ಇಲಾಖೆಗಳ ಅವ್ಯವಸ್ಥೆ: ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತರಾಟೆ
ಚಿಕ್ಕನಾಯಕನಹಳ್ಳಿ, ಆ. ೧೨- ಪಟ್ಟಣದ ವಿವಿಧ ಇಲಾಖೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳನ್ನು ಕಂಡು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಲ್ಲೂಕು ಆಡಳಿತಸೌಧದಲ್ಲೇ ಕೆಲವು ಇಲಾಖೆಗಳ ಪ್ರಗತಿ ಪರಿಶಿಲನೆ ನಡೆಸಿದರು.
ನಂತರ ಸಾರ್ವಜನಿಕ ಆಸ್ಪತ್ರೆಗೆ ಬೇಟಿ ನೀಡಿ ಅಲ್ಲಿನ ಸ್ವಚ್ಛತೆಯ ಬಗ್ಗೆ, ವೈದ್ಯರುಗಳ ಕರ್ತವ್ಯದ ಬಗ್ಗೆ ಬೆಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶೌಚಾಲಯಗಳು ಸ್ವಚ್ಛತೆ ಇಲ್ಲದಿರುವ ಬಗ್ಗೆ ಡಿ ಗ್ರೂಪ್ ನೌಕರರ ಮೇಲೆ ಮಾತಿನ ಗದಾಪ್ರಹಾರ ಮಾಡಿದ ಅವರು, ಮುಖ್ಯಾಧಿಕಾರಿಗೆ ಆಸ್ಪತ್ರೆಯ ಸುತ್ತಮುತ್ತ ಸ್ವಚ್ಛತೆ ಮಾಡುವಂತೆ ಹಾಗೂ ಫಾಗಿಂಗ್ ಮಾಡುವಂತೆ ಸೂಚಿಸಿ, ಡೆಂಗ್ಯೂ ಪ್ರಕರಣಗಳು ಹೆಚ್ಚಾಗದಂತೆ ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು.
ಆಸ್ಪತ್ರೆಗೆ ಭೇಟಿ ನೀಡುವಂತಹ ರೋಗಿಗಳ ವಿವರವನ್ನು ದಾಖಲಿಸುವ ಮತ್ತು ಅವರಿಗೆ ಪರಿಹಾರ ನೀಡಿರುವ ಬಗ್ಗೆ ದಾಖಲೆಗಳನ್ನು ಪರಿಶಿಲಿಸಿದರು.
ಈ ಸಂದರ್ಭದಲ್ಲಿ ನೆರಳು ಸಂಘಟನೆಯ ಮಹಮದ್ಹುಸೇನ್ (ಗುಂಡ) ಮನವಿ ಸಲ್ಲಿಸಿ ಆಸ್ಪತ್ರೆಯಲ್ಲಿ ಮೂಳೆ ತಜ್ಞರು, ಚರ್ಮ ತಜ್ಞರು ಇಲ್ಲದಿರುವ ಬಗ್ಗೆ ಕೂಡಲೇ ಅಗತ್ಯವಿರುವಂತಹ ವೈದ್ಯರನ್ನು ನೇಮಿಸುವಂತೆಯು ಖಾಲಿ ಇರುವಂತಹ ಡಿ ಗ್ರೂಪ್ ನೌಕರರನ್ನು ನೇಮಿಸುವಂತೆ ತಿಳಿಸಿದ ಅವರು, ನಮ್ಮ ಆಸ್ಪತ್ರೆಗೆ ಕುದುರೆಮುಖ ಮೈನ್ಸ್ ಕಂಪನಿ ನೀಡಿದ್ದ ತುರ್ತು ಚಿಕಿತ್ಸ ವಾಹನ ಜಿಲ್ಲಾ ಕೇಂದ್ರಕ್ಕೆ ಹೋಗಿದ್ದು ಅದನ್ನು ಮತ್ತೆ ನಮ್ಮತಾಲ್ಲೂಕಿಗೆ ವಾಪಸ್ ಕರೆಸುವಂತೆ ಮನವಿ ಮಾಡಿದರು.
ಪಟ್ಟಣದ ಪುರಸಭಾ ವ್ಯಾಪ್ತಿಯ ಕಸ ವಿಲೇವಾರಿ ಘಟಕಕ್ಕೆ ಬೇಟಿ ನೀಡಿ ಅಲ್ಲಿ ಕಸ ವಿಲೇವಾರಿಯಾಗದಿರುವ ಬಗ್ಗೆ ಅಧಿಕಾರಿ ವಿರುದ್ದ ಗುಡುಗಿದರು. ಹತ್ತಾರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬೃಹತ್ ಯಂತ್ರೋಪಕರಣಗಳನ್ನು ನೀಡಿದ್ದರೂ ಅವುಗಳನ್ನು ಸಮರ್ಪಕವಾಗಿ ಬಳಸದೆ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಕಸಗಳನ್ನು ವಿಂಗಡಿಸದೆ ಬೇಕಾ ಬಿಟ್ಟಿ ಎಸೆದಿರುವ ವ್ಯವಸ್ಥೆಯನ್ನು ಗಮನಿಸಿದರು. ಕಸದಿಂದ ಗೊಬ್ಬರ ತಯಾರಿಕೆಯು ನಡೆಯದಿರುವ ಬಗ್ಗೆ ಬೆಸರ ವ್ಯಕ್ತಪಡಿಸಿದ ಅವರು, ಕೂಡಲೇ ಇನ್ನು ೧೫ ದಿನಗಳೊಳಗಾಗಿ ಎಲ್ಲ ಯಂತ್ರಗಳನ್ನು ಪ್ರಾರಂಭ ಮಾಡಿ ಅಗತ್ಯವಿರುವಂತಹ ಸಿಬ್ಬಂದಿಗಳೊಂದಿಗೆ ಕಸವಿಲೇವಾರಿ ಮಾಡುವಂತೆ ಸೂಚನೆ ನೀಡಿದರು.
ಈ ಬಗ್ಗೆ ಮುಖ್ಯಾಧಿಕಾರಿ ಮಂಜುಳಮ್ಮ ಮಾತನಾಡಿ, ಪ್ರತಿನಿತ್ಯ ಸುಮಾರು ೧೦ ಟನ್ ಕಸ ಪಟ್ಟಣದಲ್ಲಿ ಶೇಖರಣೆಯಾಗುತ್ತಿದ್ದು ಈ ಬಗ್ಗೆ ಈ ಕಸವಿಲೇವಾರಿ ಘಟಕ ಹಾಗೂ ಇದರ ಕೆಲಸ ಕಾರ್ಯದ ಬಗ್ಗೆ ತಿಳಿಸಲು ಮಾರ್ಗದರ್ಶನ ಮಾಡಲು ಸರಿಯಾದ ಅಭಿಯಂತರರು ಇಲ್ಲದಿರುವ ಬಗ್ಗೆ ಮತ್ತು ನೌಕರರ ಸಮಸ್ಯೆ ಬಗ್ಗೆ ಮಾಹಿತಿ ನೀಡಿದರು.