ಬ್ರಹ್ಮಾ ಕುಮಾರಿ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಅಪಾರ ಜನಪ್ರಿಯತೆ ಗಳಿಸಿದೆ: ಡಾ. ಬಿ.ಕೆ. ಮೃತ್ಯುಂಜಯ
ಸಂಜೆವಾಣಿ ನ್ಯೂಸ್
ಮೈಸೂರು,ಆ.12-ಬ್ರಹ್ಮಕುಮಾರಿ ಸಂಸ್ಥೆಯು ಕಳೆದ 88 ವರ್ಷಗಳಿಂದ ಜಾಗತಿಕ ಮಟ್ಟದಲ್ಲಿ ವ್ಯಕ್ತಿಗಳ ಆಧ್ಯಾತ್ಮಿಕ ಸಶಕ್ತೀಕರಣದ ಉದ್ದೇಶವನ್ನಿಟ್ಟುಕೊಂಡು ಹಲವಾರು ಆಯಾಮಗಳಿಂದ ಕೆಲಸ ಮಾಡುತ್ತಿದ್ದು ಅಪಾರ ಜನಪ್ರಿಯತೆಯನ್ನು ಗಳಿಸಿದೆ ಎಂದು ಸಂಸ್ಥೆಯ ಕಾರ್ಯಕಾರಿ ಕಾರ್ಯದರ್ಶಿ ಹಾಗೂ ಶಿಕ್ಷಣ ವಿಭಾಗದ ಅಧ್ಯಕ್ಷರೂ ಆದ ರಾಜಯೋಗಿ ಡಾ. ಬಿ. ಕೆ. ಮೃತ್ಯುಂಜಯಜೀ ರವರು ಬಣ್ಣಿಸಿದರು.
ಅವರು ಬ್ರಹ್ಮಕುಮಾರಿ ಸಂಸ್ಥೆಯ ಮೈಸೂರು ಉಪವಲಯದ ಮುಖ್ಯ ಕಛೇರಿಯಾದ ಯಾದವಗಿರಿಯಲ್ಲಿ ತಮ್ಮ 75 ನೇ ವರ್ಷದ ಹುಟ್ಟು ಹಬ್ಬದ ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಬ್ರಹ್ಮಕುಮಾರಿ ಸಂಸ್ಥೆಯು ಕಳೆದ 88 ವರ್ಷಗಳಿಂದ ಜಾಗತಿಕ ಮಟ್ಟದಲ್ಲಿ ವ್ಯಕ್ತಿಗಳ ಆಧ್ಯಾತ್ಮಿಕ ಸಶಕ್ತೀಕರಣದ ಉದ್ದೇಶವನ್ನಿಟ್ಟುಕೊಂಡು ಹಲವಾರು ಆಯಾಮಗಳಿಂದ ಕೆಲಸ ಮಾಡುತ್ತಿದ್ದು ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಈ ಸೇವೆಯನ್ನು ಗಮನಿಸಿ ವಿಶ್ವ ಸಂಸ್ಥೆಯು ಶಾಂತಿಯ ಪಾರಿತೋಷಕವನ್ನು ನೀಡಿ ಗೌರವಿಸಿದೆ ಹಾಗೂ ಯುನಿಸೆಫ್ ಮತ್ತು ಎಕೋಸಾಕ್ ವಿಭಾಗಗಳ ಸಲಹಾಗಾರನಾಗಿ ನೇಮಿಸಿದೆ ಎಂದು ತಿಳಿಸಿದರು.
ಸಮಾಜದಲ್ಲಿ ಶೋಷಿತರಿಗೆ ಸಾಂತ್ವನ ನೀಡುತ್ತಾ ದುರಭ್ಯಾಸ ಮತ್ತು ದುಶ್ಚಟಗಳಿಂದ ದೂರವಿದ್ದು ಸಮಾಜಮುಖಿ ಸೇವೆ ಮಾಡಲು ಸಂಸ್ಥೆಯು ಪ್ರೇರಣೆ ನೀಡುತ್ತದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ವಿಧಾನವನ್ನು ಬೋಧಿಸಿ ಶೈಕ್ಷಣಿಕವಾಗಿ ಮುಂದುವರೆಯುವ ಪೆÇ್ರೀತ್ಸಾಹವನ್ನು ನೀಡುತ್ತಾ ಜೀವನದಲ್ಲಿ ಬರುವ ಸೋಲುಗಳನ್ನು ಧೈರ್ಯದಿಂದ ಎದುರಿಸುವ ಕೌಶಲವನ್ನು ಕಲಿಸುತ್ತಿದೆ. ಮಹಿಳೆಯರಿಗೆ ಮಾನವೀಯ ಸಂಬಂಧಗಳ ಮಹತ್ವವನ್ನು ತಿಳಿಹೇಳಿ ಕುಟುಂಬದಲ್ಲಿ ಸಾಮರಸ್ಯವನ್ನು ಕಾಪಿಡುವ ಅವಶ್ಯಕತೆಯ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದೆ.
ಹೀಗೆ ಸಮಾಜದ ಸುಮಾರು ಇಪ್ಪತ್ತು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಾಗರಿಕರಿಗೆ ಜೀವನದ ಗುರಿ ಮತ್ತು ಉದ್ದೇಶವನ್ನು ತಿಳಿಸಿ, ಧ್ಯಾನವನ್ನು ಕಲಿಸಿ ಆಂತರಿಕವಾಗಿ ಶಕ್ತಿಶಾಲಿಯಾಗುವ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ ಎಂದು ತಿಳಿಸಿದರು.
ಬ್ರಹ್ಮಾ ಕುಮಾರಿ ಲಕ್ಷ್ಮೀಜಿಯವರು ಎಲ್ಲರ ಪರವಾಗಿ ಮೃತ್ಯುಂಜಯಜೀರವರನ್ನು ಸನ್ಮಾನಿಸಿ ಅಭಿನಂದಿಸಿದರು.