ಹಸಿದವರಿಗೆ ಮಾತ್ರ ಅನ್ನದಾತರ ಬೆಲೆ ಗೊತ್ತು
ಸಂಜೆವಾಣಿ ನ್ಯೂಸ್
ಮೈಸೂರು: ಆ.12:- ಹಸಿದವರಿಗೆ ಮಾತ್ರ ಅನ್ನ ಹಾಗೂ ಅನ್ನದಾತರ ಬೆಲೆ ಗೊತ್ತಿರುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಹೇಳಿದರು.
ಕನ್ನಡ ಸಾಹಿತ್ಯ ಕಲಾಕೂಟ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯು ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಯು.ಜಿ. ಮೋಹನಕುಮಾರ್ ಆರಾಧ್ಯ ಅವರ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಕಲಾ ಪ್ರದರ್ಶನ ಹಾಗೂ ಅನ್ನದಾತರೊಂದಿಗೆ ಸ್ವಾತಂತ್ರ್ಯೋತ್ಸವ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಅನ್ನದಾತ ಎಷ್ಟೇ ಕಷ್ಟ ಇರಲಿ ಎಲ್ಲರಿಗೂ ಅನ್ನ ಬೆಳೆದು ಕೊಡುತ್ತಾನೆ. ಆತ ಇಲ್ಲದಿದ್ದಲ್ಲಿ ಹಸಿವು ನೀಗಿಸಲಾಗದು ಎಂದರು.
ಹೀಗಾಗಿ ಅನ್ನದಾತರಿಗೆ ಸಮಾಜದ ಎಲ್ಲ ವರ್ಗದ ಜನ ಪೆÇ್ರೀತ್ಸಾಹ ನೀಡಬೇಕು ಎಂದು ಕರೆ ನೀಡಿದರು.
ಕಲಾವಿದ ಮೋಹನಕುಮಾರ್ ಆರಾಧ್ಯ ಕೇವಲ ಪೆನ್ ಬಳಸಿ, ಸ್ವಾತಂತ್ರ್ಯಯೋಧರ ಚಿತ್ರಗಳನ್ನು ರಚಿಸಿ, ಪ್ರದರ್ಶಿಸಿರುವುದು ಮೆಚ್ಚುಗೆ ವಿಷಯ. ನಮಗೆ ಕೇವಲ ಬೆರಳೆಣಿಕೆಯಷ್ಟು ಸ್ವಾತಂತ್ರ್ಯ ಯೋಧರು ಮಾತ್ರ ಗೊತ್ತು. ಆದರೆ ಇಲ್ಲಿ 73 ಮಂದಿಯ ಚಿತ್ರ ಹಾಗೂ ಅವರ ಬಗ್ಗೆ ವಿವರಗಳನ್ನು ಹಾಕಿರುವುದು ಉತ್ತಮವಾದುದುದು ಎಂದರು.
ಅನ್ನದಾತರಿಗೆ ಗೌರವ ಸಮರ್ಪಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ದೇಶದ ಗಡಿ ಕಾಯುವ ಸೈನಿಕ ಹಾಗೂ ನಮಗೆ ಅನ್ನ ನೀಡುವ ರೈತರನ್ನು ಯಾರೂ ಕೂಡ ಮರೆಯಬಾರದು ಎಂದರು.
ಇವತ್ತು ರೈತರು ಸಾಫ್ಟವೇರ್ ಉದ್ಯೋಗಿಗಳಿಗಿಂತ ಹೆಚ್ಚು ಸಂಪಾದನೆ ಮಾಡುತ್ತಿದ್ದರೂ ಮದುವೆಗೆ ಹೆಣ್ಣು ಕೊಡದ ಪರಿಸ್ಥಿತಿ ಇದೆ ಎಂದು ವಿಷಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಸಂಸ್ಥಾಪಕ ಸದಸ್ಯ ಪೆÇ್ರ.ಕೆ.ಸಿ.ಬಸವರಾಜು ಮಾತನಾಡಿ, ಹಸಿರು ಸಮೃದ್ಧಿಯ ಸಂಕೇತ. ಹಸಿರು ಬದಲಾವಣೆಯ ಸಂಕೇತ. ಇವತ್ತು ಕೂಡ ಪರ್ಯಾಯ ಶಕ್ತಿಯಾಗಬಲ್ಲ ತಾಕತ್ತು ಇರುವುದು ರೈತ ಸಂಘಕ್ಕೆ ಮಾತ್ರ ಎಂದರು.
