ಪರಿಹಾರ ಹಣಕ್ಕಾಗಿ ಉಪವಾಸ ಸತ್ಯಾಗ್ರಹಕ್ಕೆ ಸಜ್ಜಾದ ರೈತರು
ಕಾಳಗಿ :ಆ.12: ಬೆಣ್ಣೆತೋರಾ ಯೋಜನೆಯ ಭೂ-ಸ್ವಾಧೀನ ಪ್ರಕರಣದಲ್ಲಿ ನ್ಯಾಯಾಲಯದಿಂದ ಹೆಚ್ಚುವರಿ ಭೂ-ಪರಿಹಾರ ಧನ ತಕ್ಷಣ ಸಂದಾಯಿಸುವಂತೆ ಕರ್ನಾಟಕ ನೀರಾವರಿ ನಿಗಮಕ್ಕೆ ಆದೇಶವಿದ್ದರೂ ಕೂಡ ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತ್ತಿರುವ ಅಧಿಕಾರಿಗಳ ಹಾಗೂ ಸರ್ಕಾರದ ವಿರುದ್ಧ ಬಂಡೆದ್ದ ರೈತರು, ಶೀಘ್ರದಲ್ಲೇ ಜಿಲ್ಲಾಧಿಕಾರಿ ಕಛೇರಿ ಮುಂದೆ
ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೋರಾಟ ಸಮಿತಿಯ ಗೌರವಾಧ್ಯಕ್ಷ ಡಿ.ಎಸ್ ನಾಮದಾರ ಹೇಳಿದರು.
ತಾಲೂಕಿನ ಕೋರವಾರ ಅಣಿವೀರಭದ್ರೇಶ್ವರ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಬೆಣ್ಣೆತೋರಾ ಜಲಾಶಯ ರೈತರ ಹಿತರಕ್ಷಣಾ ಹಾಗೂ ಹೋರಾಟ ಸಮಿತಿ ಹಮ್ಮಿಕೊಂಡ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಬೆಣ್ಣೆತೋರಾ ಯೋಜನೆಯಲ್ಲಿ ಕಾಲುವೆ ನಿರ್ಮಾಣಕ್ಕಾಗಿ ಸುಮಾರು ಐದು ಸಾವಿರ ರೈತರು ಭೂಮಿಯನ್ನು ಕಳೆದುಕೊಂಡು ದಶಕಗಳಿಂದಲೂ ಹೆಚ್ಚುವರಿ ಭೂ – ಪರಿಹಾರಕ್ಕಾಗಿ ಅಲೆದಾಡುತ್ತಿದ್ದಾರೆ. ನ್ಯಾಯಾಲಯದ ಆದೇಶಕ್ಕೂ ಕಿಮ್ಮತ್ತು ಕೊಡದ ಸರ್ಕಾರದ ಕೆಲ ಅಧಿಕಾರಿಗಳು ಪರಿಹಾರ ಹಣ ಬಿಡುಗಡೆ ಮಾಡದೆ ರೈತರಿಗೆ ತೊಂದರೆ ಕೊಡುತ್ತಿದ್ದಾರೆ.
ಈ ಭಾಗದ ರೈತರಿಗೆ ಹಾಗೂ ಕಾಲುವೆಯಲ್ಲಿ ಭೂಮಿ ಕಳೆದುಕೊಂಡವರೆಗೆ ಬೆಣ್ಣೆತೋರಾ ಯೋಜನೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ರೈತರ ಬಾಳು ಬೆಳಗಬೇಕಾಗಿರುವ ಯೋಜನೆ ಸರ್ಕಾರದ ಕಾರ್ಯ ವೈಖರಿಯಿಂದ ರೈತರ ಬಾಳು ಗೊಳಾಡುವಂತಾಗಿದೆ. ಪರಿಹಾರ ಹಣ ಕೇಳಲು ನೀರಾವರಿ ನಿಗಮ ಕಛೇರಿಗೆ ಹೋದರೆ ಅಧಿಕಾರಿಗಳು ರೈತರನ್ನು ಬೆದರಿಸಿ ಕಳುಹಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಣ್ಣೆತೋರಾ ಯೋಜನೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಕೋರ್ಟ್ ತೀರ್ಪಿನಂತೆ ಪರಿಹಾರ ಹಣ ಜಮೆ ಮಾಡುವಂತೆ ಮುಖ್ಯಮಂತ್ರಿ, ಜಲ ಸಂಪನ್ಮೂಲ ಸಚಿವರಿಗೆ, ಜಲ ಸಂಪನ್ಮೂಲ ಇಲಾಖೆ ಅಧೀನ ಕಾರ್ಯದರ್ಶಿಗಳಿಗೆ, ನೀರಾವರಿ ನಿಗಮ ಮುಖ್ಯ ಆಡಳಿತಾಧಿಕಾರಿಗಳಿಗೂ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಭೂ- ಸ್ವಾಧೀನ ಪರಿಹಾರ ಹಣ ಬರಬೇಕಾದರೆ ರೈತರೆಲ್ಲರೂ ಒಗ್ಗಟ್ಟಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಇದೇ ವೇಳೆ ಹೋರಾಟದ ಕುರಿತು ಬೆಣ್ಣೆತೋರಾ ಯೋಜನೆಯ ಎಡ ಹಾಗೂ ಬಲದಂಡೆ ಕಾಲುವೆಯಲ್ಲಿ ಜಮೀನು ಕಳೆದುಕೊಂಡ ಚಿತ್ತಾಪುರ, ಸೇಡಂ, ಕಾಳಗಿ ತಾಲೂಕಿನ ರೈತರು ಶೀಘ್ರದಲ್ಲೇ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಸುಮಾರು ಐದು ಸಾವಿರ ಜನ ರೈತರು ಸೇರಿಕೊಂಡು ಬೃಹತ್ ಪ್ರತಿಭಟನೆ ಮಾಡುವ ಮೂಲಕ ಸರ್ಕಾರಕ್ಕೆ 15 ದಿನಗಳ ಗಡುವು ನೀಡುವುದು.
