ಸ್ವತಃ ಖರ್ಚಿನಲ್ಲಿ ನಾಲೆಯ ಹೂಳು ತೆಗೆಸುತ್ತಿರುವ ರೈತರು
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧೨; ನಾಲೆಯ ತುಂಬೆಲ್ಲಾ ತುಂಬಿರುವ ಹೂಳು, ಇಟಾಚಿಗಳ ಸಹಾಯದಿಂದ ನಾಲೆಯಲ್ಲಿನ ಹೂಳು ತೆಗೆಸುತ್ತಿರುವ ರೈತರು ಈ ದೃಶ್ಯ ಕಂಡು ಬಂದಿದ್ದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ವೆಂಕಟೇಶ್ವರ ಕ್ಯಾಂಪ್ ಬಳಿ. ಹೌದು ಭದ್ರಾ ಜಲಾಶಯದಿಂದ ನಾಲೆಗೆ ನೀರು ಹರಿದು ಇಂದಿಗೆ ಹದಿಮೂರು ದಿನ ಕಳೆದಿದೆ. ಆದರೆ ಇದೂವರೆಗೂ ಅಚ್ಚುಕಟ್ಟು ಕೊನೆ ಭಾಗಕ್ಕೆ ನೀರು ಹರಿದಿಲ್ಲಾ. ಭೀಮನೆರೆಯಿಂದ ಕಂದಗಲ್ಲು ಗ್ರಾಮದವರೆಗೆ 19 ಕಿಲೋ ಮೀಟರ್ ಉಪನಾಲೆ ಇದ್ದು ನಾಲೆಯ ತುಂಬೆಲ್ಲಾ ಹೂಳು ತುಂಬಿದೆ. ಇದರಿಂದಾಗಿ ಕೊನೆ ಭಾಗಕ್ಕೆ ನೀರು ಹರಿದಿಲ್ಲಾ. ನಾಲೆಯ ಹೂಳು ತೆಗೆಸುವಂತೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿ ನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಇದೀಗ ರೈತರು ಹಾಗೂ ನೀರು ಬಳಕೆದಾರರ ಸಂಘದವರು ಸೇರಿಕೊಂಡು ಸ್ವತಃ ಖರ್ಚಿನಲ್ಲಿ ಸುಮಾರು ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ನಾಲೆಯ ಹೂಳು ತೆಗೆಸುವ ಕೆಲಸಕ್ಕೆ ಮುಂದಾಗಿದ್ದಾರೆ.ಕಂದಗಲ್ಲು ಗ್ರಾಮದಲ್ಲಿ ಸುಮಾರು 2,500 ಎಕರೆ ಪ್ರದೇಶಕ್ಕೆ ಉಪನಾಲೆಯಿಂದ ನೀರು ಹರಿಯಲಿದೆ. ಅಷ್ಟೇ ಅಲ್ಲದೇ 94 ಎಕರೆ ವಿಸ್ತೀರ್ಣದ ಕೆರೆಗೂ ನೀರು ತಲುಪಿಲ್ಲ. ಆದ್ದರಿಂದ ಕಂದಗಲ್ಲು ಗ್ರಾಮದ ರೈತರು ಭತ್ತ ನಾಟಿ ಮಾಡಲು ಮತ್ತು ತೋಟಗಳಿಗೆ ನೀರು ಬಳಸಲು ಸಾಧ್ಯವಾಗಿಲ್ಲ. ನಾಲೆಯ ಹೂಳು ತೆಗೆಸಲು ಅಧಿಕಾರಿಗಳನ್ನ ಕೇಳಿದರೆ ಅನುದಾನ ಇಲ್ಲಾ ಎಂದು ಹೇಳುತ್ತಿದ್ದರೇ, ಜನಪ್ರತನಿಧಿಗಳಿಗೆ ನಮ್ಮ ಗೋಳು ಕೇಳುತ್ತಿಲ್ಲಾ. ಇದರಿಂದಾಗಿ ರೈತರ ಬಳಿ ಚಂದಾ ವಸೂಲಿ ಮಾಡುವುದರ ಜೊತೆಗೆ ಎರಡು ನೀರ ಬಳಕೆದಾರರ ಸಂಘಗಗಳು ಸೇರಿಕೊಂಡು ನಾಲೆಯ ಹೂಳು ತೆಗೆಸಲಾಗುತ್ತಿದೆ. ಒಟ್ಟಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಅಚ್ಚುಕಟ್ಟು ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲಾ. ಇನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ನಾಲೆಯಲ್ಲಿ ಹೂಳು ತೆಗೆಸಲು ಮುಂದಾಗುತ್ತಾರಾ ಎಂಬುದನ್ನು ಕಾದು ನೋಡ ಬೇಕಿದೆ.