ಸಾಹಿತ್ಯದಿಂದ ಸೌಹಾರ್ದಯುತ ಸಮಾಜ ನಿರ್ಮಾಣ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧೧:  ಹೊಸ ಪುಸ್ತಕ ಅಷ್ಟು ಸುಲಭವಾಗಿ ಪ್ರಕಟಿಸುವುದು ಕಷ್ಟಕರ ಅದಕ್ಕಾಗಿ  ಸ್ವಯಂ ಪ್ರಕಾಶನ ಪ್ರಾರಂಭಿಸುವ ವಾತಾವರಣ ಇದೆಎಂದು ನಾಡಿನ ಹಿರಿಯ ಕವಿ ಮತ್ತು ವಿಚಾರವಾದಿ ಚಂದ್ರಶೇಖರ ತಾಳ್ಯ ತಿಳಿಸಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ದ ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಯುವಕವಿ ಮತ್ತು ವಿಮರ್ಶಕ ಡಾ.ಮಹಾಂತೇಶ ಪಾಟೀಲರ ಎರಡು ಪುಸ್ತಕಗಳ ಲೋಕಾರ್ಪಣೆ ಕಾರ್ಯ ಕ್ರಮದಲ್ಲಿ ಮಾತನಾಡಿದರು.ಸಾಹಿತ್ಯದ ಬಹಳ ದೊಡ್ಡ ಜವಾಬ್ದಾರಿ ಎಂದರೆ ಲೋಕದ ಸಂಕಷ್ಟ, ತಲ್ಲಣಗಳಿಗೆ ಉತ್ತರ ಕೊಡಬೇಕಾಗಿದೆ. ಸಂಬಂಧ ಸಂಪೂರ್ಣ ಹಾಳಾಗಿವೆ. ಭೂಮಿಯನ್ನು ದ್ವೇಷದ ಕುದಿಯಲ್ಲಿ, ಮನುಷ್ಯ ಮನುಷ್ಯನನ್ನು ನಂಬುವ ಸ್ಥಿತಿಯೇ ಇಲ್ಲ. ಇಂತದ್ದಕ್ಕೆ ಸದಾ ಶಾಂತಿ ಬಯಸುವಂತಹ ಸಾಹಿತ್ಯ ಇಂತಹ ಎಲ್ಲ ಕಷ್ಟ, ಸವಾಲುಗಳಿಗೆ ಮಾರುತ್ತರ ನೀಡುತ್ತಾ ಬರುತ್ತಿದೆ ಎಂದು ತಿಳಿಸಿದರು.ಕವಿರಾಜಮಾರ್ಗದಿಂದ ಕುವೆಂಪುವರೆಗೂ ಇಂತಹ ಜವಾಬ್ದಾರಿಯುತ ಕೆಲಸವನ್ನ ಕನ್ನಡ ಸಾಹಿತ್ಯ ಮಾಡಿಕೊಂಡು ಬರುತ್ತಿದೆ. ಪರ ಧರ್ಮವನ್ನು ಸಹಿಷ್ಣುತೆಯಿಂದ ನೋಡುವ ಕಾಲ ಇತ್ತು. ಆಗಲೂ ಮನುಷ್ಯರ ನಡುವೆ ವೈರುಧ್ಯ ಇತ್ತು. ಹಾಗಾಗಿಯೇ ಪಂಪ, ಮನುಜ ಕುಲ ಒಂದೇ ಎಂದರೆ. ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ ಎಂದು ಹೇಳಿದ್ದರು. ‌ಕನ್ನಡ ಸಾಹಿತ್ಯ ಹಿಂದಿನಿಂದಲೂ ಪ್ರಭುತ್ವದ ವಿರುದ್ಧವಾಗಿ ಹೋರಾಟ ಮಾಡುತ್ತಲೇ ಬಂದಿದೆ. ಫಲಿತಾಂಶ ಏನೇ ಇರಬಹುದು. ಹೋರಾಟ ಮಾಡುತ್ತಾ ಬಂದಿದೆ ಎಂದು ತಿಳಿಸಿದರು.ಮಂಟೇಸ್ವಾಮಿ ಅವರು ಬಸವಣ್ಣನವರನ್ನೆ ಅನುಮಾನಿಸಿ ದೃಢ ಪರೀಕ್ಷೆ ಮಾಡಿದರು. ಪ್ರಸ್ತುತ ವಾತಾವರಣದಲ್ಲಿ ಮಂಟೇಸ್ವಾಮಿ ಪ್ರಸ್ತುತವಾಗುತ್ತಾರೆ. ಸಾಹಿತ್ಯ ಸವಾಲು ಎದುರಿಸುತ್ತಾ ಸಮ, ಸೌಹಾರ್ದಯುತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.ಹೊಸಪೇಟೆಯ ಕವಿ ಮತ್ತು ವಿಮರ್ಶಕ ಪ್ರೊ.ವೆಂಕಟಗಿರಿ ದಳವಾಯಿ ಮಹಾಂತೇಶ ಪಾಟೀಲರ ಕವನ ಸಂಕಲನ ಚಲಿಸುವ ಗೋಡೆಗಳು ಕುರಿತು ಡಾ.ರಂಗನಾಥ ಕಂಟನಕುಂಟೆ  ಪರಿಚಯ ಮಾಡಿಕೊಟ್ಟರು. ಬೆಳಕು ಬೆಳೆಯುವ ಹೊತ್ತು.. ವಿಮರ್ಶಾ ಸಂಕಲನ ಕುರಿತು ಪ್ರೊ. ಮೇಟಿ ಮಲ್ಲಿಕಾರ್ಜುನ ಅವರು ಸಂವಾದ ನಡೆಸಿದರು.ಹಿರಿಯ ಪತ್ರಕರ್ತ ಸದಾನಂದ ಹೆಗಡೆ, ದಾವಣಗೆರೆ ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ವಿಭಾಗ ಮುಖ್ಯಸ್ಥ ಡಾ. ವಿ. ಜಯರಾಮಯ್ಯ, ಡಾ.‌ ದಾದಾಪೀರ್ ನವಿಲೇ ಹಾಳ್,  ಪ್ರಕಾಶಕಿ ಸುಮಾ ಪಾಟೀಲ್ ಇತರರು ಇದ್ದರು.  ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷಬಿ ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿಮಂತ್ ರಾಜ್ ಪ್ರಾರ್ಥಿಸಿದರು. ಡಾ.‌ ಮಹಾಂತೇಶ್ ಪಾಟೀಲ್ ಸ್ವಾಗತಿಸಿದರು.ದಾವಣಗೆರೆ ವಿಶ್ವವಿದ್ಯಾನಿಲಯ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಇತರರು ಭಾಗವಹಿಸಿದ್ದರು.