ಸೂತ್ರದಿಂದ ಗೊಂಬೆಗಳಿಗೆಜೀವ ನೀಡುವ ಕೌಶಲ್ಯ ಮಹತ್ವದ್ದು: ಡಿವೈಎಸ್ ಪಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ ಅ.12: ಗೊಂಬೆಗಳಿಗೆ ಜೀವ ತುಂಬಿಸುವ ಕೆಲಸವೇ ಸೂತ್ರದ ಗೊಂಬೆ ಆಟವೆಂದು ನಗರದ  ಸೈಬರ್ ಠಾಣೆಯ  ಡಿವೈಎಸ್ಪಿ ಸಂತೋಷ್ ಚೌವ್ಹಾಣ್ ಅಭಿಪ್ರಾಯ ಪಟ್ಟಿದ್ದಾರೆ.
ಅವರು ನಿನ್ನೆ ನಗರದ ಡಾ. ಜೋಳದರಾಶಿ ದೊಡ್ಡನ ಗೌಡ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯಲ್ಲಿ  ಇಲ್ಲಿನ ಟಿ ಹೆಚ್ ಎಂ ಸಾಂಸ್ಕೃತಿಕ ಕಲಾ ಟ್ರಸ್ಟ್ ಹಮ್ಮಿಕೊಂಡ “ಸಾಂಸ್ಕೃತಿಕ ಕಲರವ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸೂತ್ರದ ಗೊಂಬೆ  ಇದೊಂದು ವಿಶೇಷ ಕಲೆ. ಪ್ರತಿಯೊಂದು ಪಾತ್ರದ ನಟನೆ ಮತ್ತು ಸಂಭಾಷಣೆಗೆ ತಕ್ಕಂತೆ  ಗೊಂಬೆಗಳನ್ನು ಆಡಿಸಿ ಪೌರಾಣಿಕ ಕಥಾ ಪ್ರಸಂಗಗಳನ್ನು ಪ್ರದರ್ಶಿಸುವುದು ಹೆಮ್ಮೆಯ ವಿಷಯ ಎಂದುರು.
ವಿ ಎಸ್ ಕೆ ವಿಶ್ವವಿದ್ಯಾಲಯದ ಕುಲಸಚಿವ ಎಸ್ ಎನ್ ರುದ್ರೇಶ್ ಮಾತನಾಡಿ, ಅಖಂಡ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದ ಕಲಾವಿದರು ಕಳೆದ ಹಲವಾರು ದಶಕಗಳಿಂದ ಗೊಂಬೆಗಳಿಗೆ ಜೀವ ತುಂಬುತ್ತಿರುವುದು ನಮ್ಮ ಜಿಲ್ಲೆಗೆ ಒಂದು ಹೆಮ್ಮೆಯ ವಿಷಯ.  ಟಿ ಹೆಚ್ ಎಂ ಕಲಾ ಟ್ರಸ್ಟ್ ಇಂಥ ಕಲಾವಿದರನ್ನು ಕರೆಸಿ  ಪ್ರೋತ್ಸಾಹಿಸುತ್ತಿರುವುದಕ್ಕೆ ಅಭಿನಂದನಾ ಕಾರ್ಯವೆಂದರು.
ಅಧ್ಯಕ್ಷತೆ ವಹಿಸಿದ್ದ ಐಜಿಪಿ ಆಫೀಸಿನ ಆಡಳಿತಾಧಿಕಾರಿ ಎಚ್ ಎಮ್ ಪಂಪಾಪತಿ,  ಬಳ್ಳಾರಿ ಜಿಲ್ಲೆ ಕಲೆಯ ತವರೂರು. ಇಲ್ಲಿ ಕಲಾವಿದರು ಕಲಾಪೋಷಕರು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುತ್ತಿದೆ ಎಂದರು.
ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಎಂ.ಶಿವಾಜಿ ರಾವ್ ಇದ್ದರು. ನಾಟಕ ಅಕಾಡೆಮಿಯ ಸದಸ್ಯರಾದ ಶಿವನಾಯಕ ದೊರೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಲಾವಿದರಿಗೆಲ್ಲ ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು. ನೂಪುರ ಲಲಿತಕಲಾ ಟ್ರಸ್ಟ್ ಅಧ್ಯಕ್ಷೆ ಡಾ. ವೀಣಾ ಮತ್ತು ತಂಡದವರಿಂದ ನೃತ್ಯ ಪ್ರದರ್ಶನ, ಪ್ರಕೃತಿ ಕಲಾ ಟ್ರಸ್ಟ್ ಅಧ್ಯಕ್ಷೆ ರೇಣುಕಾ ಅಭಿಲಾಷ್ ಮತ್ತು ತಂಡದವರಿಂದ ಸುಗಮ ಸಂಗೀತ ನಡೆಯಿತು.
 ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಶ್ರೀ ಮಾರುತಿ ಯಕ್ಷಗಾನ ಸೂತ್ರದ ಗೊಂಬೆ ಮತ್ತು ದೊಡ್ಡಾಟ ಮಂಡಳಿ ಹಲವಾಗಲೂ ಗ್ರಾಮ ಹರಪನಹಳ್ಳಿ ತಾಲೂಕು ಇವರಿಂದ “ಕರ್ಣ ಪರ್ವ” ಎಂಬ ಪೌರಾಣಿಕ ಕಥಾ ಪ್ರಸಂಗ ಸೂತ್ರದ ಗೊಂಬೆ ಆಟ ನಡೆಯಿತು. ಭಾಗವತರು ಎ ರಮೇಶ ಆಚಾರ್, ಮೃದಂಗ ಕೆ ಶಂಭುಲಿಂಗ ಆಚಾರಿ, ಹಾರ್ಮೋನಿಯಂ ಮಲ್ಲಿಕಾರ್ಜುನ, ಶಹನಾಯಿ ಬಿದ್ದಪ್ಪ, ಮೇಳ ಭಗವಂತನ ಗೌಡ್ರು, ಸೋಮನಗೌಡ್ರು, ಗೊಂಬೆ ಕುಣಿಸುವವರು ಪುಟ್ಟಪ್ಪ, ಕೊಟ್ರೇಶಿ, ನಾಗರಾಜ, ಬಸವರಾಜ, ಷಣ್ಮುಖ,ಸಂತೋಷ, ಲೋಹಿತಾ ಚಾರ್, ಸುರೇಶ ಆಚಾರ್.
 ಸ್ವಾಗತ ಮತ್ತು ಪ್ರಾಸ್ತಾವಿಕ  ಟಿ ಹೆಚ್ ಎಂ ಸಾಂಸ್ಕೃತಿಕ ಕಲಾ ಟ್ರಸ್ಟ್ ಅಧ್ಯಕ್ಷ ಟಿ ಹೆಚ್ಎಂ ಬಸವರಾಜ್. ವಂದನಾರ್ಪಣೆ ಕೆ. ಜಗದೀಶ್ ಮಾಡಿದರು. ನಿರೂಪಣೆ ಅಮಾತಿ ಬಸವರಾಜ ನೆರವೇರಿಸಿದರು.