ಎಪ್ಪತ್ತರ ದಶಕದ ದಲಿತ, ಎಂಭತ್ತರ ದಶಕದ ರೈತ ಹಾಗೂ ಭಾಷಾ ಚಳವಳಿಯಿಂದಾಗಿ ರಾಜ್ಯದಲ್ಲಿ ಸರ್ಕಾರಗಳೇ ಉರುಳಿವೆ. ಎಂಭತ್ತರ ದಶಕದಲ್ಲಿ ರೈತರು ಬಂದರೇ ವಿಧಾನಸೌಧ ಗಡಗಡ ನಡುಗುತ್ತಿತ್ತು. ಆದರೆ ಇವತ್ತು ಯಾರ್ಯಾರೋ ಹಸಿರು ಶಾಲು ಹಾಕಿಕೊಂಡಿದ್ದಾರೆ ಎಂದು ಅವರು ವಿಷಾದಿಸಿದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ಸ್ವಾತಂಕ್ರ್ಯ ನಂತರ ಕಳೆದ 77 ವರ್ಷಗಳಲ್ಲಿ ದೇಶ ಹಲವಾರು ಸಾಧನೆ ಮಾಡಿದೆ. ಇದರಲ್ಲಿ 140 ಕೋಟಿ ಜನರಿಗೂ ಅನ್ನ ನೀಡುತ್ತಿರುವ ರೈತರ ಪಾತ್ರ ಮಹತ್ವದ್ದು ಎಂದರು.
ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕ ಬಾಷಣ ಮಾಡಿದರು. ಆಲನಹಳ್ಳಿ ಶಾಶ್ವತ ಸೇವಾ ಸ್ಕೂಲ್ ಕಾರ್ಯದರ್ಶಿ ಎಂ.ಆರ್. ಚೌದರಿ , ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು ಮುಖ್ಯ ಅತಿಥಿಗಳಾಗಿದ್ದರು.
ಕರ್ನಾಟಕ ರಾಜ್ಯಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಂ, ಕನ್ನಡ ಚಳವಳಿಗಾರ ಮೂಗೂರು ನಂಜುಂಡಸ್ವಾಮಿ, ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ಯೋಗೇಶ್ ಉಪ್ಪಾರ್, ಮಡಿವಾಳ ಸಮಾಜದ ಮುಖಂಡ ರವಿನಂದನ್, ಶೋಭಾರಾಣಿ, ಶಿ.ಕುಮಾರಸ್ವಾಮಿ, ಮುಖ್ಯ ಶಿಕ್ಷಕಿ ಪವಿತ್ರಾ, ಮುಕ್ತಕ ಕವಿ ಮುತ್ತುಸ್ವಾಮಿ, ಕಲಾವಿದ ಯು.ಜಿ.ಮೋಹನಕುಮಾರ್ ಆರಾಧ್ಯ ಮೊದಲಾದವರು ಇದ್ದರು.
ಶಾಶ್ವತ ಸೇವಾ ಸ್ಕೂಲ್ ವಿದ್ಯಾರ್ಥಿಗಳು ರಮೇಶ್ ತಾಯೂರು ಅವರ ನೇತೃತ್ವದಲ್ಲಿ ನಾಡಗೀತೆ ಹಾಗೂ ರೈತ ಗೀತೆ ಹಾಡಿದರು.
ಸನ್ಮಾನಿತ ಅನ್ನದಾತರು
ಇದೇ ಸಂದರ್ಭದಲ್ಲಿ ಅನ್ನದಾತರಾದ ಹುಣಸೂರು ತಾ. ಮನುಗನಹಳ್ಳಿಯ ಬಿ. ವೀರಭದ್ರಪ್ಪ, ಹನುಮಂತಪುರದ ವಸಂತ, ನಂಜನಗೂಡು ತಾ. ಕಪ್ಪಸೋಗೆಯ ಮಹೇಂದ್ರ, ಮುದ್ದಹಳ್ಳಿಯ ಕುಮಾರಸ್ವಾಮಿ, ಚಿಕ್ಕಸ್ವಾಮಿ, ಟಿ. ನರಸೀಪುರ ತಾ. ಅತ್ತಹಳ್ಳಿಯ ದೇವರಾಜ್, ಹುಣಸೂರು ತಾ. ಹೊಸೂರು ಕುಮಾರ್, ಮಂಜು ಕಿರಣ್, ಕುಳ್ಳೇಗೌಡ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ಪರವಾಗಿ ಮಾತನಾಡಿದ ಮಹೇಂದ್ರ, ಪ್ರಥಮ ಪಿಯುಸಿ ಓದುವಾಗ ಕ್ಯಾನ್ಸರ್‍ನಿಂದ ಒಂದು ಕಾಲು ತೆಗೆದರೂ ಕಷ್ಟಪಟ್ಟು ವ್ಯವಸಾಯ ಮಾಡುತ್ತಿರುವ ಸಾಹಸಗಾಥೆಯನ್ನು ವಿವರಿಸಿದಾಗ, ಇಡೀ ಸಭಾಂಗಣ ಎದ್ದು ನಿಂತು ಗೌರವ ಅರ್ಪಿಸಿತು.