ರಾಜ್ಯದಲ್ಲಿ ಒಳಮೀಸಲಾತಿ ಜಾರಿ ವಿಳಂಬವಾದರೆ ಮಾದಿಗ ಸಮಾಜದಿಂದ ಹೋರಾಟ
ಕಲಬುರಗಿ:ಆ.11:ಈಗಾಗಲೇ ಪರಿಶಿಷ್ಟರ ಒಳಮೀಸಲಾತಿಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯವು ತೀರ್ಪು ನೀಡಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೊಟ್ಟ ಭರವಸೆಯಂತೆ ಕೂಡಲೇ ಒಳ ಮೀಸಲಾತಿಯನ್ನು ಜಾರಿಗೆ ತರಬೇಕು. ವಿಳಂಬ ಮಾಡಿದಲ್ಲಿ ಹೋರಾಟ ರೂಪಿಸುವುದು ಅನಿವಾರ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಮಾಜಿ ರಾಜ್ಯ ಉಪಾಧ್ಯಕ್ಷ ಡಾ. ಗೋಪಾಲರಾವ್ ತಲಂಗಿ ಅವರು ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗ ಒಳ ಮೀಸಲಾತಿಯನ್ನು ಒದಗಿಸಿಕೊಡುವ ಅಧಿಕಾರವನ್ನು ಸರ್ವೋಚ್ಛ ನ್ಯಾಯಾಲಯವು ಆಯಾ ರಾಜ್ಯ ಸರ್ಕಾರಗಳಿಗ ಕೊಟ್ಟಿದೆ ಎಂದರು.
ರಾಜ್ಯದಲ್ಲಿ ಕಳೆದ 20 ವರ್ಷಗಳಿಂದ ಒಳಮೀಸಲಾತಿಗಾಗಿ ನಿರಂತರ ಹೋರಾಟ ಮಾಡಲಾಗುತ್ತಿದೆ. ಡಿ.ವಿ. ಸದಾನಂದಗೌಡ ಅವರು ಮುಖ್ಯಮಂತ್ರಿಗಳಾಗಿದ್ದಾಗ ಒಳಮೀಸಲಾತಿ ಕುರಿತು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು. ಆಯಾ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಶೇಕಡಾವಾರು 6ರಷ್ಟು ಮಾದಿಗ, ಉಪ ಜಾತಿ ಶೇಕಡಾ 5ರಷ್ಟು ಹೊಲೆಯ, ಶೇಕಡಾ 3ರಷ್ಟು ಲಂಬಾಣಿ, ಇತರೆ ಶೇಕಡಾ ಒಂದರಷ್ಟು ಮೀಸಲಾತಿಗೆ ಶಿಫಾರಸ್ಸು ಮಾಡಲಾಗಿತ್ತು. ರಾಜ್ಯ ಸರ್ಕಾರವು ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದೇ ವಿಳಂಬ ಕಾರ್ಯಹರಣ ಮಾಡಿದೆ ಎಂದು ಅವರು ದೂರಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವು ಒಳ ಮೀಸಲಾತಿ ನೀತಿಯನ್ನು ತಿದ್ದುಪಡಿ ಮಾಡಿ ಶೇಕಡಾ 6, ಐದೂವರೆ, ಶೇಕಡಾ ಒಂದರಷ್ಟು ನ್ಯಾಯಮೂರ್ತಿ ನಾಗಮೋಹನದಾಸ್ ಅವರ ವರದಿಯಂತೆ ಮಾಡಿ ಕೇಂದ್ರ ಸರ್ಕಾರಕ್ಕೆ ಕಳಿಸಲಾಗಿತ್ತು. ಆದಾಗ್ಯೂ, ಅದನ್ನು ಅನುಷ್ಠಾನಕ್ಕೆ ತರಲಿಲ್ಲ. ಕಳೆದ ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ನ್ಯಾಯಮೂರ್ತಿ ಎ.ಜೆ. ಸದಾಶಿವ್ ಆಯೋಗದ ವರದಿಯನ್ನು ಜಾರಿಗೊಳಿಸುವ ಕುರಿತು ಭರವಸೆ ನೀಡಿತ್ತು. ಈಗ ಸರ್ವೋಚ್ಛ ನ್ಯಾಯಾಲಯವೂ ಸಹ ತೀರ್ಪು ನೀಡಿ ರಾಜ್ಯ ಸರ್ಕಾರಕ್ಕೆ ಅಧಿಕಾರ ಕೊಟ್ಟಿದ್ದು, ಆದ್ದರಿಂದ ಯಾವುದೇ ಅಡೆತಡೆ ಇಲ್ಲದೇ ಕೊಟ್ಟ ಭರವಸೆಯಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಒಳಮೀಸಲಾತಿಯನ್ನು ಜಾರಿಗೆ ತರಬೇಕು. ಇಲ್ಲದೇ ಹೋದಲ್ಲಿ ಹೋರಾಟ ರೂಪಿಸುವುದು ಅನಿವಾರ್ಯ ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಹಿರಿಯ ಮುಖಂಡರಾದ ಸೈದಪ್ಪ ಹಾಗರಗಿ, ದೇವಿಂದ್ರ ಶೆಳ್ಳಗಿ, ಸಿದ್ಧಾರೂಢ ಆರ್. ಧುಮ್ಮನಸೂರ್, ಜೈರಾಜ್ ಎ. ಕಿಣಗಿ, ಆನಂದ್ ತೆಗನೂರ್ ಮುಂತಾದವರು ಉಪಸ್ಥಿತರಿದ್ದರು.