ಡಿಸಿಎಂ ಡಿ.ಕೆ.ಶಿವಕುಮಾರ್ ರಾಜೀನಾಮೆಗೆ ಆಗ್ರಹ
ಸಂಜೆವಾಣಿ ನ್ಯೂಸ್
ಮೈಸೂರು: ಆ.12:- ತುಂಗಭದ್ರಾ ಜಲಾಶಯದ ಗೇಟ್ ಮುರಿದ ಪ್ರಕರಣ ಉನ್ನತ ಮಟ್ಟದ ತನಿಖೆಯಾಗಬೇಕು. ಹೀಗಾಗಿ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.
ಕಳೆದ ಒಂದು ತಿಂಗಳಿಂದ ನಿರಂತರ ಮಳೆ. ಪ್ರವಾಹ ಬರುತ್ತಿದ್ದರು ಜಲಾಶಯಗಳ ಸುರಕ್ಷತೆ ಪ್ರವಾಹ ಹಾನಿ ಬಗ್ಗೆ ಗಂಭೀರ ಚಿಂತನೆ ನಡೆಸದೆ ನಿರ್ಲಕ್ಷ್ಯತನ ಮಾಡಿದ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಬೇಜವಾಬ್ದಾರಿತನ ಉತ್ತರ ಕರ್ನಾಟಕದ 4-5 ಜಿಲ್ಲೆಗಳ 22 ಲಕ್ಷ ಎಕ್ಟರ್ ನಲ್ಲಿ ಭತ್ತ ಬೆಳೆಯುತ್ತಿದ್ದ ರೈತರ ಬದುಕು ನಾಶವಾಗಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ 70 ವರ್ಷಗಳ ಹಳೆಯದಾದ ಗೇಟ್‍ಗಳನ್ನು ಬದಲಾಯಿಸಬೇಕು. ಈ ಬಗ್ಗೆ ನಿಗಾ ವಹಿಸುವಂತೆ ಒತ್ತಾಯ ಮಾಡಿದ್ದರೂ ನಿರ್ಲಕ್ಷ್ಯ ಮಾಡಿದ ನೀರಾವರಿ ಇಲಾಖೆ ಈ ಘಟನೆಗೆ ಕಾರಣವಾಗಿದೆ. ರೈತರು ಬೆಳೆದ ಅನ್ನ ತಿನ್ನುವ ಅವಿವೇಕಿ ಜನಪ್ರತಿನಿಧಿಗಳಿಗೆ ರೈತರ ಸಂಕಷ್ಟ ಅರಿವಾಗುತ್ತಿಲ್ಲ. ಸ್ವಹಿತಾಶಕ್ತಿಯ ರಾಜಕೀಯವೇ ಮುಖ್ಯವಾಗಿರುವ ಕಾರಣ ರೈತರ ಬದುಕು ಬೀದಿ ಪಾಲಾಗುತ್ತಿದೆ. ಕಳೆದ ವರ್ಷ ಬರಗಾಲ ರೈತರನ್ನು ಕಾಡಿತ್ತು. ಈ ವರ್ಷ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗಿದೆ. ಉತ್ತಮ ಬೆಳೆ ಬರುತ್ತದೆ ಎನ್ನುವ ರೈತರ ಸಂತೋಷ ಕಮರಿ ಹೋಗುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನೀರಾವರಿ ಸಚಿವರು ಕಳೆದ ವರ್ಷ ಕಾವೇರಿ ಭಾಗದ ನೀರನ್ನು ಖಾಲಿ ಮಾಡಿ ರೈತರನ್ನು ಬಲಿಕೊಟ್ಟಾಗಿದೆ. ಇವರ ಬೇಜವಾಬ್ದಾರಿತನದಿಂದ ಈ ವರ್ಷ ಈ ಭಾಗದ ರೈತರು ಬಲಿಪಶು ಆಗಿದ್ದಾರೆ. ನೀರಾವರಿ ಸಚಿವರು ಕೂಡಲೇ ರಾಜೀನಾಮೆ ನೀಡಿ ಪಕ್ಷದ ಅಧ್ಯಕ್ಷಗಿರಿ ರಾಜಕೀಯ ಮಾಡುವುದು ಒಳ್ಳೆಯದು ಎಂದು ಆಗ್ರಹಿಸಿದ್ದಾರೆ.