ಸ್ಪಂದಿಸದಿದ್ದರೆ ಭೂ ಸ್ವಾಧೀನ ಪರಿಹಾರ ಹಣ ಬಿಡುಗಡೆ ಆಗುವವರೆಗೂ ಸರಣಿ ಉಪವಾಸ ಸತ್ಯಾಗ್ರಹ ಮಾಡಲು ಒಕ್ಕೋರಲಿನ ತೀರ್ಮಾನ ಕೈಗೊಂಡರು.
ಬೆಣ್ಣೆತೋರಾ ಯೋಜನೆ ರೈತರ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ರಾಜೇಂದ್ರಪ್ಪ ರೇಷ್ಮಿ, ಪ್ರಧಾನ ಕಾರ್ಯದರ್ಶಿ ಶರಣಗೌಡ ಪಾಟೀಲ, ರಾಘವೇಂದ್ರ ಗುತ್ತೇದಾರ, ಗುರುನಾಥ ದೇಸಾಯಿ, ವಿಜಯಕುಮಾರ್ ಮಿನಹಾಬಳ, ಸಿದ್ದಣ್ಣ ಜಮಾದಾರ, ಶಿವಲಿಂಗ ಮತ್ತಿಮೂಡ, ವಿಶ್ವನಾಥ ಜಾಧವ್ ಮಾತನಾಡಿದರು.
ರೈತರಾದ ಮಹೇಂದ್ರ ರೇಷ್ಮಿ, ರೇವಣಸಿದ್ದಪ್ಪ ಕೊಣಿನ್, ನೀಲಕಂಠ ಮಡಿವಾಳ, ಚಂದ್ರಶೇಖರ ಬಂಕಲಗಿ, ಶಾಂತಪ್ಪ ಪೇಠಶಿರೂರ,
ಶಿವಶರಣಪ್ಪ ಗದ್ದಗಿ, ಅಣವೀರಪ್ಪ ಕೋರವಾರ, ಅಣ್ಣರಾವ ಪೂಜಾರಿ, ಶಾಂತಪ್ಪ ತೊಟ್ನಳ್ಳಿ, ಬಸಲಿಂಗಪ್ಪ ಗುಂಡಗುರ್ತಿ ಸೇರಿದಂತೆ ಚಿತ್ತಾಪುರ, ಸೇಡಂ ಮತ್ತು ಕಾಳಗಿ ತಾಲೂಕಿನ ನೂರಾರು ರೈತರು ಇದ್ದರು.
ರೈತರ ಬಾಳಿಗೆ ಬೆಳಕಾಗದ ಬೆಣ್ಣೆತೋರಾ ಯೋಜನೆ:
ಬೆಣ್ಣೆತೋರಾ ಯೋಜನೆ ಯಿಂದ ನಮ್ಮ ಭಾಗದ ರೈತರಿಗೆ ಹಾಗೂ ಭೂಮಿ ಕಳೆದುಕೊಂಡವರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ.
ಬಡವರ ಬಾಳಿಗೆ ಬೆಳಕಾಗಬೇಕಾದ ಬೆಣ್ಣೆತೋರಾ ಯೋಜನೆ ರೈತರಿಗೆ ಕತ್ತಲಿನಲ್ಲಿ ಕುಳಿರಿಸಿದೆ.
ರೈತರು ದೇಶದ ಬೆನ್ನೆಲುಬು ಎಂದು ಬೊಬ್ಬೆ ಹೊಡೆದುಕೊಳ್ಳುವ ಸರ್ಕಾರಗಳು ರೈತರ ಬೆನ್ನಿನ ಎಲುಬುಗಳು ಪುಡಿ -ಪುಡಿಯಾಗಿ ಮಾಡಲು ಹೊರಟಿವೆ.