ಶರಣಬಸವೇಶ್ವರ ಸಂಸ್ಥಾನದಿಂದ ಮಹಿಳಾ ಸಬಲೀಕರಣ
ಕಲಬುರಗಿ:ಆ.11:ಶರಣಬಸವೇಶ್ವರ ಸಂಸ್ಥಾನವು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂದಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ.ಲಕ್ಷ್ಮೀ ಪಾಟೀಲ ಮಾಕಾ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ 30 ದಿನಗಳ ಸಾಂಸ್ಕøತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ರವಿವಾರ ಮಹಿಳಾ ಸಬಲೀಕರಣ ವಿಷಯ ಕುರಿತು ಮಾತನಾಡಿದರು.
ಮಹಿಳೆಯರಿಗೆ ಶಿಕ್ಷಣ ನೀಡಿದರೆ, ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳೆಯುತ್ತಾರೆ ಎಂದು ಮನಗಂಡು ಪುರುಷರಿಗೆ ಶಿಕ್ಷಣ ಸಿಕ್ಕುವುದು ದುರ್ಲಭವಾಗಿದ್ದ ಕಾಲದಲ್ಲಿ ಮಹಿಳೆಯರು ಪರದೆಯ ಹಿಂದೆ ಇರುತ್ತಿದ್ದ ಸಂದರ್ಭದಲ್ಲಿ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಸ್ತ್ರೀಯರನ್ನು ಸುಸಂಕೃತರನ್ನಾಗಿಸಲು ಕ್ರಿ.ಶ.1934 ರಲ್ಲಿ ಪ್ರಪ್ರಥಮವಾಗಿ ಹೆಣ್ಣುಮಕ್ಕಳ ಕನ್ನಡ ಶಾಲೆಯನ್ನು ತೆರೆದರು. ಟಾಂಗಾ-ಡಮಣಿಗಳನ್ನು ಕಳುಹಿಸಿಕೊಟ್ಟು ವಿದ್ಯಾರ್ಥಿಯರನ್ನು ಕರೆತರುವ ವ್ಯವಸ್ಥೆ ಮಾಡಿ ಅವರಿಗೆಲ್ಲ ಉಚಿತ ಶಿಕ್ಷಣ ನೀಡಿದರು. ಅಪ್ಪ ಅವರ ಕಾರ್ಯಗಳನ್ನು ಮನಗಂಡು ಅವರಿಗೆ ಸ್ತ್ರೀ ಶಿಕ್ಷಣದ ಬಗೆಗೆ ಇದ್ದ ಬಲವತ್ತರವಾದ ಒತ್ತಾಸೆಯು ವಿಧಿತಗೊಳ್ಳುತ್ತದೆ. ಇಂದಿನ ಕಾನೂನಿನ ಕಡ್ಡಾಯ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಅಪ್ಪ ಎಂಟು ದಶಕಗಳ ಪೂರ್ವದಲ್ಲಿಯೇ ಕಾರ್ಯರೂಪಕ್ಕೆ ತಂದುದು ಮಹತ್ವ ಸಾಧನೆ.
ಮಹಿಯರಲ್ಲಿ ಬೌದ್ಧಿಕ, ರಾಜಕೀಯ, ಸಾಮಾಜಿಕ , ಆರ್ಥಿಕ ಬಲವನ್ನು ಹೆಚ್ಚಿಸುವುದಕ್ಕೆ ಮಹಿಳಾ ಸಬಲೀಕರಣ, ಸಶಕ್ತತೆಯಾಗಿದೆ. ಸಬಲೀಕರಣ ಶಕ್ತತೆ ಎನ್ನುವುದು ಸಾಮಾನ್ಯವಾಗಿ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಬೆಳೆಯಿಸಿ, ಅವರ ಸಾಮಥ್ರ್ಯವನ್ನು ಹೆಚ್ಚಿಸುವುದೇ ಆಗಿರುತ್ತದೆ.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿಯವರು ಮಹಿಳೆಯರಿಗಾಗಿಯೇ ಮಹಾದೇವಿ ಕನ್ಯಾ ಪ್ರೌಢಶಾಲೆ, ಗೋದುತಾಯಿ ಇಂಜಿನೀಯರಿಂಗ್, ಗೋದುತಾಯಿ ಪದವಿ ಮಹಾವಿದ್ಯಾಲಯ, ಗೋದುತಾಯಿ ಶಿಕ್ಷಣ ಮಹಾವಿದ್ಯಾಲಯ, ಮುಕ್ತಾಂಬಿಕಾ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯ, ಮುಕ್ತಾಂಬಿಕಾ ಬಿಬಿಎಂ, ಬಿಸಿಎ ಹೀಗೆ ಅನೇಕ ಶಾಲಾ ಕಾಲೇಜುಗಳಿಗೆ ಮಹಿಳೆಯರ ಹೆಸರುಗಳನ್ಮು ಇಟ್ಟು ಈ ಭಾಗದ ಮಹಿಳೆಯರ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಶರಣಬಸವೇಶ್ವರ ಸಂಸ್ಥಾನ ಮಹಿಳೆಯರ ಸಬಲೀಕರಣಕ್ಕೆ ಹಗಲಿರುಳು ಕೆಲಸ ಮಾಡುತ್ತಿದೆ.
ಇಲ್ಲಿ ಶಿಕ್ಷಣ ಪಡೆದ ಸಾವಿರಾರು ಮಹಿಳೆ ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಶೇ.70 ಪ್ರತಿಶತ ಮಹಿಳೆಯರಿಗೆ ಸಂಸ್ಥೆಯಲ್ಲಿ ಕೆಲಸ ನೀಡಿ ಪೂಜ್ಯ ಡಾ.ಅಪ್ಪಾಜಿ ಮತ್ತು ಡಾ.ಅವ್ವಾಜಿಯವರು ಮಹಿಳೆಯರು ಬೆಳೆಯುವುದಕ್ಕೆ ಕಾರಣರಾಗಿದ್ದಾರೆ. ಪುರುಷರ ಸರಿಸಮಾನವಾಗಿ ಮಹಿಳೆ ಬೆಳೆಯುತ್ತಿದ್ದಾಳೆ. ಶೇ.60 ಪ್ರತಿಶತ ಮಹಿಳೆಯರು ಪಿಹೆಚ್.ಡಿ ಪದವಿ ಪಡೆದು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ . ಸಂಸ್ಥಾನದಲ್ಲಿ ಉನ್ನತ ಹುದ್ದೆಗಳಲ್ಲಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಸರಕಾರ ಮಾಡದ ಕೆಲಸ ಶರಣಬಸವೇಶ್ವರ ಸಂಸ್ಥಾನ ಮಾಡುತ್ತಾ ಬಂದಿದೆ. ಶಿಕ್ಷಣ ಮಾತ್ರವಲ್ಲ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರು ಸ್ವಾವಂಬಿಯಾಗಿ ಬದುಕಲು ಶರಣಬಸವೇಶ್ವರ ಸಂಸ್ಥಾನ ಟೊಂಕ ಕಟ್ಟಿ ನಿಂತಿದೆ ಎಂದು ಹೇಳಿದರು.