ಆ. ೧೮ ರಂದು ಶ್ರೀ ಪತಂಜಲಿ ವಿಗ್ರಹ ಲೋಕಾರ್ಪಣೆ
ಸಂಜೆವಾಣಿ ವಾರ್ತೆ
ದಾವಣಗೆರೆ ೧೨, ನಗರದ ದೇವರಾಜ ಅರಸು ಬಡಾವಣೆ ‘ಸಿ’ ಹಂತದಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ (ರಿ), ದಾವಣಗೆರೆ ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಇದೇ ಆಗಸ್ಟ್ ೧೮ ರಪ್ರಾತಃಕಾಲ ೬-೦೦ ಗಂಟೆಗೆ ಯೋಗ ಪಿತಾಮಹ ಪ್ರಾತಃ ಸ್ಮರಣೀಯ ಶ್ರೀ ಪತಂಜಲಿ ಮಹರ್ಷಿಯ ನೂತನ ವಿಗ್ರಹ ಲೋಕಾರ್ಪಣೆಗೊಳ್ಳಲಿದೆ.ಈ ವಿಗ್ರಹವನ್ನು ಸಾಗರದ ಶ್ರೀರಾಮ ಫೈನ್ಸ್ ಆರ್ಟ್ನ ಪ್ರಸಿದ್ಧ ಕರಕುಶಲ ಶಿಲ್ಪಿ  ಆದರ್ಶ ಗುಡಿಗಾರ್ ಇವರು ನಿರ್ಮಿಸಿದ್ದು ಅತ್ಯಂತ ಸುಂದರವಾಗಿ ಮೂಡಿ ಬಂದಿದೆ. ಸಾಗರದ ಶಿಲ್ಪಕಲಾ ಮಂದಿರದಲ್ಲಿ ಶ್ರೀ ಪತಂಜಲಿ ವಿಗ್ರಹವನ್ನು ಡಾ.ರಾಘವೇಂದ್ರ ಗುರೂಜಿಯವರಿಗೆ ಅರ್ಪಿಸಿದ ಸುಸಂದರ್ಭದಲ್ಲಿ ಪ್ರತಿಷ್ಠಾನದ ವತಿಯಿಂದ ಕಲಾವಿದ  ಆದರ್ಶ ಗುಡಿಗಾರ್ ಅವರನ್ನು ಆತ್ಮೀಯವಾಗಿ ಗೌರವಿಸಿ ಸಾಂಪ್ರದಾಯಿಕವಾಗಿ ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಆದರ್ಶ ಗುಡಿಗಾರ್, ದೇಶದಲ್ಲಿ ನಮ್ಮ ವಂಶಸ್ಥರು ತುಂಬಾ ಕಡಿಮೆ ಸಂಖ್ಯೆಯಲ್ಲಿದ್ದು, ಈ ಹಿಂದೆ ನಮ್ಮ ಪೂರ್ವಜರು ಮೈಸೂರು ಅರಮನೆಯ ಮಹಾಸಂಸ್ಥಾನದಲ್ಲಿ ಮತ್ತು ಕೆಳದಿಯ ವೀರಪ್ಪ ನಾಯಕ ಅರಮನೆಗಳಲ್ಲಿ ಸೇವೆ ಸಲ್ಲಿಸಿದವರಾಗಿದ್ದು, ಆ ವಂಶದ ಕುಡಿ ನಾನಾಗಿದ್ದು, ತಂದೆಯವರ ಮಾರ್ಗದರ್ಶನದಂತೆ ಈ ಕಲೆಯನ್ನು ಮುಂದುವರಿಸುತ್ತಿದ್ದೇನೆ. ಅನೇಕ ರೀತಿಯ ವಿಗ್ರಹಗಳನ್ನು ನಾನು ರಚಿಸಿದ್ದೇನೆ. ಆದರೆ ಈ ಪತಂಜಲಿ ವಿಗ್ರಹವನ್ನು ರಚಿಸಿದಾಗ ಒಂದು ಹೊಸ ಅನುಭವವನ್ನು ತಂದು ಕೊಟ್ಟಿತು ಏಕೆಂದರೆ ಈ ಮೂರ್ತಿಯು ಅತ್ಯಂತ ವಿಶೇಷತೆಯಿಂದ ಕೂಡಿದ್ದಾಗಿದ್ದು, ಆದಿಶೇಷನ ರೂಪದಿಂದ ಮಾನವನ ರೂಪ ತಳೆದು ಅವತಾರ ಪುರುಷನ ಸಮ್ಮಿಳಿತ ದೊಂದಿಗೆ ರೂಪಿತವಾಗಿರುವ ವಿಗ್ರಹ ಇದಾಗಿದೆ. ಗುರೂಜಿಯವರ ಆಶಯದಂತೆ ಈ ವಿಗ್ರಹವನ್ನು ಅತ್ಯಂತ ಶ್ರದ್ಧೆಯಿಂದ ನಿರ್ಮಿಸಿಕೊಟ್ಟಿದ್ದೇನೆ. ತುಂಬಾ ಸಂತೋಷವಾಗಿದೆ ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಈಸಂದರ್ಭದಲ್ಲಿ ಸಾಗರದ ಶ್ರೀಧರ ಗ್ರಾಫಿಕ್ಸ್ನ ಕಲಾವಿದ ನಟರಾಜ್ ಮತ್ತು ದಾವಣಗೆರೆಯ ಬ್ರಷ್‌ಮ್ಯಾನ್ ನಾಗರಾಜ್ ಎನ್.ಸಿ. ಯೋಗ ಸಾಧಕರುಗಳಾದ ಮಹಾಂತೇಶ್, ಸಂತೋಷ್ ಹೆಚ್., ಆಧ್ಯಾತ್ಮ ಚಿಂತಕ ಎ.ಆರ್. ಮುರಳೀಧರ ಆಚಾರ್ ಇದ್ದರು.