ಸಿಎಂ ನಿವೇಶನ ಕೇಳಿರುವ ದಾಖಲೆ ಬಿಡುಗಡೆ
ಸಂಜೆವಾಣಿ ನ್ಯೂಸ್
ಮೈಸೂರು: ಆ.12:- ತಾವು ನಿವೇಶನಕ್ಕಾಗಿ ಯಾರಿಗೂ ಕೇಳಿಲ್ಲ ಎನ್ನುವ ಸಿದ್ದರಾಮಯ್ಯ ಅವರು ಹಿಂದೆ ಇಂಥz್ದÉೀ ನಿವೇಶನ ನೀಡುವಂತೆ ಮುಡಾಗೆ ಲಿಖಿತವಾಗಿ ಪತ್ರ ಬರೆದಿದ್ದಾರೆ ಎಂದು ಆರೋಪಿಸಿ ಆರ್‍ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ಪತ್ರವೊಂದನ್ನು ಬಿಡುಗಡೆ ಮಾಡಿದ್ದಾರೆ.
ಈ ದಾಖಲೆಯನ್ನು ಮಾಹಿತಿ ಹಕ್ಕು ಕಾಯಿದೆಯಡಿ ಪಡೆದುಕೊಂಡಿರುವ ಕೃಷ್ಣ, ಆ ಪತ್ರದಲ್ಲಿ ಸಿದ್ದರಾಮಯ್ಯ ಅವರು ಮುಡಾ ಅಧ್ಯಕ್ಷರಿಗೆ ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ಜಯನಗರ ತೊಣಚಿಕೊಪ್ಪಲ್ 2ನೇ ಹಂತ, ಎಂ ಬ್ಲಾಕ್‍ನಲ್ಲಿ ನಿವೇಶನ ಸಂಖ್ಯೆ 9, 50*80 ಅಳತೆಯ ನಿವೇಶನ ಕೊಟ್ಟಿದ್ದೀರಿ. ಈ ನಿವೇಶನಕ್ಕೆ ಬದಲಾಗಿ ಜಯನಗರ ಜಿ ಮತ್ತು ಎಚ್. ಬ್ಲಾಕ್‍ನಲ್ಲಿ ಖಾಲಿ ಇರುವ ನಿವೇಶನವನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಹೀಗಿದ್ದರೂ ನಾನು ಯಾರ ಬಳಿಯೂ ನಿವೇಶನ ಕೋರಿ ಅರ್ಜಿ ಸಲ್ಲಿಸಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾನೂನು ಉಲ್ಲಂಘನೆ ಆರೋಪ: ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಹೇಳುತ್ತಾರೆ. ಆದರೆ, ಪರಿತ್ಯಾಜನ ಪತ್ರದ ಮೂಲಕ ಭೂಮಿಯನ್ನು ಹಸ್ತಾಂತರ ಮಾಡಿಕೊಳ್ಳಬಾರದು ಎಂದು ಸರಕಾರದಿಂದ ಸುತ್ತೋಲೆ ಹೊರಡಿಸಿದ್ದರೂ, ಈ ಆದೇಶ ಉಲ್ಲಂಘಿಸಿ, ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಂದ ಪರಿತ್ಯಾಜನ ಪತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಅದಕ್ಕೆ ಸಂಬಂಧಿಸಿದ ದಾಖಲೆ ಪತ್ರ ಬಿಡುಗಡೆ ಮಾಡಿದ್ದಾರೆ. ಇಂತಹ ಹಲವಾರು ಸಾಕ್ಷ್ಯಾಧಾರಗಳು ಇದ್ದರೂ, ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.
ಜೆಡಿಎಸ್ ತಿರುಗೇಟು:
ನನಗೆ ಒಂದು ನಿವೇಶನವೂ ಇಲ್ಲ. ನಿವೇಶನಕ್ಕಾಗಿ ಯಾರ ಬಳಿಯೂ ಮನವಿ ಮಾಡಿಲ್ಲ ಎಂದು ಹೇಳಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ತಿರುಗೇಟು ನೀಡಿದೆ.
