಬುರಾವ್ ಗುಡ್ಡಾ, ಜಗನ್ನಾಥ ಟೇಲರ್, ಶಿವಾಜಿ ಬಿರಾದಾರ, ಸಂಜು ಪಾಟೀಲ, ರಘು ಸೂರ್ಯವಂಶಿ, ಸಂಗಶೆಟ್ಟಿ ಪಾರಶೆಟ್ಟೆ ಮತ್ತಿತರರು ಇದ್ದರು. ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.