ರಸ್ತೆಯಲ್ಲೂ ಗುಂಡಿ: ಸವಾರರ ಪರದಾಟ
ಲಕ್ಷ್ಮೇಶ್ವರ,ಆ.12:ಪಟ್ಟಣದಲ್ಲಿ ಹಾದು ಹೋಗಿರುವ ಕಲ್ಮಲಾ-ಶಿಗ್ಗಾಂವ ರಾಜ್ಯ ಹೆದ್ದಾರಿ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದು ಮೋಟಾರ್ ಸೈಕಲ್ ಸವಾರರು ಮತ್ತು ವಾಹನ ಚಾಲಕರು ಪ್ರತಿನಿತ್ಯ ಗೋಳಾಡುವ ಸ್ಥಿತಿ ಇದೆ.
ಕಲ್ಮಲಾ-ಶಿಗ್ಗಾವ್ ರಾಜ್ಯ ಹೆದ್ದಾರಿ ಶಿರಹಟ್ಟಿ ತಾಲೂಕಿನ ಸುಗ್ಗನಹಳ್ಳಿ ಬನ್ನಿಕೊಪ್ಪ ಬೆಳ್ಳಟ್ಟಿ ಸುರಣಿಗಿ ಶಿಗ್ಲಿ ಲಕ್ಷ್ಮೇಶ್ವರ ಮಾರ್ಗವಾಗಿ ಗುಡಿಗೇರಿ ಮಂಡಿಗನಾಳ ಅತ್ತಿಗೇರಿ ಶಿಶುನಾಳ ಕ್ರಾಸು ಹುಲಗೂರು ಮುಖಾಂತರ ಶಿಗ್ಗಾಂವಿ ತಲುಪುತ್ತದೆ.
ದುರ್ದೈವದ ಸಂಗತಿ ಎಂದರೆ ಗದಗ ಜಿಲ್ಲೆಯ ಆರಂಭದಿಂದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮಂಡಿಗನಾಳದವರೆಗೂ ಈ ರಸ್ತೆ ಕಿತ್ತು ,ನಿರ್ವಹಣೆಯ ಕೊರತೆಯಿಂದ ಕಳಪೆ ಕಾಮಗಾರಿಯಿಂದ ಈ ರಸ್ತೆ ರಾಜ್ಯ ಹೆದ್ದಾರಿಯೇ ಎಂಬ ಸಂಶಯ ಬರುತ್ತದೆ.
ಈಗ ಈ ರಸ್ತೆಯು ಸವಣೂರು ಕ್ರಾಸಿನ ಮಾನವಿ ಅವರ ಪೆಟ್ರೋಲ್ ಬಂಕಿನ ಸಮೀಪವೇ ಕಲ್ಮಲಾ ಶಿಗ್ಗಾವ್ ರಾಜ್ಯ ಹೆದ್ದಾರಿ ಬಸ್ಸು ತಿರುಗುವ ಮಾರ್ಗದಲ್ಲಿ ದೊಡ್ಡದಾದ ಗುಂಡಿ ಒಂದು ಕಡೆಯಾದರೆ ಅಲ್ಲಿಂದ ಸ್ವಲ್ಪ ದೂರದಲ್ಲಿ ಹಳೆ ಬಸ್ ನಿಲ್ದಾಣದ ಸಮೀಪ ನಡು ರಸ್ತೆಯಲ್ಲಿಯೇ ಗುಂಡಿ ಬಿದ್ದು ನೀರು ನಿಂತಿದೆ.
ಸಾರ್ವಜನಿಕರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಕೊನೆಯ ಪಕ್ಷ ಗುಂಡಿಗಳನ್ನಾದರೂ ಮುಚ್ಚಿ ಪ್ರಯಾಣಿಕರು ವಾಹನ ಸವಾರರು ಎಡಗೈ ಮುಷ್ಟಿಯಲ್ಲಿ ಜೀವ ಹಿಡಿದುಕೊಂಡು ಹೋಗುವುದನ್ನು ತಪ್ಪಿಸಬೇಕು ಪ್ರಾಣ ಹಾನಿ ಆಗುವ ಮೊದಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.