ರಾಜ್ಯದ ಅಭಿವೃದ್ಧಿಗೆ ಗಮನ ಕೊಡಿ
ಆಡಳಿತ ಮತ್ತು ವಿರೋಧ ಪಕ್ಷಗಳು ಬೀದಿಯಲ್ಲಿ ರಂಪಾಟ ಮಾಡುತ್ತಾ ಒಬ್ಬರ ಮೇಲೊಬ್ಬರು ಕೆಸರು ಎರಚಿಕೊಳ್ಳುತ್ತಾ ರಾಜ್ಯದ ಜನತೆಗೆ ಅವಮಾನ ಮಾಡಿವೆ. ಹಾರಾಟ-ಕೂಗಾಟ ನಿಲ್ಲಿಸಿ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಬೇಕು. ರಾಜ್ಯದ ಅಭಿವೃದ್ಧಿ ಕಡೆ ಗಮನಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ.
ಆಡಳಿತ ಮತ್ತು ವಿರೋಧ ಪಕ್ಷಗಳು ತಮ್ಮ ತಮ್ಮ ಭ್ರಷ್ಟಾಚಾರ ಒಪ್ಪಿಕೊಂಡಿವೆ. ಇವರುಗಳಿಂದ ಭ್ರಷ್ಟಾಚಾರ ರಹಿತ ಆಡಳಿತ ನಿರೀಕ್ಷೆ ಮಾಡುವುದು ಮೂರ್ಖತನವಾಗಲಿದೆ. ಈ ಪಕ್ಷಗಳ ವಿರುದ್ಧ ಜನರೇ ಭ್ರಷ್ಟಾಚಾರ ವಿರೋಧಿ ಆಂದೋಲನ ಕಟ್ಟಿ ಈ ಭ್ರಷ್ಟ ಪಕ್ಷಗಳನ್ನು ದೂರ ಇಡಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.
ದೇವರಗಿರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಬೇಡ
ಗಣಿಗಾರಿಕೆಯಿಂದಾಗಿ ಬಳ್ಳಾರಿ ಬಂಡೆಗಳು ಮಾಯವಾಗಿವೆ. ನೈಸರ್ಗಿಕ ಖನಿಜ ಸಂಪತ್ತು ಲಂಗು-ಲಗಾಮಿಲ್ಲದೆ ಲೂಟಿಯಾಗಿದೆ. ಪರಿಸರ ನಾಶವಾಗಿದೆ. ಜನಜೀವನ ಅಸ್ತವ್ಯಸ್ಥಗೊಂಡಿದೆ. ಮತ್ತೆ ಸಂಡೂರಿನ ದೇವರಗಿರಿ ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಕೇಂದ್ರ ಸರ್ಕಾರ ಅವಕಾಶ ನೀಡಿರುವುದು ಸರಿಯಲ್ಲ. ಇದನ್ನು ಸಂಘ ತೀವ್ರವಾಗಿ ಖಂಡಿಸಿದೆ.
ಎಸ್.ಆರ್.ಹಿರೇಮಠ ನೇತೃತ್ವದಲ್ಲಿ ಈ ಗಣಿಗಾರಿಕೆ ಅನುಮತಿ ನೀಡಿರುವುದರ ವಿರುದ್ಧ ಹೋರಾಟ ಹಮ್ಮಿಕೊಂಡಿದ್ದು, ಈ ಹೋರಾಟಕ್ಕೆ ರಾಜ್ಯ ರೈತ ಸಂಘ ಬೆಂಬಲ ಸೂಚಿಸಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.