ಕಲಿಕೆ ಪರಿಪೂರ್ಣಕ್ಕೆ ಧ್ಯಾನ, ಪರಿಶ್ರಮ ಅವಶ್ಯ
ಚಿಕ್ಕನಾಯಕನಹಳ್ಳಿ, ಆ. ೧೨- ಪ್ರತಿ ವಿದ್ಯಾರ್ಥಿ ಬದುಕಿನಲ್ಲಿ ಕಲಿಕೆ ಪರಿಪೂರ್ಣವಾಗಲು ಧ್ಯಾನ ಮತ್ತು ಶ್ರಮ ಅಗತ್ಯ ಎಂದು ತುಮಕೂರು ವಿಶ್ವ ವಿದ್ಯಾನಿಲಯದ ಡಾ. ಡಿ.ವಿ.ಗುಂಡಪ್ಪ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಡಾ. ಪಿ ಎಂ. ಗಂಗಾಧರಯ್ಯ ಹೇಳಿದರು.
ನವೋದಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ೨೦೨೩-೨೪ನೇ ಸಾಲಿನ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಎಲ್ಲದಕ್ಕಿಂತ ದೊಡ್ಡದು ಜ್ಞಾನ. ಈ ಜ್ಞಾನ ಸಂಪಾದನೆಗೆ ಜಾತಿ, ಮತ, ವರ್ಗದ ಹಂಗಿಲ್ಲ. ಎಲ್ಲರೂ ವಿಶ್ವಾಸ ಮತ್ತು ನಂಬಿಕೆ ಇಟ್ಟು ಹೆಜ್ಜೆ ಇಟ್ಟರೆ ಕಲಿಕೆ ಗುರಿ ತಲುಪಲು ಸಾಧ್ಯ. ಆದ್ದರಿಂದ ಪ್ರತಿ ವಿದ್ಯಾರ್ಥಿಯು ತಾನು ಒಳ್ಳೆಯ ಸಂಸ್ಕಾರ ಮತ್ತು ಮೌಲ್ಯಗಳ ಮೂಲಕ ಹೆಜ್ಜೆ ಇಡಬೇಕು ಎಂದರು.
ಸಮಾಜದ ಕೆಟ್ಟ ಚಟುವಟಿಕೆಯನ್ನು ಪ್ರಶ್ನಿಸುವ ಗುಣ ನಿಮ್ಮದಾಗಲಿ. ನಿಮ್ಮಲ್ಲಿ ನಾಯಕತ್ವ ಗುಣ ಬೆಳೆಯಲಿ. ಜತೆಗೆ ನವೋದಯ ಕಾಲೇಜು ಕಲೆ, ಸಂಸ್ಕೃತಿ ಬೆಳೆಸುತ್ತಿರುವ ಕರ್ಮ ಭೂಮಿ ಎಂದು ಪ್ರಶಂಸಿಸಿದರು.
ಕಾಲೇಜಿನ ಪ್ರಭಾರ ಪ್ರಾoಶುಪಾಲರಾದ ಡಾ. ರವಿಕುಮಾರ್ ಸಿ. ಮಾತನಾಡಿ, ನವೋದಯ ಕಾಲೇಜು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವರದಾನ. ಇಲ್ಲಿ ಕಲಿತ ಅನೇಕ ಜನ ಉನ್ನತ ಸ್ಥಾನದಲ್ಲಿದ್ದು ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಮತ್ತಷ್ಟು ಸವಲತ್ತು ಕಲ್ಪಿಸಿ ಅವರನ್ನು ಉತ್ತಮ ನಾಗರೀಕರನ್ನಾಗಿ ರೂಪಿಸಲು ಬೋಧಕವರ್ಗ ಸದಾ ಸಿದ್ದ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗೆ ಸಾಧಿಸುವ ಕನಸು ಇರಬೇಕು. ಆಗ ಅನೇಕ ಸಮಸ್ಯೆ ಇದ್ದರೂ ಎಲ್ಲವನ್ನು ಜಯಿಸುವ ಶಕ್ತಿ ಸಿಗುತ್ತದೆ. ಗ್ರಾಮೀಣ ಭಾಗದ ಪ್ರತಿ ವಿದ್ಯಾರ್ಥಿಯು ಒಳ್ಳೆಯ ಮಾರ್ಗ ಹಿಡಿದು ಉನ್ನತವಾದ ಹುದ್ದೆಗೇರಬಹುದು. ನಿಮ್ಮ ಭವಿಷ್ಯದಲ್ಲಿ ಸ್ವಾಭಿಮಾನಿಗಳಾಗಿ ಬದುಕಿ ಎಂದು ಕಿವಿ ಮಾತು ಹೇಳಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರಾಕೇಶ್, ಕಾಲೇಜಿನ ಅಧ್ಯಾಪಕರಾದ ಸದಾನಂದ ಸ್ವಾಮಿ, ಡಾ. ಶ್ರೀನಿವಾಸ್, ಅನಿತಲಕ್ಷ್ಮಿ, ಪಲ್ಲವಿ, ಸಿದ್ದಲಿಂಗಮೂರ್ತಿ ಉಪಸ್ಥಿತರಿದ್ದರು.