ಅಲೆಮಾರಿ ಸಮುದಾಯಕ್ಕೆ ಶಾಶ್ವತ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ
ಸಂಜೆವಾಣಿ ವಾರ್ತೆ
ಮಂಡ್ಯ :ಆ.12- ತಾಲೂಕಿನ ತುಂಬಕೆರೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇರುವಂತಹ ಅಲೆಮಾರಿ ಸಮುದಾಯಕ್ಕೆ ಶಾಶ್ವತ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ಒತ್ತಾಯಿಸಿದರು.
ತಾಲೂಕಿನ ತುಂಬಕೆರೆ ಅಲೆಮಾರಿ ಬಡಾವಣೆಯಲ್ಲಿ ಮಾನವ ಬಂಧುತ್ವ ವೇದಿಕೆ, ಕಾಯಕಯೋಗಿ ಫೌಂಡೇಷನ್, ಲಿಂಗಾಯಿತ ಮಹಾಸಭಾ ವತಿಯಿಂದ ನಡೆದ ಬಸವ ಪಂಚಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬದುಕನ್ನು ಅರಸುತ್ತಲೇ ಕಳೆದುಹೋಗುವ ಅಲೆಮಾರಿ ಜನಾಂಗಕ್ಕೆ ನೆಲೆ ಕಲ್ಪಿಸಬೇಕಾದದ್ದು ಸರ್ಕಾರದ ಆಧ್ಯ ಕರ್ತವ್ಯವಾಗಿದೆ. ತುಂಬಕೆರೆಯಲ್ಲಿ ವಾಸವಾಗಿರುವ ಅಲೆಮಾರಿಗಳಿಗೆ ಇದುವರೆವಿಗೂ ಜಾತಿ ಪ್ರಮಾಣ ಪತ್ರ ಮತ್ತು ನಿವೇಶನದ ಹಕ್ಕು ಪತ್ರಗಳು ದೊರೆತಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ವಹಿಸಬೇಕು. ಜೊತೆಗೆ ಅಲೆಮಾರಿಗಳ ಶಿಕ್ಷಣ, ಆರೋಗ್ಯದಂತಹ ಮೂಲಭೂತ ಅಗತ್ಯತೆಗಳಿಗೆ ಒತ್ತು ನೀಡಬೇಕು ಎಂದು ಹೇಳಿದರು.
ಬಸವ ಪಂಚಮಿ ಕಾರ್ಯಕ್ರಮ ಸಮಾಜದ ಅಭ್ಯುದಯಕ್ಕೆ ಪೂರಕವಾಗಿದೆ. ಮೌಢ್ಯದ ಹೆಸರಲ್ಲಿ ದಿನ ಬಳಕೆ ವಸ್ತುಗಳನ್ನು ವ್ಯರ್ಥ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಹಸಿದವರಿಗೆ ಅಪೌಷ್ಠಿಕತೆಯಿಂದ ಬಳಲುತ್ತಿರುವ ಅಸಹಾಯಕರಿಗೆ ನೆರವಾಗುವುದೇ ಶ್ರೇಷ್ಠವಾದ ಸೇವೆಯಾಗಿದೆ ಎಂದು ತಿಳಿಸಿದರು.
ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ. ಶಿವಕುಮಾರ್ ಮಾತನಾಡಿ, ಸಮಾನತೆಯನ್ನು ಸಾರಿದ ಬಸವಣ್ಣನವರ ಐಕ್ಯ ದಿನವಾದ ಇಂದು ಅವರ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದರ ಜೊತೆಗೆ ಮೌಢ್ಯದ ವಿರುದ್ಧ ಜಾಗೃತಿ ಮೂಡಿಸುವ ಮತ್ತು ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡುವ ಪ್ರಯತ್ನ ನಮ್ಮದಾಗಿದೆ ಎಂದರು.
ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಡಿ. ದೇವರಾಜ್‍ಕೊಪ್ಪ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕøತ ಕಾರಸವಾಡಿ ಮಹದೇವು, ಉಪನ್ಯಾಸಕ ಲೋಕೇಶ್, ಮುಖಂಡರಾದ ಜಯಸುಧಾ, ಸಿದ್ಧಶೆಟ್ಟಿ, ಕಲಾವಿದ ವೈರಮುಡಿ ಉಪಸ್ಥಿತರಿದ್ದರು. ಇದೇ ವೇಳೆ ಅಲೆಮಾರಿ ಮಕ್ಕಳಿಗೆ ಹಾಲು-ಹಣ್ಣು ವಿತರಿಸಲಾಯಿತು.