ಆ. 18ರಂದು ವಿಶ್ವಕರ್ಮ ಸಮಾಜದಿಂದ ಪ್ರತಿಭಾ ಪುರಸ್ಕಾರ
ಕಲಬುರಗಿ:ಆ.11: ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಇದೇ ಆಗಸ್ಟ್ 18ರಂದು ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಪತ್ತಾರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಸಮಾಜದ ಹಿರಿಯ ಅನುಭವಿಗಳಾದ ಡಾ. ರಾಜಣ್ಣ, ಖ್ಯಾತ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದರು.
ಸಮಾಜವು ಕಾಲ ಕಾಲದಿಂದಲೂ ನಿರ್ಲಕ್ಷ್ಯಕ್ಕೆ ಒಳಪಡುತ್ತಿದೆ. ತಮ್ಮ ಬದುಕಿನುದ್ದಕ್ಕೂ ಲೋಕಕಲ್ಯಾಣಕ್ಕಾಗಿ ಬಯಸುತ್ತ ಯಾವುದೇ ಮತ, ಪಂಥಗಳಿಗೆ ಸೀಮಿತವಾಗಿರದೇ ತಮ್ಮ ಪಂಚವಿಧ ಶಿಲ್ಪಕಲೆಗಳಿಂದ ಮಾನವನ ಬದುಕಿಗೆ ಒಳಿತನ್ನು ಮಾಡುತ್ತಿರುವ ಉಪಕರಣಗಳು ಇತ್ತೀಚಿನ ದಿನಮಾನಗಳಲ್ಲಿ ಪಾಶ್ಚಾತ್ಯೀಕರಣಕ್ಕೆ ರೂಪುಗೊಂಡು ಕಲೆಯ ಅನೇಕ ಸಾಧನಗಳು ನಶಿಶಿ ಹೋಗುತ್ತಿವೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
ಕಬ್ಬಿಣ, ಶಿಲಾ, ಕಾಷ್ಟಶಿಲ್ಪ, ಕಂಚು, ಚಿನ್ನ, ಬೆಳ್ಳಿ ಶಿಲ್ಪ ಮುಂತಾದ ಪಂಚ ಕಸುಬುಗಳನ್ನು ಆಶ್ರಯಿಸಿದ ವಿಶ್ವಕರ್ಮ ಸಮಾಜ ತುಂಬಾ ದುರ್ಗತಿಯತ್ತ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಸುಬನ್ನು ನಂಬಿರುವ ಸಮಾಜದ ಶಿಲ್ಪಿಗಳು ರಾಜಾಶ್ರಯವಿಲ್ಲದೇ, ರಾಜಕೀಯ ಬೆಂಬಲ ಸಿಗದೇ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಇರುವ ಸುಮಾರು 28000 ಸಮಾಜ ಬಾಂಧವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯಕ್ಕೆ ಒಳಗಾಗಿರುವುದನ್ನು ಮನಗಂಡು 2008-2009ರಿಂದ ಇಂದಿನವರೆಗೆ ಸಮಾಜದ ಸಂಘಟನೆಗಾಗಿ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ಜಿಲ್ಲೆಯಾದ್ಯಂತ ನೆಲೆಸಿರುವ ನೌಕರರನ್ನು ಸಂಘಟಿಸಿ ಸಮಾಜವನ್ನು ಬಲಗೊಳಿಸಿ ಕ್ಷೇಮಾಭಿವೃದ್ಧಿ ಸಂಘವನ್ನು ಸ್ಥಾಪಿಸಿ ಪ್ರತಿ ವರ್ಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಸಮಾಜ ಎದುರಿಸುತ್ತಿರುವ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ಪಂಚ ಕಸುಬುಗಳಿಗಾಗಿ ಕಲಾ ಭವನ್ ನಿರ್ಮಾಣ ಮತ್ತು ಪಂಚ ಶಿಲ್ಪಗಳ ಅಧಿಕೃತ ಮಾರಾಟ ಮಳಿಗೆ, ವಿಶ್ವಕರ್ಮ ವಿದ್ಯಾರ್ಥಿ ವಸತಿ ನಿಲಯಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸುಮಾರು ಐದು ಎಕರೆ ನಿವೇಶನವನ್ನು ಬಹುದಿನಗಳ ಬೇಡಿಕೆಯನ್ನು ಮುಂದಿಟ್ಟಿದ್ದು, ಇಲ್ಲಿಯವರೆಗೂ ಯಾವುದೇ ರೀತಿಯಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಅನೇಕ ಸಮಾಜಗಳಿಗೆ ಸರ್ಕಾರ ನಿವೇಶನಗಳನ್ನು ಕೊಟ್ಟಿದ್ದು ನೋಡಿದ್ದೇವೆ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಸ್ಥಳೀಯ ಶಾಸಕರು ಬೇಡಿಕೆಗಳನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಇದೇ ಸೆಪ್ಟೆಂಬರ್ 17ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸುವರು. ಅದೇ ದಿನ ಆಚರಿಸಲ್ಪಡುವ ಜಿಲ್ಲಾ ವಿಶ್ವಕರ್ಮ ಪೂಜಾ ಮಹೋತ್ಸವಕ್ಕೆ ಮುಖ್ಯಮಂತ್ರಿಗಳು ಭಾಗವಹಿಸದೇ ಇರುವುದು ವಿಶ್ವಕರ್ಮ ಸಮಾಜಕ್ಕೆ ಅಸಮಾಧಾನವಿದೆ. ಜಿಲ್ಲಾಧಿಕಾರಿಗಳು ಅಂದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸುವ ಹಾಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಡಾ. ಕೆ. ಮೋನಪ್ಪ, ಪ್ರಧಾನ ಕಾರ್ಯದರ್ಶಿ ಪ್ರಾಣೇಶ್ ಬಡಿಗೇರ್, ಜನಾರ್ಧನ್ ಹೇಮನೂರ್, ಗಂಗಾಧರ್ ಎಂ. ಪೋದ್ದಾರ್, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶ್ರೀದೇವಿ ಪತ್ತಾರ್ ಮುಂತಾದವರು ಉಪಸ್ಥಿತರಿದ್ದರು.