ಈ ಕುರಿತು ಜೆಡಿಎಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಿದ್ದರಾಮಯ್ಯನವರ ಲೇಟರ್ ಒಂದನ್ನು ಹಂಚಿಕೊಂಡಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಮೈಸೂರು ನಗರಾಭಿವೃದ್ಧಿ ಮಂಡಳಿಯಿಂದ ಜೆಡಿಎಸ್ ಈ ಲೇಟರ್ ಬಹಿರಂಗಗೊಳಿಸಿದೆ. ಗುಳಿಗೆ ಸಿದ್ದ ಒಳಗೆ ಮೇಯ್ದ ಈ ಮಾತು ನಿಮ್ಮಂಥವರನ್ನು ನೋಡಿಯೇ ಹೇಳಿರಬೇಕು ಸಿದ್ದರಾಮಯ್ಯನವರೇ ಎಂದು ಜೆಡಿಎಸ್ ಟೀಕಿಸಿದೆ.
ನನಗೆ ಒಂದು ನಿವೇಶನವೂ ಇಲ್ಲ. ಯಾವುದೇ ಲೆಟರ್ ಬರೆದಿಲ್ಲ ಎಂದು ಸುಳ್ಳು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಸಮಾಜವಾದಿ ಮುಖವಾಡ ತೊಟ್ಟು ನೀವು ಮಾಡಿರುವ ಅಕ್ರಮಗಳಿಗೆ ಈ ಲೆಟರ್ ಸಾಕ್ಷಿ ಎಂದು ವ್ಯಂಗ್ಯವಾಡಿದೆ.
ಬದಲಿ ನಿವೇಶನ ಕೋರಿ ನೀವೇ ಸ್ವತಃ ಬರೆದಿರುವ ಪತ್ರ, ನಿಮ್ಮದೇ ಸಹಿ ಇಷ್ಟು ಸಾಕಲ್ಲವೇ? ಇದು ನಿಮಗೆ ಕಪ್ಪು ಚುಕ್ಕೆ ಅಲ್ಲವೇ?, ದಿನ ಪತ್ರಿಕೆಗಳು, ಮಾಧ್ಯಮಗಳ ಸಂದರ್ಶನಗಳಲ್ಲಿ ನಾನು ಶುದ್ಧ ಹಸ್ತ, ಸಮಾಜವಾದಿ ಎಂದು ಸತ್ಯ ಹರಿಶ್ಚಂದ್ರನಂತೆ ಮಾತಾಡುವ ನಿಮ್ಮ ಅಸಲೀ ಬಂಡವಾಳ ಈಗ ಬಯಲಾಗಿದೆ. ದಲಿತರ ಜಮೀನು ಕಬಳಿಸಿರುವ ನೀವು ಪರಿಶಿಷ್ಟ ಸಮುದಾಯಕ್ಕೆ ವಂಚಿಸಿದ್ದೀರಿ, ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳುತ್ತಾ ನಾಡಿನ ಜನರಿಗೂ ನಂಬಿಕೆ ದ್ರೋಹ ಎಸಗಿದ್ದೀರಿ. ಇದೇನಾ ನಿಮ್ಮ ಶುದ್ಧವಾದ ರಾಜಕೀಯ ಜೀವನ ಎಂದು ಪ್ರಶ್ನಿಸಿದೆ.
ಸಿದ್ದರಾಮಯ್ಯ ಅವರೇ ನಿಮಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ಯಾವ ನೈತಿಕvಯೂ ಉಳಿದಿಲ್ಲ. ಮೊದಲು ರಾಜೀನಾಮೆ ಕೊಟ್ಟು ನಿರ್ಗಮಿಸಿ ಎಂದು ಜೆಡಿಎಸ್ ಆಗ್ರಹಿಸಿದೆ.