ರಾಜಕೀಯ ಎಂಬುವುದು ಪ್ರಜಾಸೇವೆ ಆಲ್ಲ ಸ್ವಾರ್ಥ ಸೇವೆ
ಕೋಲಾರ,,೧೨-ರಾಜಕೀಯ ಅನ್ನೋದು ಪ್ರಜಾಸೇವೆ ಆಗಬೇಕು, ಆದರೆ ಇಂದು ಪ್ರಜಾಸೇವೆ ಬಿಟ್ಟು ಸ್ವಾರ್ಥ ಸೇವೆಗೆ ಇಳಿದಿದ್ದಾರೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಬೇಸರ ವ್ಯಕ್ತಪಡಿಸಿದರು.
ನಗರದ ಹೊರವಲಯದ ಅಂತರಗಂಗೆ ಬುದ್ದಿಮಾಂದ್ಯ ಮತ್ತು ಅನಾಥ ಮಕ್ಕಳ ಆಶ್ರಮಕ್ಕೆ ಭೇಟಿ ನೀಡಿ ಸುದ್ಧಿಗಾರರೊಂದಿಗೆ ಮಾತನಾಡಿ, ಮೈಸೂರು ಪಾದಯಾತ್ರೆ ಮತ್ತು ಕಾಂಗ್ರೆಸ್ ಜನಾಂದೋಲನ ಕುರಿತು ವ್ಯಕ್ತನಿಸಿದ ನಾಗರಾಜ್, ಪ್ರಜೆಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಸ್ವಾರ್ಥ ಸೇವೆಗೆ ಅಧಿಕಾರವನ್ನು ಬಳಸಿಕೊಳ್ಳುತ್ತಿದ್ದಾರೆ, ಕೆಲವರು ಪ್ರಾಮಾಣಿಕವಾಗಿದ್ದಾರೆ, ಎಲ್ಲರೂ ಭ್ರಷ್ಟರಾದರೆ ಸೂರ್ಯ, ಚಂದ್ರ ಹುಟ್ಟಲ್ಲ ಎಂದರು.
ಮುಡಾ ಮತ್ತು ವಾಲ್ಮೀಕಿ ಹಗರಣದ ಬಗ್ಗೆ, ಸಿದ್ದರಾಮಯ್ಯ ಪಕ್ಷ, ಜಾತಿಯನ್ನು ಬದಿಗೊತ್ತಿ, ಪಾರದರ್ಶಕವಾದ ತನಿಖೆ ಮಾಡಬೇಕು, ಯಾರೇ ತಪ್ಪು ಮಾಡಿದರು ಶಿಕ್ಷೆಯಾಗಬೇಕು, ಬಡವರ ತೆರಿಗೆ ಹಣ ದುರುಪಯೋಗವಾಗಿದೆ, ಇದರ ಬಗ್ಗೆ ತನಿಖೆಯಾಗಬೇಕು, ಎಸ್‌ಐಟಿ, ಇಡಿ, ಸಿಬಿಐ, ಎಲ್ಲಾ ತನಿಖೆ ನಿಷ್ಪಕ್ಷಪಾತವಾಗಿರಬೇಕು ಎಂದು ಒತ್ತಾಯಿಸಿದರು.
