ಪಿಂಚಣಿ ಸೌಲಭ್ಯ ನೀಡಲು ಸಿಂಪಿ ಒತ್ತಾಯ
ಕಲಬುರಗಿ,ಆ.11-ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಹತ್ತು ವರ್ಷ ದಿನಗೂಲಿ ಸೇವೆ ಸಲ್ಲಿಸಿ ಸಕ್ರಮಗೊಂಡ ನಿವೃತ್ತ ನೌಕರರಿಗೆ 7-8 ವರ್ಷಗಳಾದರೂ ಪಿಂಚಣಿ ಸೌಲಭ್ಯ ನೀಡದೇ ಇರುವುದಕ್ಕೆ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನಿವೃತ್ತ ನೌಕರರ ಸಂಘದ ಅಧ್ಯಕ್ಷ ವೀರಭದ್ರ ಸಿಂಪಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಅವರು, ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಹತ್ತು ವರ್ಷ ದಿನಗೂಲಿ ಸೇವೆ ಸಲ್ಲಿಸಿ ಸಕ್ರಮಗೊಂಡು ನಿವೃತ್ತರಾದ ಸುಮಾರು 800 ಜನ ನೌಕರರಿದ್ದಾರೆ. ನಿವೃತ್ತ ನೌಕರರ ಪಿಂಚಣಿ ಸೌಲಭ್ಯಕ್ಕಾಗಿ ಸರ್ಕಾರದ ಆದೇಶ ಸಂಖ್ಯೆ 248/ಎ ರಂತೆ ಅರ್ಹತಾದಾಯಕ ಸೇವೆ ಸೇರಿ ಕೊಡಬೇಕಿದ್ದದ್ದು, 7-8 ವರ್ಷ ಕಳೆದರೂ ನೀಡದೆ ವಿಳಂಭ ನೀತಿ ಅನುಸರಿಸಲಾಗುತ್ತಿದೆ. ಆದ್ದರಿಂದ ಸರ್ಕಾರ ಮಹಾನಗರ ಪಾಲಿಕೆಗಳಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿ ಸಕ್ರಮಗೊಂಡ ನಿವೃತ್ತ ನೌಕರರಿಗೆ ಕೂಡಲೇ ಪಿಂಚಣಿ ಸೌಲಭ್ಯ ಒದಗಿಸಲು ಅಗತ್ಯವಾದ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.