ಪುತ್ತೂರಿನಲ್ಲಿ ಬಂಟ ಮಹಿಳೆಯರಿಂದ ವಿದ್ಯಾಸಂಸ್ಥೆ-ಅಶೋಕ್ ರೈ

ಪುತ್ತೂರು: ಪೂರ್ವಪ್ರಾಥಮಿಕ ಶಾಲೆಯಿಂದ ಪಿಯುಸಿ ತನಕದ ವಿದ್ಯಾಸಂಸ್ಥೆಯೊಂದನ್ನು ಬಂಟ ಸಮಾಜದ ಮಹಿಳೆಯರ ಆಡಳಿತ ವ್ಯವಸ್ಥೆಯಲ್ಲಿ ತರುವ ಯೋಜನೆ ಇದೆ. ಇದಕ್ಕಾಗಿ ಈಗಾಗಲೇ ಪುತ್ತೂರಿನಲ್ಲಿ ಸುಮಾರು ಐದೂವರೆ ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಆದಷ್ಟು ಶೀಘ್ರದಲ್ಲಿ ಈ ಯೋಜನೆ ಕಾರ್ಯಗತವಾಗಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಶನಿವಾರ ಸಂಜೆ ಕೊಂಬೆಟ್ಟು ಬಂಟರಭವನದಲ್ಲಿ ನಡೆದ ‘ಆಟಿಡೊಂಜಿ ಬಂಟೆರೆ ಸೇರಿಗೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ‘ಬಂಟೆರೆ ಶಿರೋಮಣಿ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಬಂಟ ಸಮುದಾಯದಲ್ಲಿ ಶಾಲೆಯನ್ನು ಯಶಸ್ವಿಯಾಗಿ ನಡೆಸುವ ಶಕ್ತಿ-ಸಾಮರ್ಥ್ಯ ಇರುವ ಹಲವಾರು ಮಹಿಳೆಯರಿದ್ದಾರೆ. ಅವರಿಗಾಗಿಯೇ ಈ ಶಾಲಾ ಯೋಜನೆ ರೂಪಿಸಲಾಗಿದೆ. ಎಲ್‌ಕೆಜಿ ಯುಕೆಜಿ ಶಿಕ್ಷಣದಿಂದ ಪ್ರಾರಂಭವಾಗುವ ಈ ವಿದ್ಯಾಸಂಸ್ಥೆ ಪಿಯುಸಿ ತನಕ ಎಂಬುವುದು ಸದ್ಯದ ಚಿಂತನೆ. ಮುಂದೆ ಕೌಶಲ್ಯಾಧಾರಿತ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಕೆ ಸಂದರ್ಭ ಬಂದರೆ ಆ ಬಗ್ಗೆಯೂ ಯೋಚನೆ ಮಾಡಬಹುದು ಎಂದು ಅವರು ಹೇಳಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ ಸನ್ಮಾನ ಸ್ವೀಕರಿಸಿ ಮಾತನಾಡಿ, ಬಂಟ ಸಮುದಾಯ ಸನ್ಮಾನ ನೀಡುವ ಮೂಲಕ ಜವಾಬ್ದಾರಿಯನ್ನು ನೆನಪಿಸಿದೆ. ಗುರಿ ಮತ್ತು ಸಂಕಲ್ಪ ಸ್ಪಷ್ಟವಾಗಿದ್ದರೆ ಗೆಲುವು ಸಾಧ್ಯ. ನನ್ನ ಮುಂದೆ ಸ್ಪಷ್ಟವಾದ ಗುರಿ ಇದೆ ಎಂದರು.
ಮುಂಬಯಿ ಹೇರಂಭಾ ಗ್ರೂಫ್‌ಆಫ್ ಕಂಪೆನಿಯ ಮಾಲಕ ಕನ್ಯಾನ ಸದಾಶಿವ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ , ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಸನ್ಮಾನಿತ ಎಮ್.ಆರ್.ಜಿ ಗ್ರೂಪ್ಸ್‌ನ ಅಧ್ಯಕ್ಷ ಡಾ| ಕೆ.ಪ್ರಕಾಶ್ ಶೆಟ್ಟಿ, ಇಂಡಿಯನ್ ಸೋಶಿಯಲ್ ಆಂಡ್ ಕಲ್ಚರಲ್ ಸೆಂಟರ್ ಅಬುದಾಬಿ ಇದರ ಅಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಮಾತನಾಡಿದರು.
೧೪ ಮಂದಿ ಸಾಧಕರಿಗೆ ಚಿನ್ನದ ಪದಕ ಪ್ರಶಸ್ತಿ ಪ್ರದಾನ;
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೧೪ ಮಂದಿ ಸಾಧಕರಿಗೆ ಚಿನ್ನದ ಪದಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಶಾಸಕ ಅಶೋಕ್ ರೈ ಮತ್ತು ಅವರ ಪತ್ನಿ ಸುಮಾ ರೈ ಅವರಿಗೆ ಬಂಟೆರೆ ಶಿರೋಮಣಿ, ಪುಣ್ಚಪ್ಪಾಡಿ ಅರಿಯಡ್ಕ ಕೃಷ್ಣ ರೈ ಅವರಿಗೆ ಕಡಮಜಲು ಕೃಷಿ ಪ್ರಶಸ್ತಿ, ಮಾಜಿ ಶಾಸಕಿಯರಾದ ಶಕುಂತಳಾ ಶೆಟ್ಟಿ ಮತ್ತು ಮಲ್ಲಿಕಾ ಪ್ರಸಾದ್ ಅವರಿಗೆ ಬಂಟೆರೆ ಸಿರಿ ಪ್ರಶಸ್ತಿ, ಸುನಿಲ್ ಕುಮಾರ್ ಅವರಿಗೆ ಕ್ರೀಡಾ ಪ್ರಶಸ್ತಿ, ಜಗನ್ನಾಥ ರೈ ಮಾದೋಡಿ ಅವರಿಗೆ ಸಹಕಾರಿರಶ್ಮಿ ಪ್ರಶಸ್ತಿ, ಡಾ.ಎ.ಕೆ ರೈ ಅವರಿಗೆ ಬೂಡಿಯಾರ್ ವೈದ್ಯಕೀಯ ಪ್ರಶಸ್ತಿ, ಕುದ್ಕಾಡಿ ಶೀನಪ್ಪ ರೈ ಕೊಡೆಂಕೀರಿ ಅವರಿಗೆ ಸಮಾಜಸೇವಾ ಮಿತ್ರ ಪ್ರಶಸ್ತಿ, ಸಂತೋಷ್ ಕುಮಾರ್ ರೈ ನಳೀಲು ಅವರಿಗೆ ಪಂಚಮಿ ಉದ್ಯಮಸಿರಿ ಪ್ರಶಸ್ತಿ, ವಸಂತಕುಮಾರ ರೈ.ಬಿ ಅವರಿಗೆ ದೇಶಸೇವಾ ಅಗರಿ ಪ್ರಶಸ್ತಿ, ಸತೀಶ್ ರೈ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ, ಡಾ.ಆಶಾ ಶಂಕರ ಭಂಡಾರಿ ಅವರಿಗೆ ಅರಣ್ಯಮಿತ್ರ ಪ್ರಶಸ್ತಿ, ವಿದ್ಯಾರ್ಥಿನಿ ಧನುಜಾ ಅವರಿಗೆ ವಿದ್ಯಾ ಅರಿಯಡ್ಕ ಪ್ರಶಸ್ತಿ ಹಾಗೂ ವಿದ್ಯಾರ್ಥಿನಿ ಸ್ವಸ್ತಿ ಶೆಟ್ಟಿ ಅವರಿಗೆ ವಿದ್ಯಾ ಚನಿಲ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಉದ್ಯಮಿ ಎಮ್.ಆರ್.ಜಿ ಗ್ರೂಪ್ಸ್‌ನ ಅಧ್ಯಕ್ಷ ಡಾ| ಕೆ.ಪ್ರಕಾಶ್ ಶೆಟ್ಟಿ, ನೂತನ ಸಂಸದ ಕ್ಯಾ. ಬ್ರಿಜೇಶ್ ಚೌಟ ಮತ್ತು ಇಂಡಿಯನ್ ಸೋಶಿಯಲ್ ಆಂಡ್ ಕಲ್ಚರಲ್ ಸೆಂಟರ್ ಅಬುದಾಬಿ ಇದರ ಅಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ ಅವರನ್ನು ಈ ಸಂದರ್ಭದಲ್ಲಿ ವಿಶೇಷ ಸನ್ಮಾನ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆರ್ಥಿಕ ನೆರವು ನೀಡಲಾಯಿತು.
ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಗೀತಾ ಮೋಹನ್ ರೈ, ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ದಯಾನಂದ ಮನವಳಿಕೆ, ಲಕ್ಷ್ಮೀನಾರಾಯಣ, ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಶಶಿಕಿರಣ್ ರೈ, ರವಿಪ್ರಸಾದ್ ಶೆಟ್ಟಿ ಬನ್ನೂರು ಮತ್ತಿತರರು ಭಾಗಿಯಾಗಿದ್ದರು. ಮಮತಾ ಶೆಟ್ಟಿ ಮತ್ತು ಮನ್ಮಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.