ರಾಜಕಾರಣದಲ್ಲಿ ಎಲ್ಲಿವರೆಗೂ ಭ್ರಷ್ಟಾಚಾರ ಇರುತ್ತದೆ, ಅಲ್ಲಿವರೆಗೂ ರಾಜಕಾರಣಿಗಳ ಕೆಸರು ಎರಚಾಟ ನಿಲ್ಲುವುದಿಲ್ಲ ಎಂದ ನಾಗರಾಜ್, ಸಿದ್ದರಾಮಯ್ಯರಿಗೆ ಟಾರ್ಗೇಟ್ ಮಾಡುವ ಪ್ರಶ್ನೆ ಇಲ್ಲ, ತನಿಖೆಯಲ್ಲಿ ಯಾರೇ ತಪಿತಸ್ಥರು ಎಂದು ಸಾಬೀತಾದರೆ ಅದು ಸಿಎಂ ಆಗಲಿ ಪಿಎಂ ಆಗಲಿ ರಾಜ್ಯದ ಮಂತ್ರಿ ಆಗಲಿ ಶಾಸಕರಾಗಲಿ ಶಿಕ್ಷೆ ಆಗಲಿ ಎಂದು ಆಗ್ರಹಿಸಿದ ಅವರು, ಚಿಕ್ಕವರು ಮಾಡಿದರೂ ಅದು ತಪ್ಪು ದೊಡ್ಡವರು ಮಾಡಿದ್ದರೂ ಸಹ ಅದು ತಪ್ಪು, ರಾಜೀನಾಮೆ ಕೇಳುವ ಹಕ್ಕು ಪ್ರತಿಪಕ್ಷದವರಿಗೆ ಇದೆ ಎಂದು ಹೇಳಿದರು.
ಯಾರೇ ತಪ್ಪು ಮಾಡಿದರೂ ಕೂಡ ತಪ್ಪು, ಬಿಜೆಪಿ ಜೆಡಿಎಸ್ ನವರಲ್ಲಿಯೂ ತಪ್ಪು ಮಾಡಿದ್ದಾರೆ ಎಂದು ಹೇಳುತಿದ್ದಾರೆ. ಇನ್ನು ರಾಜ್ಯಪಾಲರಿಗೆ ಅಬ್ರಹಾಂ ಮನವಿ ಕೊಟ್ಟಿದ್ದಾರೆ, ರಾಜ್ಯಪಾಲರು ತನಿಖೆಗೆ ಕೊಟ್ಟಿದ್ದಾರೆ ತನಿಖೆ ಮಾಡಲಿ ರಾಜ್ಯಪಾಲರಿಗೆ ಕ್ರಮ ಕೈಗೊಳ್ಳುವ ಅಧಿಕಾರ ಇದೆ ಅವರು ಕ್ರಮ ಕೈಗೊಳ್ಳುತ್ತಾರೆ, ಹಣ…. ಹಣ….. ಎಂದು ಹಣ ಮಾಡುತ್ತಾರೆ. ಕೊನೆಗೆ ಒಂದು ದಿನ ಹೆಣವಾಗಿ ಹೋಗುತ್ತಾರೆ, ವ್ಯಾಪಾರದಲ್ಲಿ ಹಣ ಮಾಡುತ್ತಾರೆ ಅದು ಬೇರೆ ಎಂದರು.
ಆದರೆ ರಾಜಕಾರಣದಲ್ಲಿ ಹಣ ಯಾಕೆ, ಅದು ಬಡವರ ಹಣ ನಮಗ್ಯಾಕೆ ಎಂದು ಕಿಡಿಕಾರಿದರು. ತಪ್ಪು ದೊಡ್ಡವರು ಮಾಡಿದ್ದರೂ ಸಹ ಅದು ತಪ್ಪು ರಾಜೀನಾಮೆ ಕೇಳುವ ಹಕ್ಕು ಪ್ರತಿ ಪಕ್ಷದವರಿಗೆ ಇದೆ. ಯಾರೇ ತಪ್ಪು ಮಾಡಿದರೂ ಕೂಡ ತಪ್ಪು, ಬಿಜೆಪಿ ಜೆಡಿಎಸ್‌ನವರಲ್ಲಿಯೂ ತಪ್ಪು ಮಾಡಿದ್ದಾರೆ ಎಂದು ಹೇಳುತಿದ್ದಾರೆ ನಾನು ಪ್ರಾಮಾಣಿಕ ಸತ್ಯಹರಿಶ್ಚಂದ್ರ ಎಂದು ಹೇಳೋದಲ್ಲ ಎಂದು ತನ್ನ ಹಿಂದಿನ ಗುರುಗೆ ಟಾಂಗ್ ನೀಡಿದರು.